ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು 2023 | ಎಲ್‌.ವೈ. ರಾಜೇಶ್ - ಕರ್ತವ್ಯದ ಜೊತೆ ಸಮಾಜಮುಖಿ ಕೆಲಸ

Last Updated 1 ಜನವರಿ 2023, 4:37 IST
ಅಕ್ಷರ ಗಾತ್ರ

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****

ಹೆಸರು: ಎಲ್‌.ವೈ. ರಾಜೇಶ್

ವೃತ್ತಿ: ಇನ್‌ಸ್ಪೆಕ್ಟರ್

ಸಾಧನೆ: ಕ್ಯೂಆರ್‌ ಕೋಡ್ ಆಧರಿತ ದರ್ಪಣ ವ್ಯವಸ್ಥೆಯ ಜಾರಿ

ಬಂಡೆಪಾಳ್ಯ ಠಾಣೆ ಇನ್‌ಸ್ಪೆಕ್ಟರ್ ಎಲ್‌.ವೈ. ರಾಜೇಶ್, ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನವರು. ವಕೀಲರಾಗಿ ವೃತ್ತಿ ಆರಂಭಿಸಿದ್ದ ಇವರು, 1998ನೇ ಬ್ಯಾಚ್‌ ಪಿಎಸ್‌ಐ ಆಗಿ ಪೊಲೀಸ್ ಇಲಾಖೆ ಸೇರಿದ್ದಾರೆ. ತಂದೆ ಲಕ್ಷ್ಮಯ್ಯ ಹಾಗೂ ತಾಯಿ ಯಲ್ಲಮ್ಮ.

ಹೊರ ರಾಜ್ಯದವರನ್ನು ಪ್ರತಿ ಭಾನುವಾರ ಒಂದೆಡೆ ಸೇರಿಸಿ, ಶಿಕ್ಷಕರಿಂದ ಕನ್ನಡದ ಪಾಠ ಮಾಡಿಸುತ್ತಿದ್ದರು. ಠಾಣೆಗೆ ಬರುವ ಹಿಂದಿ–ಇಂಗ್ಲಿಷ್ ಭಾಷಿಕರಿಗೆ, ‘30 ದಿನಗಳಲ್ಲಿ ಕನ್ನಡ ಕಲಿಯಿರಿ’ ಪುಸ್ತಕ ನೀಡುತ್ತಿದ್ದರು. ಎಸ್ಸೆಸ್ಸೆಲ್ಸಿ ಅನ್ನುತ್ತೀರ್ಣವಾಗುವ ವಿದ್ಯಾರ್ಥಿಗಳನ್ನು ಗುರುತಿಸಿ, ‘ದಾರಿದೀಪ’ ಹೆಸರಿನಲ್ಲಿ ಶಿಕ್ಷಕರಿದ ಉಚಿತ ಪಾಠ ಮಾಡಿಸುತ್ತಿದ್ದಾರೆ.

ಪೊಲೀಸರ ಕೆಲಸದ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲು ಕ್ಯೂ ಆರ್‌ ಕೋಡ್ ಆಧರಿತ ದರ್ಪಣ ವ್ಯವಸ್ಥೆ ಜಾರಿಗೊಳಿಸಿದ್ದಾರೆ. ಈ ವ್ಯವಸ್ಥೆ ಆಗ್ನೇಯ ವಿಭಾಗದ ಎಲ್ಲ ಠಾಣೆಗಳಿಗೂ ವಿಸ್ತರಣೆ ಆಗಿದೆ.

ದೇವನಹಳ್ಳಿ ಸಂಚಾರ ಠಾಣೆಯಲ್ಲಿದ್ದಾಗ ‘ಗೋಲ್ಡನ್ ಅವರ್’ ವ್ಯವಸ್ಥೆ ಜಾರಿಗೆ ತಂದು ಗಾಯಾಳುಗಳಿಗೆ ತ್ವರಿತ ಚಿಕಿತ್ಸೆ ಸಿಗುವಂತೆ ಮಾಡಿದ್ದರು. ಸೈಬರ್ ಕ್ರೈಂ ಬಗ್ಗೆ ಜಾಗೃತಿ ಕಿರುಚಿತ್ರ ನಿರ್ಮಿಸಿದ್ದರು.

ಸ್ನೇಹಿತರ ಸಹಕಾರದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೊಡಿಸುತ್ತಿದ್ದಾರೆ. ಸರ್ಕಾರಿ ಶಾಲೆಯ ಪ್ರತಿಭಾವಂತ ಮಕ್ಕಳನ್ನು ದತ್ತು ಪಡೆದು ಉನ್ನತ ವ್ಯಾಸಂಗದವರಿಗೆ ಶಿಕ್ಷಣದ ಖರ್ಚು ಭರಿಸುತ್ತಿದ್ದಾರೆ. ಕರ್ತವ್ಯದಲ್ಲೂ ಚುರುಕಾಗಿರುವ ಇವರಿಗೆ 2017ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದೆ.

ಆಲ್‌ ಇಂಡಿಯಾ ಪೊಲೀಸ್ ಡ್ಯೂಟಿ ಮೀಟ್‌ನಲ್ಲೂ ಎರಡು ಪದಕ ಪಡೆದಿದ್ದ ರಾಜೇಶ್, ನಗದು ಬಹುಮಾನವಾಗಿ ಬಂದ ₹ 5 ಲಕ್ಷವನ್ನು ಪ್ರತಿಭಾವಂತ ಮಕ್ಕಳ ಓದಿಗೆ ವ್ಯಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT