ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು 2023 | ರವಿಕುಮಾರ್ - ಹೋರಾಟವೇ ಇವರ ಬದುಕು

Last Updated 1 ಜನವರಿ 2023, 5:13 IST
ಅಕ್ಷರ ಗಾತ್ರ

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****

ಹೆಸರು: ರವಿಕುಮಾರ್ ಕಂಚನಹಳ್ಳಿ

ವೃತ್ತಿ: ಸಾಮಾಜಿಕ ಹೋರಾಟಗಾರ, ಮಾಹಿತಿ ಹಕ್ಕು ಕಾರ್ಯಕರ್ತ

ಸಾಧನೆ: ಮೆಜೆಸ್ಟಿಕ್ ಅಂಡರ್‌ಪಾಸ್‌ ವ್ಯಾಪಾರಿಗಳ ಒತ್ತುವರಿ ತೆರವಿಗಾಗಿ ಹೋರಾಟ

ಮಾಹಿತಿ ಹಕ್ಕು ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ರವಿಕುಮಾರ್ ತಮ್ಮ ಸಾಮಾಜಿಕ ಹೋರಾಟಗಳ ಮೂಲಕ ಗಮನ ಸೆಳೆಯುತ್ತಿರುವ ಯುವಕ. ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕಂಚನಹಳ್ಳಿಯವರು.

ಬೆಂಗಳೂರಿನ ಮೆಜೆಸ್ಟಿಕ್‌ ಅಂಡರ್‌ಪಾಸ್‌ನಲ್ಲಿ ವ್ಯಾಪಾರಿಗಳ ಒತ್ತುವರಿ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಅದನ್ನು ತೆರವುಗೊಳಿಸಲು ಕಾರಣರಾಗಿದ್ದು ಇವರೇ. ಇ.ಡಿ. ಅಧಿಕಾರಿಗಳಿಂದ ಡಿ.ಕೆ. ಶಿವಕುಮಾರ್‌ ಬಂಧನದ ವೇಳೆ ಅವರ ಬೆಂಬಲಿಗರು ನಡೆಸಿದ ದಾಂದಲೆಯಿಂದ ಆದ ನಷ್ಟವನ್ನು ಅವರಿಂದಲೇ ವಸೂಲಿ ಮಾಡುವಂತೆ ಇವರು ಹೈಕೋರ್ಟ್‌ಗೆ ಅರ್ಜಿ ಹಾಕಿದ್ದು, ಹೈಕೋರ್ಟ್ ಸೂಚನೆಯಂತೆ ಸದ್ಯ ನಿವೃತ್ತ ನ್ಯಾಯಾಧೀಶರ ಸಮ್ಮುಖದಲ್ಲಿ ತನಿಖೆ ನಡೆದಿದೆ.

ಜಿಲ್ಲಾ ಮಟ್ಟದಲ್ಲೂ ಸಾಕಷ್ಟು ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಕನಕಪುರ ಪೇಟೆಕೆರೆ ಉಳಿವಿನ ಹೋರಾಟ ಅದಕ್ಕೊಂದು ಉದಾಹರಣೆ. ಅನೇಕ ಹಗರಣಗಳನ್ನು ದಾಖಲೆ ಸಮೇತ ಬಯಲಿಗೆ ಎಳೆದಿದ್ದು, ಅದಕ್ಕೆ ಕಾನೂನಾತ್ಮಕವಾಗಿಯೂ ಹೋರಾಟ ನಡೆಸುತ್ತಿದ್ದಾರೆ. ತಮ್ಮ ಪ್ರಕರಣಗಳಲ್ಲಿ ತಾವೇ ವಾದ ಮಂಡಿಸುವುದು ಅವರ ವಿಶೇಷ. ಈ ಹೋರಾಟಗಳ ಸಲುವಾಗಿ ಇವರ ಮೇಲೆ ಹಲವು ಬಾರಿ ಹಲ್ಲೆ, ಕೊಲೆ ಯತ್ನಗಳೂ ನಡೆದಿವೆ. ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದಾರೆ. ಆದರೂ, ಛಲ ಬಿಟ್ಟುಕೊಡದೇ ತಮ್ಮ ಕಾರ್ಯ ಮುಂದುವರಿಸಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್‌ನಿಂದ ಬಿಎಫ್ಎ ಪದವಿ ಪಡೆದಿರುವ ರವಿಕುಮಾರ್ ಕಲಾವಿದನಾಗಿ ಬದುಕು ರೂಪಿಸಿಕೊಳ್ಳಬೇಕಿತ್ತು. ಆದರೆ, ತಮ್ಮ ಸುತ್ತಲಿನ ಅನ್ಯಾಯದ ವಿರುದ್ಧ ಸಿಡಿದೇಳುವ ಮನೋಭಾವವೇ ಅವರನ್ನು ಸಾಮಾಜಿಕ ಹೋರಾಟಕ್ಕೆ ಪ್ರೇರೇಪಿಸಿತು. 2012ರಿಂದ ಅವರು ಈ ಬಗೆಯ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT