ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು 2023 | ನಹಿದಾ ಜಮ ಜಮ್ - ಜನರ ಪ್ರೀತಿಯ ಅಧಿಕಾರಿ

Last Updated 1 ಜನವರಿ 2023, 5:30 IST
ಅಕ್ಷರ ಗಾತ್ರ

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****
ಹೆಸರು: ನಹಿದಾ ಜಮ ಜಮ್

ವೃತ್ತಿ: ತಹಶೀಲ್ದಾರ್

ಸಾಧನೆ: ಆಡಳಿತಾತ್ಮಕ ಕೆಲಸಗಳಲ್ಲಿ ಜನಸ್ನೇಹಿ, ಆತ್ಮೀಯ ವರ್ತನೆ

ವೃದ್ಧರು, ಬಡವರನ್ನು ಕಂಡರೆ ಅದೇನೋ ಪ್ರೀತಿ. ಕಚೇರಿ ಒಳಕ್ಕೆ ಕಾಲಿಡುವ ಮುನ್ನ ಆವರಣದ ಕಡೆಗೆ ಒಮ್ಮೆ ಕಣ್ಣಾಡಿಸುತ್ತಾರೆ. ವಯಸ್ಸಾದವರು ಕಚೇರಿ ಆವರಣದಲ್ಲಿ ಕುಳಿತಿರುವುದು ಕಣ್ಣಿಗೆ ಬಿದ್ದರೆ ತಕ್ಷಣ ಅವರಿದ್ದಲ್ಲಿಗೆ ಹೋಗಿ ಅಕ್ಕರೆಯಿಂದ ಮಾತನಾಡಿಸುತ್ತಾರೆ. ‘ಯಾತಕ್ಕಾಗಿ ಬಂದಿದ್ದೀರಿ, ಏನು ಕೆಲಸವಾಗಬೇಕಿದೆ. ಬನ್ನಿ ನಾನು ಮಾಡಿಕೊಡುತ್ತೇನೆ’ ಎಂದು ಅವರ ಮನವಿ ಹಿಡಿದು ತಾವೇ ಸಂಬಂಧಪಟ್ಟ ವಿಭಾಗಕ್ಕೆ ಹೋಗಿ ವಿಚಾರಣೆ ಮಾಡಿ, ಕೆಲಸ ಮಾಡಿಸುವುದನ್ನು ಕಂಡವರಿಗೆ ಅಚ್ಚರಿ.

ದಿನನಿತ್ಯ ತಮ್ಮ ಸಮಸ್ಯೆಗಳನ್ನು ಹೊತ್ತು ಬರುವ ಸಾರ್ವಜನಿಕರಿಗೆ ಒಬ್ಬ ಅಧಿಕಾರಿಯಾಗಿ ಹೀಗೂ ಕೆಲಸ ಮಾಡಬಹುದು ಎಂದು ತೋರಿಸಿ ಮನೆ ಮಾತಾದವರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತಹಶೀಲ್ದಾರ್ ನಹಿದಾ ಜಮ ಜಮ್.

ಇವರ ಕಾರ್ಯವೈಖರಿ ಕಂಡ ಅದೆಷ್ಟೋ ಜನರು ಬೆರಗಾಗಿದ್ದಾರೆ. ಜನಸಾಮಾನ್ಯರ ಕೆಲಸ, ಕಾರ್ಯಗಳನ್ನು ಮುಂದೆ ನಿಂತು ಮಾಡಿಸಿಕೊಡುತ್ತಾರೆ. ಸ್ವಂತದವರಂತೆ ಆತ್ಮೀಯವಾಗಿ ಮಾತನಾಡಿಸುತ್ತಾರೆ. ತಾವೇ ಕಡತ ಹಿಡಿದು ಕಚೇರಿ ತುಂಬೆಲ್ಲಾ ಓಡಾಡುತ್ತಾರೆ. ಯಾರಾದರೂ ತಮ್ಮ ಊರಿನಲ್ಲಿ ಸಮಸ್ಯೆ ಇದೆ ಎಂದರೆ ಸಾಕು, ಆಗಲೇ ’ನಡೆಯಿರಿ ಹೋಗೋಣ‘ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಲ್ಲೇ ಬಗೆಹರಿಸುವ ಪ್ರಯತ್ನ ಮಾಡುವುದು ಜನರಿಗೆ ಖುಷಿಯ ಸಂಗತಿ.

ತಹಶೀಲ್ದಾರ್ ನಹಿದಾ ಜಮ್ ಜಮ್ ಸೇವೆಗೆ ಸೇರಿದ ನಂತರ ಮೊದಲ ಬಾರಿಗೆ 2019ರಲ್ಲಿ ಶಿರಾ ತಹಶೀಲ್ದಾರ್ ಆಗಿ ಕೆಲಸ ನಿರ್ವಹಿಸಿದ್ದರು. ಈ ವೇಳೆ 2020ರಲ್ಲಿ ಕೋವಿಡ್ ಆವರಿಸಿದ ಸಂದರ್ಭದಲ್ಲಿ ಗರ್ಭಿಣಿ ಎಂಬುದನ್ನು ಮರೆತು ಶಿರಾದಲ್ಲಿ ಸಾಮಾನ್ಯ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಗಮನ ಸೆಳೆದಿದ್ದರು. ಕೋವಿಡ್ ತೀವ್ರ ಸ್ವರೂಪದಲ್ಲಿ ಹರಡುವ ವೇಳೆ ಗರ್ಭಿಣಿಯಾಗಿದ್ದರೂ ಮನೆಯಲ್ಲಿ ಕೂರದೇ ಇಡೀ ತಾಲ್ಲೂಕನ್ನು ಸುತ್ತುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದರು. ಇದರಿಂದಾಗಿ ಜನ ಹಾಗೂ ಇಲಾಖೆ ಮೆಚ್ಚುಗೆಗೂ ಪಾತ್ರರಾಗಿದ್ದರು.

2021ರ ಆಗಸ್ಟ್ ತಿಂಗಳಲ್ಲಿ ಕೊರಟಗೆರೆ ವರ್ಗಾವಣೆಯಾಗಿ ಬಂದ ನಂತರ ಜನರ ನಾಡಿಮಿಡಿತ ಅರಿತು ಸಮಸ್ಯೆಗಳನ್ನು ಪರಿಹರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಬಹಳ ವರ್ಷಗಳಿಂದ ಜಟಿಲ ಸಮಸ್ಯೆಯಾಗಿದ್ದ ಬಗರ್‌ಹುಕುಂ ಸಾಗುವಳಿ ಹಕ್ಕುಪತ್ರ ನೀಡುವಲ್ಲಿ ಕಠಿಣ ಕ್ರಮ ಕೈಗೊಂಡು ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT