ಬುಧವಾರ, ಸೆಪ್ಟೆಂಬರ್ 22, 2021
29 °C
ಹೈಕಮಾಂಡ್ ಮುಕ್ತ ಹಸ್ತ ನೀಡಿದರೆ ಆಡಳಿತ ಸುಗಮ

ಪ್ರಜಾವಾಣಿ ಸಂವಾದ: ‘ಭ್ರಷ್ಟಾಚಾರ ಹತ್ತಿಕ್ಕಿ, ಬೆಲೆ ನಿಯಂತ್ರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯದಲ್ಲಿ ಮಿತಿ ಮೀರಿರುವ ಭ್ರಷ್ಟಾಚಾರ ಮತ್ತು ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿರುವ ಸನ್ನಿವೇಶದಲ್ಲಿ ಪಾರದರ್ಶಕ ಆಡಳಿತ ನಡೆಸುವ ಹೊಣೆಗಾರಿಕೆಯು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದಿರುವ ಅತಿ ದೊಡ್ಡ ಸವಾಲು. ದಕ್ಷ ಸಚಿವ ಸಂಪುಟ ರಚಿಸಲು ಮತ್ತು ಸುಗಮವಾಗಿ ಆಡಳಿತ ನಡೆಸಲು ಹೈಕಮಾಂಡ್‌ ಮುಕ್ತ ಸ್ವಾತಂತ್ರ್ಯ ನೀಡಬೇಕು. ಆಗ ಮಾತ್ರ ಅಲ್ಪಮಟ್ಟಿಗೆ ರಾಜಕೀಯ ಗೊಂದಲ ನಿವಾರಣೆಯಾಗಿ ವ್ಯವಸ್ಥಿತವಾದ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯ’. 

ಇದು ‘ಪ್ರಜಾವಾಣಿ’ ಬುಧವಾರ ’ಹೊಸ ಮುಖ್ಯಮಂತ್ರಿಯ ಮುಂದಿರುವ ಸವಾಲುಗಳೇನು? ಕುರಿತು ಆಯೋಜಿಸಿದ್ದ ಸಂವಾದದಲ್ಲಿ ಕೇಳಿ ಬಂದ ಮಾತುಗಳು. ಅಂಕಣಕಾರ ಕ್ಯಾಪ್ಟನ್‌ ಜಿ.ಆರ್‌. ಗೋಪಿನಾಥ್‌, ಬಿಜೆಪಿ ಮುಖಂಡ ಡಾ. ವಾಮನ ಆಚಾರ್ಯ, ವಿಧಾನಪರಿಷತ್‌ನ ಜೆಡಿಎಸ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ವಿಧಾನಪರಿಷತ್‌ನ ಕಾಂಗ್ರೆಸ್‌ ಸದಸ್ಯ ಮೋಹನ್‌ ಕೊಂಡಜ್ಜಿ ಅವರು ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ರೂಪ ಇಲ್ಲಿದೆ.

‘ರಾಜಕೀಯ ಗೊಂದಲ ನಿವಾರಣೆಯಾಗಬೇಕು’

ಪ್ರಬುದ್ಧತೆ ಹೊಂದಿರುವ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿ. ಬಿಜೆಪಿಯ ಪ್ರಗತಿಪರ ಮತ್ತು ಮೃದುವಾದ ಹಾಗೂ ಜಾತ್ಯತೀತ ವ್ಯಕ್ತಿ. ಆದರೆ, ಬಿಜೆಪಿಯಲ್ಲೇ ಅವರನ್ನು ಕೆಳಗೆ ಇಳಿಸುವವರು ಇದ್ದಾರೆ. ಹೀಗಾಗಿ, ಪಕ್ಷವನ್ನು ಒಗ್ಗೂಡಿಸುವ ರಾಜಕೀಯ ಸವಾಲು, ಬೊಮ್ಮಾಯಿ ಅವರಿಗೆ ಇರುವ ಮೊದಲನೇ ಸವಾಲು.

ರಾಜ್ಯದ ಅರ್ಥಿಕ ಸ್ಥಿತಿ ಎದುರಿ ಸುವುದು ಎರಡನೇ ಸವಾಲು. ಜತೆಗೆ, ಕೋವಿಡ್‌–19ನ ಮತ್ತೊಂದು ಅಲೆ ಎದುರಿಸುವುದು ಮೂರನೇ ಸವಾಲು.

ಹೈಕಮಾಂಡ್‌ ಸಂಸ್ಕೃತಿ ಪ್ರಜಾಪ್ರಭುತ್ವಕ್ಕೆ ಅತಿ ದೊಡ್ಡ ಅಪಾಯ. ದಕ್ಷ ಆಡಳಿತ ನಡೆಸಲು ಹೈಕ ಮಾಂಡ್‌ ಬೊಮ್ಮಾಯಿ ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು. ಸರ್ಕಾರಿ ಇಲಾಖೆಗಳಲ್ಲಿ ಮಿತಿಮೀರಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾಗಿದೆ.

–ಕ್ಯಾಪ್ಟನ್‌ ಜಿ.ಆರ್‌. ಗೋಪಿನಾಥ್‌, ಅಂಕಣಕಾರ

***

‘ಲಿಬರಲ್‌ ನಡವಳಿಕೆಯ ಬೊಮ್ಮಾಯಿ ಆಡಳಿತ ಕುತೂಹಲ ಮೂಡಿಸಿದೆ’

ಬೊಮ್ಮಾಯಿ ಅವರಿಗೆ ರಾಜಕೀಯ ಸವಾಲುಗಳೇ ಹೆಚ್ಚು. ಆರ್‌ಎಸ್‌ಎಸ್‌ಯೇತರ ಮತ್ತು ಬಿಜೆಪಿ ಮೂಲದವರಲ್ಲದ ಬೊಮ್ಮಾಯಿ ಅವರು ’ಲಿಬರಲ್‌’ ನಡವಳಿಕೆ ಹೊಂದಿದ್ದಾರೆ. ಹೀಗಾಗಿ, ಆಡಳಿತ ಹೇಗೆ ನಡೆಸುತ್ತಾರೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ನೋಡಬೇಕಾಗಿದೆ.

ಯಡಿಯೂರಪ್ಪ ಅವರಿಗೆ ಎಲ್ಲ ಲಿಂಗಾಯತ ಉಪಜಾತಿಗಳು ಬೆಂಬಲ ನೀಡಿದ್ದವು. ಯಡಿಯೂರಪ್ಪ ಅವರ ‘ಇಮೇಜ್‌’ ಬೊಮ್ಮಾಯಿ ಅವರಿಗೆ ಬರುತ್ತದೆ ಎಂದು ಹೇಳಲಾಗದು. ಬೊಮ್ಮಾಯಿ ಅವರದು ಮೃದು ಧೋರಣೆ ಹೊಂದಿರುವ ವ್ಯಕ್ತಿತ್ವ. ರಾಜಕೀಯ, ಆರ್ಥಿಕ ಸವಾಲುಗಳ ಜತೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಸವಾಲು ಇದೆ.

ಮೋಹನ್‌ ಕೊಂಡಜ್ಜಿ, ವಿಧಾನ ಪರಿಷತ್‌ ಸದಸ್ಯ, ಕಾಂಗ್ರೆಸ್‌

***

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು’

ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲು ಕೇವಲ ಎರಡು ವರ್ಷಗಳು ಇರುವುದರಿಂದ ಬಸವರಾಜ ಬೊಮ್ಮಾಯಿ ಅವರು 100 ಮೀಟರ್‌ ಓಟದ ಸ್ಪರ್ಧೆ ರೀತಿಯಲ್ಲಿ ಆಡಳಿತ ನಡೆಸಬೇಕಾಗಿರುವುದು ಅತಿ ದೊಡ್ಡ ಸವಾಲು. ಜತೆಗೆ, ಎಲ್ಲರನ್ನೂ ಒಗ್ಗೂಡಿಸಿ ಕರೆದೊಯ್ಯುವುದು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಹಾಗೂ ಉದ್ಯೋಗ ಸೃಷ್ಟಿಸುವುದು ಇತರ ಸವಾಲುಗಳು.

ಕಡಿಮೆ ಅವಧಿಯಲ್ಲಿ ಬೊಮ್ಮಾಯಿ ಅವರು ತಮ್ಮ ಚಾಕಚಕ್ಯತೆಯನ್ನು ತೋರಿಸಬೇಕಾಗಿದೆ. ಸಂಪುಟ ರಚನೆಯ ರಾಜಕೀಯ ಸವಾಲು ತಕ್ಷಣಕ್ಕೆ ಎದುರಾಗಿದೆ. ರಾಜ್ಯದಲ್ಲಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ಇದೆ. ಹೀಗಾಗಿ, ಸರ್ಕಾರಿ ನೌಕರರ ಮತ್ತು ಮತದಾರರ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಹಣ ಮತ್ತು ಜಾತಿ ಪ್ರಾಬಲ್ಯ ಕಡಿಮೆ ಮಾಡಬೇಕು.

–ಡಾ. ವಾಮನ ಆಚಾರ್ಯ, ರಾಜ್ಯ ಬಿಜೆಪಿ ಮುಖಂಡ

***

‘ಪ‍್ರವಾಹ, ನೀರಾವರಿ ಸಮಸ್ಯೆಗಳಿಗೆ ಆದ್ಯತೆ ನೀಡಲಿ’

ಪ್ರವಾಹ ಪರಿಸ್ಥಿತಿಯಿಂದ ಎದುರಾಗಿ ರುವ ಸಮಸ್ಯೆ ಗಳಿಗೆ ಪರಿಹಾರ ರೂಪಿಸುವುದು ಮತ್ತು ನೀರಾ ವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಸರ್ಕಾರದ ಮುಂದಿರುವ ತಕ್ಷಣದ ಸವಾಲುಗಳು.

ಕೋವಿಡ್‌ ಮತ್ತಿತರ ಕಾರಣಗಳಿಂದ ರಾಜ್ಯದಲ್ಲಿ ಆರ್ಥಿಕ ಸಂಪನ್ಮೂಲದ ಕೊರತೆಯೂ ಎದುರಾಗಿದೆ. ಬೆಲೆ ಏರಿಕೆಯಿಂದ ಜನರ ಬದುಕು ದುಸ್ತರವಾಗಿದೆ. ಜತೆಗೆ, ಶಿಕ್ಷಣ ವ್ಯವಸ್ಥೆಯು ಸಂಪೂರ್ಣ ಕುಸಿದಿದೆ. ಬೊಮ್ಮಾಯಿ ಅವರಿಗೆ ಆಡಳಿತದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರೆ ಭ್ರಷ್ಟಾಚಾರ ಹತ್ತಿಕ್ಕಬಲ್ಲರು.

- ಕೆ.ಟಿ. ಶ್ರೀಕಂಠೇಗೌಡ, ವಿಧಾನ ಪರಿಷತ್‌ ಸದಸ್ಯ, ಜೆಡಿಎಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು