ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಪ್ರವಾಸೋದ್ಯಮ ಉತ್ತೇಜನಕ್ಕೆ ‘ರೋಪ್‌ವೇ’– ಪ್ರಕಾಶ್‌ ಶೇಷರಾಘವಾಚಾರ್‌

ರಾಜ್ಯದ ವಿವಿಧ ಭಾಗಗಳಲ್ಲಿ ರೋಪ್‌ ವೇ ನಿರ್ಮಾಣ ಯೋಜನೆ ಸರಿಯಾದ ನಿರ್ಧಾರವೇ?
Last Updated 11 ಮಾರ್ಚ್ 2022, 18:41 IST
ಅಕ್ಷರ ಗಾತ್ರ

ಪ್ರವಾಸಿ– ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಮೂಲಕ ದೇಶದ ಭೂಪಟದಲ್ಲಿ ಔನ್ನತ್ಯಕ್ಕೆ ಏರಿ, ವಿಶ್ವದ ಜನರನ್ನು ತನ್ನ ಕಡೆಗೆ ಸೆಳೆಯುವ ಸೂಜಿಗಲ್ಲಾಗಬಹುದಾದ ಅಪೂರ್ವ ಅವಕಾಶ ನಮ್ಮ ಹೆಮ್ಮೆಯ ನಾಡು ಕರ್ನಾಟಕಕ್ಕೆ ಇದೆ. ಜೀವವೈವಿಧ್ಯ– ಖಗ–ಮೃಗಗಳ ನೆಲೆವೀಡಾದ ಗಿರಿಶೃಂಗಗಳು, ಕಣ್ಮನ ಸೆಳೆಯುವ ಕಡಲ ಕಿನಾರೆ, ಬಾದಾಮಿ–ಪಟ್ಟದಕಲ್ಲು, ಹಂಪಿ, ಮೈಸೂರು, ಶ್ರವಣಬೆಳಗೊಳ, ಗೋಲಗುಂಬಜ್‌ನಂತಹ ವಿಶಿಷ್ಟ ತಾಣಗಳು, ದೈವಾರಾಧನೆಯ ಜತೆಗೆ ಭಕ್ತರ ಇಷ್ಟಾರ್ಥಗ ಳನ್ನು ಈಡೇರಿಸುವ ನೂರಾರು ಪುಣ್ಯಕ್ಷೇತ್ರಗಳು ಕರ್ನಾಟಕದ ಒಡಲಿನಲ್ಲಿ ತುಂಬಿಕೊಂಡಿವೆ. ‘ಒಂದು ರಾಜ್ಯ ಹಲವು ಜಗತ್ತು’ ಎಂಬ ಟ್ಯಾಗ್‌ಲೈನ್‌ ಅನ್ನು ಪ್ರವಾಸೋದ್ಯಮ ಇಲಾಖೆ ದಶಕದ ಹಿಂದೆ ಹಾಕಿಕೊಂಡಿದೆಯಾದರೂ ಅದರ ಅನುಷ್ಠಾನದಲ್ಲಿ ನಿರೀಕ್ಷಿತ ಮಟ್ಟದ ಆಸಕ್ತಿ ತೋರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿತ್ವ, ಮಾರ್ಗದರ್ಶನವನ್ನೇ ನೆಚ್ಚಿಕೊಂಡು ಕರ್ನಾಟಕ
ದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಕೆಲಸವನ್ನು ಶುರು ಮಾಡಿದೆ.

ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯವು ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಹೆಚ್ಚು ಜನಪ್ರಿಯ ಮತ್ತು ಆಕರ್ಷಣೀಯವನ್ನಾಗಿಸಲು ‘ರೋಪ್ ವೇ ಭೂಪಟ’ದಲ್ಲಿ ಕರ್ನಾಟಕದ ಛಾಪನ್ನು ಮೂಡಿಸುವ ಸಂಕಲ್ಪ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ 2022–23ರ ಬಜೆಟ್‌ನಲ್ಲಿ ನಾಲ್ಕು ಪ್ರವಾಸಿ ಸ್ಥಳಗಳಲ್ಲಿ ಕೇಂದ್ರದ ಪರ್ವತಮಾಲಾ ಯೋಜನೆಯನ್ನು ಬಳಸಿಕೊಂಡು ರೋಪ್ ವೇ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ.

ಬೆಂಗಳೂರು ಸಮೀಪದ ನಂದಿಬೆಟ್ಟಕ್ಕೆ ₹93 ಕೋಟಿ ವೆಚ್ಚದಲ್ಲಿ ರೋಪ್ ವೇ ನಿರ್ಮಿಸಲು ಸಂಪುಟದ ಅನುಮೋದನೆಯು ಈಗಾಗಲೇ ದೊರೆತಿದೆ. ಚಿತ್ರನಟ ಶಂಕರ್ ನಾಗ್ ಅವರು 80ರ ದಶಕದಲ್ಲಿ ಈ ಯೋಜನೆಯನ್ನು ಮುಂದಿರಿಸಿದ್ದರು. ಅವರು ಯೋಜನೆಯ ಪ್ರಸ್ತಾವವನ್ನು ಸರ್ಕಾರಕ್ಕೂ ಸಲ್ಲಿಸಿದ್ದರು.

ಶ್ರೀರಾಮನ ಬಂಟ ಹನುಮನ ಜನ್ಮಸ್ಥಳವಾದ ಕೊಪ್ಪಳ್ಳದ ಅಂಜನಾದ್ರಿ ಬೆಟ್ಟ, ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನ ಗಿರಿ ಬೆಟ್ಟ ಮತ್ತು ಮೈಸೂರು ಚಾಮುಂಡಿ ಬೆಟ್ಟಕ್ಕೂ ರೋಪ್ ವೇ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

ರೋಪ್ ವೇ ಪ್ರವಾಸಿಗರ ಬಹುದೊಡ್ಡ ಆಕರ್ಷಣೆಯ ಕೇಂದ್ರ ಮತ್ತು ಕಡಿದಾದ ಪ್ರದೇಶಗಳಿಗೆ ಸಂಪರ್ಕ ಸಾಧಿಸಲು ಹಾಗೂ ನಗರಗಳಲ್ಲಿ ಸಾರಿಗೆ ಸಂಪರ್ಕವಾಗಿಯೂ ಬಳಕೆಯಾಗುತ್ತಿದೆ. ಕೇಂದ್ರ ಸರ್ಕಾರ ಈ ಯೋಜನೆಯ ಸಂಭಾವ್ಯ ಲಾಭವನ್ನು ಗುರುತಿಸಿದೆ. ರೋಪ್ ವೇಯನ್ನು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿ ಬಳಸುವ ಉದ್ದೇಶದಿಂದ ಪರ್ವತ ರಾಜ್ಯಗಳಾದ ಹಿಮಾಚಲ ಪ್ರದೇಶ, ಈಶಾನ್ಯ ರಾಜ್ಯಗಳು, ಉತ್ತರಾಖಂಡ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಯೋಜನೆ ಜಾರಿ ಮಾಡಲು ನಿರ್ಧರಿಸಿದೆ. 60 ಕಿ.ಮೀ. ರೋಪ್ ವೇ ನಿರ್ಮಾಣ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರುಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಮೆಕ್ಸಿಕೊ ನಗರದಲ್ಲಿರುವ 10.55 ಕಿ.ಮೀ ಉದ್ದದ ಕೇಬಲ್ ಕಾರ್ ಪ್ರಪಂಚದ ಅತಿ ಉದ್ದದ ರೋಪ್ ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ನಮ್ಮ ದೇಶದ ವಿಷಯಕ್ಕೆ ಬಂದರೆ1971ರಲ್ಲಿ ನಿರ್ಮಿಸಿದ ಮುಸ್ಸೂರಿ ರೋಪ್ ವೇ ಭಾರತದ ಮೊದಲ ರೋಪ್ ವೇ ಯೋಜನೆಯಾಗಿದೆ. ಉತ್ತರಾಖಂಡದ4 ಕಿ.ಮೀ. ಉದ್ದದ ಔಲಿ ಕೇಬಲ್ ಕಾರ್ ಭಾರತದ ಅತಿ ಉದ್ದನೆಯ ರೋಪ್ ವೇ.

ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಿರುವ 1.82 ಕಿ.ಮೀ ರೋಪ್ ವೇಯು ನದಿಯ ಮೇಲೆ ನಿರ್ಮಾಣ ಮಾಡಿರುವ ದೇಶದ ಅತಿ ಉದ್ದವಿರುವ ರೋಪ್ ವೇ. ಉತ್ತರ ಪ್ರದೇಶದ ವಾರಾಣಸಿಯಲ್ಲಿ ₹400 ಕೋಟಿ ವೆಚ್ಚದಲ್ಲಿ ರೋಪ್ ವೇಯನ್ನು ನಗರ ಸಾರಿಗೆಯಾಗಿ ಉಪಯೋಗಿಸಲು ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಯೋಜನೆ ರೂಪಿಸಿದೆ.

ಪರ್ವತಗಳ ನಡುವೆ ನಿರ್ಮಿಸುವ ರೋಪ್ ವೇ ಯೋಜನೆಗಳು ಅತಿ ಸುರಕ್ಷಿತ ಮತ್ತು ಪರಿಸರಕ್ಕೆ ಹೆಚ್ಚಿನ ಹಾನಿಯನ್ನು ಮಾಡುವುದಿಲ್ಲ. ಪ್ರವಾಸಿಗರು ಪರ್ವತದ ಸುತ್ತಮುತ್ತಲಿನ ರಮಣೀಯ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳಲು ಮತ್ತು ರೋಮಾಂಚಕಾರಿ ಅನುಭವ ಪಡೆಯಲು ಸಹಕಾರಿ. ಹೀಗಾಗಿ, ಪ್ರವಾಸೋದ್ಯಮ ಅಭಿವೃದ್ಧಿ ಯಲ್ಲಿ ರೋಪ್‌ವೇಗಳ ಪಾತ್ರ ಹೆಚ್ಚು ಪ್ರಮುಖವಾದುದು. ಆದರೆ, ಕರ್ನಾಟಕದಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳು ಮತ್ತು ಬೆಟ್ಚಗಳು ಇದ್ದರೂ ಪ್ರವಾಸೋದ್ಯಮ ಉತ್ತೇಜನಕ್ಕೆ ರೋಪ್ ವೇ ಯೋಜನೆಯನ್ನು ಜಾರಿಗೊಳಿಸುವ ಆಲೋಚನೆಯನ್ನು ಹಿಂದಿನ ಸರ್ಕಾರವು ಮಾಡಿರಲಿಲ್ಲ. ಈಗ ರೋಪ್‌ ವೇ ಯೋಜನೆಗಳನ್ನು ಮುನ್ನೆಲೆಗೆ ತಂದ ಶ್ರೇಯಸ್ಸು ಬೊಮ್ಮಾಯಿಯವರಿಗೆ ಸಲ್ಲಬೇಕು.

ರಾಜ್ಯದಲ್ಲಿ ನೂರಾರು ಪ್ರವಾಸಿ ತಾಣಗಳಿವೆ. ಈ ತಾಣಗಳಲ್ಲಿ ಹಲವಾರು ಬಗೆಯ ಆಕರ್ಷಣೆಯನ್ನು ನಿರ್ಮಿಸುವುದರಿಂದ
ಪ್ರವಾಸಿಗರನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಸೆಳೆಯಬಹುದು. ‍‍‍ಪ್ರವಾಸಿಗರ ಸಂಖ್ಯೆ ಹೆಚ್ಚಿದರೆ ಹೋಟೆಲ್‌, ವಸತಿಗೃಹ, ಆ ಪ್ರದೇಶ ದಲ್ಲಿನ ವಿವಿಧ ಅಂಗಡಿಗಳಲ್ಲಿನ ವಹಿವಾಟು ಹೆಚ್ಚುತ್ತದೆ. ಇದಕ್ಕೆ ಪೂರಕವಾಗಿ, ಸ್ಥಳೀಯ ಸಂಸ್ಕೃತಿ ಹಾಗೂ ಕೈಗಾರಿಕೆ ಆಧಾರಿತ ಉದ್ಯಮಕ್ಕೆ ಪ್ರೋತ್ಸಾಹವೂ ಸಿಗುತ್ತದೆ. ಸರ್ಕಾರದ ಆದಾಯ ಗಳಿಕೆ ಮತ್ತು ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ.

ಬೆಂಗಳೂರು ಸಮೀಪದ ನಂದಿಬೆಟ್ಚಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ಕೊಡುತ್ತಿದ್ದಾರೆ. ಈಗ ರೋಪ್ ವೇ ಯೋಜನೆಯ ಜಾರಿಯಿಂದ ಈ ಸಂಖ್ಯೆಯಲ್ಲಿ ಎರಡರಿಂದ ಮೂರುಪಟ್ಟು ವೃದ್ಧಿಯಾಗುವ ನಿರೀಕ್ಷೆ ಇದೆ.

ಹನುಮನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ಹಾಕುವ ತೀರ್ಮಾನ ಅತ್ಯಂತ ಸೂಕ್ತ. ರೋಪ್ ವೇ ಅಭಿವೃದ್ಧಿ ಯೋಜನೆಯಿಂದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುವವರ ಸಂಖ್ಯೆಯು ದುಪ್ಪಟ್ಟಾಗುತ್ತದೆ. ಸುತ್ತಮುತ್ತಲಿನ ಜಿಲ್ಲೆಯವರಿಗೆ ಉದ್ಯೋಗಾವಕಾಶದ ಬಾಗಿಲನ್ನು ಇದು ತೆರೆಯಬಹುದು.

ರಾಜ್ಯದಲ್ಲಿ ಇದೇ ಮೊದಲಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ರೋಪ್ ವೇ ಯೋಜನೆಗಳು ಆರಂಭವಾಗುತ್ತಿವೆ. ಇದು ಪ್ರಾರಂಭ ಮಾತ್ರ; ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್‌ ಪ್ರತಿಪಾದಿಸಿದ್ದಾರೆ.

ಮುಳ್ಳಯ್ಯನಗಿರಿ ಬೆಟ್ಟಕ್ಕೆ ರೋಪ್ ವೇ ಹಾಕುವುದಕ್ಕೆ ಪರಿಸರ ವಾದಿಗಳು ಅಪಸ್ವರ ತೆಗೆದಿದ್ದಾರೆ. ಆದರೆ ಜಿಲ್ಲೆಯ ಜನಪ್ರತಿನಿಧಿ ಗಳು, ಜನರು ಈ ಯೋಜನೆಯ ಪರವಾಗಿ ಇದ್ದಾರೆ. ‘ನಮ್ಮೆಲ್ಲರ ಬೇಡಿಕೆ ಮನ್ನಿಸಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ವಾರಾಂತ್ಯದ ಪ್ರವಾಸಿಗರು ಪ್ರಕೃತಿಯನ್ನು ಆಸ್ವಾದಿಸಲು ಉತ್ತಮ ಅವಕಾಶ’ ಎಂದು ವಿಧಾನ ಪರಿಷತ್ತಿನ ಸದಸ್ಯ ಎಂ.ಕೆ. ಪ್ರಾಣೇಶ್ ಹೇಳುತ್ತಾರೆ.

ಪಶ್ಚಿಮ ಘಟ್ಟವು ಹೊಂದಿರುವ ಹೊಸ ಯೋಜನೆಗಳ ಭಾರ ತಡೆಯುವ ಸಾಮರ್ಥ್ಯ ಮತ್ತು ತದನಂತರ ಉಂಟಾಗುವ
ಬೆಳವಣಿಗೆಗಳಿಂದ ಬೀರುವ ದುಷ್ಪರಿಣಾಮಗಳ ಅಧ್ಯಯನ ಮಾಡದೆ ಯೋಜನೆ ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂಬ ವಾದವೂ ಇದೆ.

‘ಪರಿಸರವಾದಿಗಳ ಜೊತೆಯಲ್ಲಿ ಸಮಾಲೋಚನೆ ನಡೆಸಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಯೋಜನೆ ಅನುಷ್ಠಾನ ಮಾಡುವುದು ನಮ್ಮ ಸರ್ಕಾರದ ಆದ್ಯತೆ. ಇದರಿಂದಾಗಿ, ಟ್ರಾಫಿಕ್ ಒತ್ತಡ ಕಡಿಮೆಯಾಗುತ್ತದೆ. ಇಂತಹ ಪ್ರದೇಶಗಳಲ್ಲಿ, ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಪ್ರಕೃತಿ ಸೌಂದರ್ಯವನ್ನು ರೋಪ್‌ವೇ ಮೂಲಕ ಜನರು ಆಸ್ವಾದಿಸುವ ಅವಕಾಶ ನೀಡಬೇಕಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುವುದು’ ಎನ್ನುತ್ತಾರೆ ಶಾಸಕ ಸಿ.ಟಿ. ರವಿ.

ಮುಖ್ಯಮಂತ್ರಿ ಬೊಮ್ಮಾಯಿಯವರು ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ರೋಪ್ ವೇ ಯೋಜನೆಯ ಮೂಲಕ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲಿದ್ದಾರೆ ಎಂದರೆ ತಪ್ಪಾಗಲಾರದು. ಪ್ರವಾಸೋದ್ಯಮ ಕ್ಷೇತ್ರಕ್ಕೆ ಬೂಸ್ಟರ್‌ ಡೋಸ್ ಅವಶ್ಯಕತೆ ಇತ್ತು ಅದನ್ನು ರೋಪ್ ವೇ ಮೂಲಕ ನೀಡಲಾಗಿದೆ.

ಲೇಖಕರು: ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT