ಗುರುವಾರ , ಜೂನ್ 17, 2021
29 °C
ಪ್ರವಾಸೋದ್ಯಮ ಮತ್ತು ಹೋಟೆಲ್‌ ಉದ್ಯಮದ ಪುನಶ್ಚೇತನ ಹೇಗೆ?

‘ಪ್ರವಾಸೋದ್ಯಮ: ಸರ್ಕಾರ ಆದ್ಯತೆ ನೀಡಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರವಾಸಿಗರು–ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೊನಾ ಸಾಂಕ್ರಾಮಿಕದಿಂದಾಗಿ ರಾಜ್ಯದಲ್ಲಿ ಪ್ರವಾಸೋದ್ಯಮ ಮತ್ತು ಹೋಟೆಲ್‌ ಉದ್ಯಮ ದೊಡ್ಡ ಹೊಡೆತ ಅನುಭವಿಸಿವೆ. ಕೊರೊನಾದ ಮೊದಲ ಅಲೆಯಿಂದಾಗಿ ಪ್ರವಾಸೋದ್ಯಮವು ತಿಂಗಳಿಗೆ ಸುಮಾರು ₹ 5 ಸಾವಿರ ಕೋಟಿ ನಷ್ಟ ಅನುಭವಿಸಿದೆ. ಎರಡನೇ ಅಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಅಪಾಯದಲ್ಲಿವೆ ಎಂದು ‘ಪ್ರಜಾವಾಣಿ’ ಗುರುವಾರ ನಡೆಸಿದ ಸಂವಾದದಲ್ಲಿ ಪಾಲ್ಗೊಂಡ ಮೂವರು ಅತಿಥಿಗಳು ಕಳವಳ ವ್ಯಕ್ತಪಡಿಸಿದರು.

ಅನುದಾನದ ಸಮರ್ಪಕ ಬಳಕೆ ಆಗುತ್ತಿಲ್ಲ

ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಆದರೆ ಅದನ್ನು ಸರಿಯಾಗಿ ವಿನಿಯೋಗ ಮಾಡುವಂತಹ ಉತ್ತಮ ತಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಿಗದಿರುವುದೇ ದುರದೃಷ್ಟಕರ. ಮಂತ್ರಿಗಳು, ಆಯುಕ್ತರು, ಕಾರ್ಯದರ್ಶಿಗಳು ಬದಲಾಗುತ್ತಲೇ ಇದ್ದಾರೆ. ಹೀಗಾದರೆ ಪ್ರವಾಸೋದ್ಯಮ ಮತ್ತು ಹೋಟೆಲ್‌ ಉದ್ಯಮದಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ, ರಾಜ್ಯವನ್ನು ಬಿಂಬಿಸುವ ಕೆಲಸಗಳು ಆಗವು. ಸಮಸ್ಯೆ ಇರುವುದು ಎಲ್ಲರಿಗೂ ತಿಳಿದಿದೆ. ಆದರೆ, ಸಂಬಂಧಪಟ್ಟವರು ಅರ್ಜಿ ಕೊಡದಿದ್ದರೆ ಯಾರೂ ಗಮನ ಹರಿಸುವುದಿಲ್ಲ. ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಸಿಕ್ಕರೆ ಮಾತ್ರವೇ ಉದ್ಯಮದ ಉಳಿವು ಸಾಧ್ಯ.

-ಐ.ಎಂ. ವಿಠ್ಠಲಮೂರ್ತಿ,  ಪ್ರವಾಸೋದ್ಯಮ ಇಲಾಖೆ ಮಾಜಿ ಪ್ರಧಾನ  ಕಾರ್ಯದರ್ಶಿ

ಹೋಟೆಲ್‌ ಉದ್ಯಮಕ್ಕೆ ತುರ್ತು ನೆರವು ಅಗತ್ಯ

‘ಪ್ರವಾಸ ಮತ್ತು ಹೋಟೆಲ್‌ ಉದ್ಯಮ’ ಒಂದೇ ನಾಣ್ಯದ ಎರಡು ಮುಖಗಳು. ಕೋವಿಡ್‌ನಿಂದಾಗಿ ಪ್ರವಾಸೋದ್ಯಮ ಸಂಪೂರ್ಣವಾಗಿ ನಿಂತಿದ್ದರಿಂದ ಹೋಟೆಲ್‌ ಉದ್ಯಮ ಅತಿ ಹೆಚ್ಚು ನಷ್ಟ ಅನುಭವಿಸುವಂತಾಗಿದೆ. ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಯೂ ಹೋಟೆಲ್‌ ಉದ್ಯಮಕ್ಕೆ ಪೆಟ್ಟು ಕೊಟ್ಟಿದೆ. ಹೀಗಾಗಿ ಆಸ್ತಿ ತೆರಿಗೆ, ಪರವಾನಗಿ ಶುಲ್ಕಗಳಲ್ಲಿ ಸ್ವಲ್ಪ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇಲ್ಲಿ ಕೆಲಸ ಮಾಡುವವರಿಗೆ ಪರಿಹಾರ ನೀಡುವಂತೆಯೂ ಕೇಳಲಾಗಿದೆ. ಇದುವರೆಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ.

- ಪಿ.ಸಿ.ರಾವ್,ಅಧ್ಯಕ್ಷ, ಬೃಹತ್‌ ಬೆಂಗಳೂರು ಹೋಟೆಲ್ಸ್‌  ಅಸೋಸಿಯೇಶನ್

ಎನ್‌ಪಿಎ ಸುಳಿಯಲ್ಲಿ ಹೋಟೆಲ್‌ಗಳು

ಸರ್ಕಾರವು ತುರ್ತಾಗಿ ಪ್ರವಾಸೋದ್ಯಮದ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕಿದೆ. ಹೋಟೆಲ್‌ ಉದ್ಯಮ ಸಂಕಷ್ಟಕ್ಕೆ ಸಿಲುಕಿಕೊಂಡರೆ ಪ್ರವಾಸಿಗಳು ಬರುವುದೇ ಇಲ್ಲ. ಒಂದೂವರೆ ವರ್ಷದಿಂದ ಹೋಟೆಲ್‌ ಉದ್ಯಮವು ವ್ಯಾಪಾರವಿಲ್ಲದೇ ತತ್ತರಿಸಿದೆ. ಇದರಿಂದ ವಸೂಲಾಗದ ಸಾಲದ (ಎನ್‌ಪಿಎ) ಸುಳಿಗೆ ಸಿಲುಕಿದೆ. ಆರು ತಿಂಗಳ ಅವಧಿಗೆ ಸಾಲದ ಮೇಲಿನ ಬಡ್ಡಿದರವನ್ನು ಮನ್ನಾ ಮಾಡಬೇಕಿದೆ.

ಪ್ರವಾಸೋದ್ಯಮವು ಖಾಸಗಿಯವರಿಂದ ಬೆಳೆದಿದೆಯೇ ಹೊರತು ಸರ್ಕಾರದ ಯೋಜನೆಗಳಿಂದಲ್ಲ. ಕಲೆ ಮತ್ತು ಸಂಸ್ಕೃತಿ, ಪಾರಂಪರಿಕ ಕಟ್ಟಡಗಳು ಇದ್ದ ಮಾತ್ರಕ್ಕೆ ಪ್ರವಾಸೋದ್ಯಮ ಬೆಳೆಯುವುದಿಲ್ಲ. ಅಲ್ಲಿ ವ್ಯವಸ್ಥಿತವಾದ ಹೋಟೆಲ್‌ ಸಹ ಬೇಕು. ಹೀಗಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾಗುವ ಮೊದಲು ಹೋಟೆಲ್‌ ಉದ್ಯಮದ ಬೆಳವಣಿಗೆಗೂ ಗಮನ ಅಗತ್ಯ. ರಾಜ್ಯದಲ್ಲಿ ಒಂದು ಲಕ್ಷ ಹೋಟೆಲ್‌ಗಳಿದ್ದು, ಅವುಗಳಲ್ಲಿ 25 ಸಾವಿರ ಹೋಟೆಲ್‌ಗಳು ತೆರೆಯಲು ಆಗದ ಸ್ಥಿತಿಯಲ್ಲಿವೆ. ಹೀಗಾದರೆ, ಕನಿಷ್ಠ ಎರಡೂವರೆ ಲಕ್ಷ ಜನ ಕೆಲಸ ಕಳೆದುಕೊಳ್ಳಲಿದ್ದಾರೆ.

 -ಸುಧಾಕರ ಎಸ್. ಶೆಟ್ಟಿ, ಮಾಜಿ  ಅಧ್ಯಕ್ಷ, ಎಫ್‌ಕೆಸಿಸಿಐ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು