ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂವಾದ: 'ಸಿ.ಡಿ ಇದ್ದರೆ ಬಿಡುಗಡೆ ಮಾಡಲಿ, ತನಿಖೆಯೂ ಆಗಲಿ'

ಫೇಸ್ ಬುಕ್‌ ಲೈವ್‌ ಸಂವಾದದಲ್ಲಿ ಎಚ್‌. ವಿಶ್ವನಾಥ್, ಎನ್‌. ರವಿಕುಮಾರ್
Last Updated 18 ಜನವರಿ 2021, 18:49 IST
ಅಕ್ಷರ ಗಾತ್ರ

ಬೆಂಗಳೂರು: ಸಂಪುಟ ವಿಸ್ತರಣೆ ಮುಗಿದ ಬೆನ್ನಲ್ಲೇ ಬಿಜೆಪಿ ರಾಜ್ಯ ಘಟಕದಲ್ಲಿ ಆರೋಪ– ಪ್ರತ್ಯಾರೋಪಗಳು ಜೋರಾಗಿ ಸದ್ದು ಮಾಡುತ್ತಿವೆ. ಬಿಜೆಪಿ ಸರ್ಕಾರ ರಚನೆಗೆ ಬೆಂಬಲವಾಗಿ ಪಕ್ಷಾಂತರ ಮಾಡಿದ್ದರೂ ಸಚಿವ ಸ್ಥಾನ ಸಿಗದವರ ಸಿಟ್ಟು ಒಂದೆಡೆಯಾದರೆ, ಮೂಲ ಬಿಜೆಪಿ ಶಾಸಕರ ಬೇಡಿಕೆ ಮತ್ತೊಂದೆಡೆ. ಹಣ, ಸಿ.ಡಿ ಸೇರಿದಂತೆ ಬಾಹ್ಯ ಒತ್ತಡಗಳೂ ಸಂಪುಟ ವಿಸ್ತರಣೆಯಲ್ಲಿ ಕೆಲಸ ಮಾಡಿವೆ ಎಂಬ ಆರೋಪವೂ ಇದೆ. ಜೆಡಿಎಸ್‌ ತೊರೆದು,ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ಸೂಚಿಸಿದ ಬಳಿಕ ಆ ಪಕ್ಷದಿಂದ ವಿಧಾನ ಪರಿಷತ್‌ ಸದಸ್ಯರಾಗಿರುವ ಎಚ್‌.ವಿಶ್ವನಾಥ್‌ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಧಾನ ಪರಿಷತ್ ಸದಸ್ಯ ಎನ್‌. ರವಿಕುಮಾರ್ ‘ಪ್ರಜಾವಾಣಿ’ ಫೇಸ್‌ ಬುಕ್‌ ಲೈವ್‌ ಸಂವಾದದಲ್ಲಿ ಮಾತನಾಡಿದ್ದಾರೆ.

ಸಿ.ಡಿ ಆರೋಪದ ಬಗ್ಗೆ ತನಿಖೆಯಾಗಲಿ

ಸಿ.ಡಿ. ತೋರಿಸಿ ಬೆದರಿಕೆ ಹಾಕಿ ಇಬ್ಬರು ಸಚಿವ ಸ್ಥಾನ ಪಡೆದಿದ್ದಾರೆ ಎಂಬ ಆರೋಪವಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಹಿರಂಗವಾಗಿ ಈ ಆರೋಪ ಮಾಡಿದ್ದಾರೆ. ಈ ವಿಚಾರದಲ್ಲಿ ಸಂಶಯ ಹೆಚ್ಚಾಗುತ್ತಿದೆ. ಸಿ.ಡಿ ವಿಚಾರ ನಿಜವೋ? ಇಲ್ಲವೋ? ಎಂಬುದನ್ನು ತಿಳಿಯಲು ತನಿಖೆಗೆ ಆದೇಶಿಸಲಿ. ಸಿ.ಡಿ ತೋರಿಸಿ ಬೆದರಿಸಿ ಮಂತ್ರಿ ಆಗಿದ್ದು ನಿಜವೇ ಆಗಿದ್ದರೆ ಅದಕ್ಕೆ ಕಾರಣರಾದವರನ್ನು
ಸಂಪುಟದಿಂದ ಒದ್ದು ಹೊರಗೆ ಹಾಕಿ.

ಸಂಪುಟ ವಿಸ್ತರಣೆ ವಿಚಾರದಲ್ಲಿ ಯಾವ ಪಕ್ಷದ ಹೈಕಮಾಂಡ್‌ ಕೂಡ ಹೀಗೆಯೇ ಅಂತಿಮ ನಿರ್ಧಾರ ಕೈಗೊಳ್ಳುವುದಿಲ್ಲ. ನಾವೂ ಹೈಕಮಾಂಡ್‌ ಕೆಳಗೆ ಕೆಲಸ ಮಾಡಿದ್ದವರು. ಎಲ್ಲವೂ ನಮಗೆ ಗೊತ್ತಿದೆ. ನಮಗೆ ಯಾರೂ ಹೈಕಮಾಂಡ್‌ ಗೊತ್ತಿಲ್ಲ. ಬಿ.ಎಸ್‌. ಯಡಿಯೂರಪ್ಪ ಅವರೇ ನಮಗೆ ಹೈಕಮಾಂಡ್‌. ಈಗ ಒತ್ತಡ ತಪ್ಪಿಸಿಕೊಳ್ಳಲು ಹೈಕಮಾಂಡ್‌ ಕಡೆಗೆ ಕೈ ತೋರಿಸುತ್ತಿದ್ದಾರೆ.

ಇದು ಜನಾದೇಶದ ಸರ್ಕಾರ ಅಲ್ಲ. ಕಾಂಗ್ರೆಸ್‌ನ 14 ಮತ್ತು ಜೆಡಿಎಸ್‌ನ ಮೂವರು ತಮ್ಮ ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ದಂಗೆ ಎದ್ದು ಬಂದಿದ್ದರಿಂದ ಬಿಜೆಪಿ ಸರ್ಕಾರ ಬಂದಿದೆ. ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಇಬ್ಬರೂ 17 ಜನರಿಗೂ ಸಚಿವ ಸ್ಥಾನದ ಭರವಸೆ ನೀಡಿದ್ದರು. ಮೊದಲು ನಮ್ಮ 17 ಜನರಿಗೂ ಸಚಿವ ಸ್ಥಾನ ನೀಡಬೇಕಿತ್ತು. ಆ ಬಳಿಕವೇ ಉಳಿದವರಿಗೆ ಅವಕಾಶ ಕಲ್ಪಿಸಬೇಕಿತ್ತು.

ಚುನಾವಣೆಯಲ್ಲಿ ಸೋತ ವಿಷಯವನ್ನು ಮುಂದಿಟ್ಟುಕೊಂಡು ತಾಂತ್ರಿಕ ಕಾರಣದಿಂದ ಸಚಿವ ಸ್ಥಾನ ನೀಡಿಲ್ಲ ಎಂದು ನನಗೆ ಹೇಳುತ್ತಿದ್ದಾರೆ. ಸೋತಿದ್ದು ಏಕೆ ಎಂಬುದನ್ನೂ ಅವಲೋಕಿಸಬೇಕಲ್ಲವೆ? ಸಿ.‍ಪಿ. ಯೋಗೇಶ್ವರ್ ಚುನಾವಣೆಯಲ್ಲಿ ಸೋತಿರಲಿಲ್ಲವೆ? 9,731 ಜನರು ವಂಚನೆಯ ಆರೋಪ ಹೊರಿಸಿ ಅವರ ವಿರುದ್ಧ ದೂರು ನೀಡಿಲ್ಲವೆ? ಗಂಭೀರ ವಂಚನೆ ಪ್ರಕರಣಗಳ ತನಿಖಾ ಕಚೇರಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರೂ ಹೇಗೆ ಅವಕಾಶ ನೀಡಿದರು?

ನಾನು ಮಂತ್ರಿ ಆಗುವ ಏಕೈಕ ಉದ್ದೇಶದಿಂದ ಬಿಜೆಪಿಗೆ ಬಂದಿಲ್ಲ. ಮುಖ್ಯಮಂತ್ರಿಯ ಪರಮಾಧಿಕಾರ ಎಂದರೆ ಎಲ್ಲ ಇಲಾಖೆಗಳನ್ನೂ, ಕಡತಗಳನ್ನೂ ತಮ್ಮ ಬಳಿ ಇರಿಸಿಕೊಳ್ಳುವುದಲ್ಲ. ಕರ್ನಾಟಕವನ್ನು ಉದ್ದೇಶಿಸಿಯೇ ಕುಟುಂಬ ರಾಜಕಾರಣದ ಪ್ರಸ್ತಾಪ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು, ಅದು ನಡೆಯಬಾರದು ಎಂದಿದ್ದಾರೆ. ಯಡಿಯೂರಪ್ಪ ಅವರು ಕೂಡ ಕುಟುಂಬ ರಾಜಕಾರಣಕ್ಕೆ ಒಳಗಾಗಬಾರದು.

-ಎಚ್‌. ವಿಶ್ವನಾಥ್‌

***

ಸಂಪುಟ ವಿಸ್ತರಣೆ ಅನೇಕ ಕಾರಣಗಳಿಂದ ವಿಳಂಬವಾಗಿದೆ. ಹೆಚ್ಚಿನ ಆಕಾಂಕ್ಷಿಗಳು ಇದ್ದುದು, ಪ್ರವಾಹ, ಕೋವಿಡ್‌ ಹೀಗೆ ಅನೇಕ ಅಂಶಗಳು ಅದಕ್ಕೆ ಕಾರಣ. ವಿಳಂಬ ಆಗಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಪಕ್ಷದ ಮುಖಂಡರು ಯಾರಿಗೂ ಸಮಾಧಾನ ಇಲ್ಲ. ಎಲ್ಲ ವಿಷಯಗಳನ್ನೂ ಬಹಿರಂಗವಾಗಿಯೇ ಹೇಳಲು ಆಗುವುದಿಲ್ಲ. ‘ನನ್ನ ಇತಿಮಿತಿಯಲ್ಲೇ ಸಂಪುಟ ವಿಸ್ತರಣೆ ಮಾಡಿದ್ದೇನೆ’ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೊರೆದು ಬಂದಿರುವ 17 ಜನರ ಋಣದಲ್ಲಿ ಬಿಜೆಪಿ ಸರ್ಕಾರ ಇದೆ. ಇದನ್ನು ಬಹಿರಂಗವಾಗಿಯೇ ಹೇಳುತ್ತೇವೆ. ವಿಶ್ವನಾಥ್‌ ಸೇರಿದಂತೆ ಎಲ್ಲರಿಗೂ ಸಚಿವ ಸ್ಥಾನ ದೊರೆಯಲಿದೆ. ಕೆಲವರಿಗೆ ಈಗ ಅವಕಾಶ ಸಿಕ್ಕಿದೆ, ಉಳಿದವರಿಗೆ ಇವತ್ತಲ್ಲ ನಾಳೆ ನ್ಯಾಯ ಸಿಗುವುದು ಖಚಿತ.

ಸಿ.ಡಿ ವಿಷಯ ಕೇಳಿದ್ದೇನೆ. ಅದರಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಸಿ.ಡಿ ಇರುವುದು ನಿಜವೇ ಆಗಿದ್ದಲ್ಲಿ ಅದನ್ನು ಬಿಡುಗಡೆ ಮಾಡಲಿ. ಬಿಡುಗಡೆ ಮಾಡದಂತೆ ಯಾರ ಒತ್ತಡವೂ ಇಲ್ಲ. ಈ ವಿಚಾರದಲ್ಲಿ ಜನರು ಅಸಹ್ಯಪಡುತ್ತಿದ್ದಾರೆ. ಸಿ.ಡಿ ತೋರಿಸಿ ಬೆದರಿಕೆ ರಾಜಕಾರಣ ಮಾಡುತ್ತಿದ್ದರೆ ಅಕ್ಷಮ್ಯ.

ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರು. ಆ ನೆಲೆಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಅಮಿತ್‌ ಶಾ ಅವರು ಕುಟುಂಬ ರಾಜಕಾರಣದ ಕುರಿತು ಮಾತನಾಡಿರುವುದು ಕಾಂಗ್ರೆಸ್‌ ನಾಯಕರನ್ನು ಉದ್ದೇಶಿಸಿ.

ಎನ್‌. ರವಿಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT