ಗುರುವಾರ , ಜುಲೈ 7, 2022
23 °C

‘ವೈದ್ಯಕೀಯ ಪ್ರವೇಶಕ್ಕೆ ನೀಟ್‌ ಪರೀಕ್ಷೆ ಅನಿವಾರ್ಯವೇ, ಬದಲಾವಣೆ ಬೇಕೆ? ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನೀಟ್‌ ಪದ್ಧತಿಯಲ್ಲಿ ನ್ಯೂನತೆಗಳಿರಬಹುದು. ಅವುಗಳನ್ನು ಪತ್ತೆಹಚ್ಚಿ ಸರಿಪಡಿಸಬೇಕು. ಅದನ್ನು ಬಿಟ್ಟು ಇಡೀ ವ್ಯವಸ್ಥೆಯನ್ನೇ ರದ್ದುಪಡಿಸುವಂತೆ ಒತ್ತಾಯಿಸುವುದು ಸರಿಯಲ್ಲ. ನಮ್ಮಲ್ಲಿ ಶಿಕ್ಷಣದ ವ್ಯಾಪಾರೀಕರಣ ನಡೆಯುತ್ತಿದೆ. ಅದು ಶುಲ್ಕ ಹೆಚ್ಚಳಕ್ಕೆ ರಹದಾರಿ ಮಾಡಿಕೊಟ್ಟಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ’...

‘ವೈದ್ಯಕೀಯ ಪ್ರವೇಶಕ್ಕೆ ನೀಟ್‌ ಪರೀಕ್ಷೆ ಅನಿವಾರ್ಯವೇ, ಬದಲಾವಣೆ ಬೇಕೆ? ವಿಷಯದ ಕುರಿತು ಸೋಮವಾರ ನಡೆದ ‘ಪ್ರಜಾವಾಣಿ’ ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯವಿದು. 

‘ಶಿಕ್ಷಣದ ವ್ಯಾಪಾರೀಕರಣ ನಿಲ್ಲಲಿ’

‘ದೇಶದಲ್ಲಿ ಏಕರೂಪದ ವ್ಯವಸ್ಥೆ ಜಾರಿಗೊಳಿಸಲು ನೀಟ್‌ ಪರೀಕ್ಷೆ ಸಹಕಾರಿ. ಸಮಾನ ಅವಕಾಶ ಹಾಗೂ ಪಾರದರ್ಶಕತೆ ಕಾಪಾಡುವ ಉದ್ದೇಶ ಇದರ ಹಿಂದೆ ಅಡಕವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಯಾವ ಸಮಸ್ಯೆಯೂ ಇಲ್ಲ’.

‘ಕೆಲ ರಾಜ್ಯಗಳು ಇನ್ನೂ ಕೇಂದ್ರೀಯ ಪಠ್ಯಕ್ರಮ ಅಳವಡಿಸಿಕೊಂಡಿಲ್ಲ. ಬಹು ಆಯ್ಕೆಯ ಪ್ರಶ್ನೆ ಪದ್ಧತಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಒಗ್ಗಿಕೊಂಡಿಲ್ಲ. ಖಾಸಗಿ ಕಾಲೇಜುಗಳು ಸರ್ಕಾರಿ ಕೋಟಾದಡಿ ಸೇರುವ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ವಿದೇಶಗಳಲ್ಲಿ ಮ್ಯಾನೇಜ್‌ಮೆಂಟ್‌ ಕೋಟಾದಡಿ ದಾಖಲಾಗುವ ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕ ಪಡೆಯಲಾಗುತ್ತದೆ. ಹೀಗಾಗಿ ಅನೇಕರು ಆ ದೇಶಗಳಿಗೆ ಹೋಗುತ್ತಾರೆ’.  

‘ನಮ್ಮಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಹೆಚ್ಚು ಒತ್ತು ನೀಡಿದರೆ ವಿದೇಶಗಳಲ್ಲಿ ‘ಥಿಯರಿ’ಗೆ ಮನ್ನಣೆ ನೀಡಲಾಗುತ್ತದೆ. ನಮ್ಮಲ್ಲಿ ಶಿಕ್ಷಣದ ವ್ಯಾಪಾರೀಕರಣ ಅವ್ಯಾಹತವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು’.

ಡಾ.ಎ.ಎಸ್‌.ರವೀಂದ್ರನಾಥ್‌, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ. 

‘ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿ’

‘ನೀಟ್‌ ಪರೀಕ್ಷೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂಬ ಮಾತಿದೆ. ಹೀಗಾಗಿ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಿ’.

‘ಪರೀಕ್ಷೆ ಎದುರಿಸಿದವರಿಗೆಲ್ಲಾ ಸೀಟು ಸಿಗಬೇಕು ಎಂಬುದು ತಪ್ಪು ಕಲ್ಪನೆ. ವೈದ್ಯಕೀಯ ಶಿಕ್ಷಣದಲ್ಲಿ ಗುಣಮಟ್ಟ ಹಾಗೂ ಜ್ಞಾನ ಬಹಳ ಮುಖ್ಯ. ಈ ಮಾನದಂಡಗಳನ್ನು ಅಳೆಯುವುದು ನೀಟ್‌ ಪರೀಕ್ಷೆಯ ಉದ್ದೇಶ. ನಮ್ಮಲ್ಲಿ ಸೀಟುಗಳ ಕೊರತೆ ಇಲ್ಲ. ನೀಟ್‌ನಲ್ಲಿ ‘ಪರ್ಸೆಂಟೇಜ್‌’ ಬದಲು ‘ಪರ್ಸೆಂಟೈಲ್‌’ ಅನ್ನು ಪರಿಗಣಿಸಲಾಗುತ್ತದೆ. ಹೀಗಾಗಿ ಪರೀಕ್ಷೆ ಬರೆದವರಿಗೆಲ್ಲಾ ಸೀಟು ಸಿಗುವುದು ಕಷ್ಟ’.

‘ನಮ್ಮಲ್ಲಿ ಮೆರಿಟ್‌ ಇದ್ದವರೂ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಈ ಕಾರಣದಿಂದಾಗಿಯೇ ಅನೇಕರು ವಿದೇಶಗಳಿಗೆ ಹೋಗುತ್ತಾರೆ. ಸಮಸ್ಯೆ ಇರುವುದು ಶುಲ್ಕ ವ್ಯವಸ್ಥೆಯಲ್ಲಿ. ನೀಟ್‌ನಿಂದ ಅಲ್ಲ. ನಮ್ಮಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಠಿಣ ನಿಯಮಗಳ ಮೂಲಕ ನಮ್ಮ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದೇವೆಯೇ ಎಂಬ ಆತಂಕವೂ ಇದೆ’.

–ಡಾ.ಜಿ.ಎಸ್‌.ವೆಂಕಟೇಶ್‌, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮಾಜಿ ನಿರ್ದೇಶಕ ಹಾಗೂ ಎಂ.ಎಸ್‌.ರಾಮಯ್ಯ ಸಮೂಹ ಸಂಸ್ಥೆಗಳ ಸಲಹೆಗಾರ.

‘ಶುಲ್ಕ ಹೆಚ್ಚಳದ ಬಗ್ಗೆ ಗಟ್ಟಿ ಧ್ವನಿ ಎತ್ತಬೇಕು’

‘ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಗೋಜಲಾಗಿರುವುದು ಹೊಸತೇನಲ್ಲ. ‘ನೀಟ್‌ ಪದ್ಧತಿಯೇ ಸರಿಯಲ್ಲ. ಅದನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು’ ಎಂಬ ವಾದ ಒಪ್ಪತಕ್ಕದಲ್ಲ. ವೈದ್ಯಕೀಯ ಶಿಕ್ಷಣದ ಪ್ರವೇಶಾತಿ ಜಗತ್ತಿನ ಎಲ್ಲಾ ಭಾಗಗಳಲ್ಲೂ ಅತ್ಯಂತ ಕ್ಲಿಷ್ಟ ಮತ್ತು ಸ್ಪರ್ಧಾತ್ಮಕವಾಗಿದೆ’. 

‘ರಾಜ್ಯದಲ್ಲಿ 60 ವೈದ್ಯಕೀಯ ಕಾಲೇಜುಗಳಿವೆ. 9 ಸಾವಿರಕ್ಕೂ ಹೆಚ್ಚು ಸೀಟುಗಳು ಲಭ್ಯವಿವೆ.  ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ವಾದದಲ್ಲಿ ಹುರುಳಿಲ್ಲ. ಯುಪಿಎಸ್‌ಸಿ, ಜೆಇಇ ಪರೀಕ್ಷೆಗಳಿಂದಲೂ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಅದರ ಬಗ್ಗೆ ಏಕೆ ಚಕಾರ ಎತ್ತುವುದಿಲ್ಲ’.

‘ಶ್ರೀಮಂತರಿಗಾಗಿಯೇ ಖಾಸಗಿ ಕಾಲೇಜುಗಳಲ್ಲಿ ಸೀಟುಗಳನ್ನು ಕಾಯ್ದಿರಿಸಲಾಗುತ್ತಿದೆ. ಹೀಗಾಗಿ ಅರ್ಹರು ಸೀಟು ವಂಚಿತರಾಗುತ್ತಿದ್ದಾರೆ. ನೀಟ್‌ ಪರೀಕ್ಷೆ ಸರಳಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿ. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಪಿಯುಸಿ ಹಂತದಿಂದಲೇ ಈ ಕುರಿತು ತರಬೇತಿ ನೀಡಲಿ’. 

‘ಖಾಸಗಿ ಕಾಲೇಜುಗಳಲ್ಲಿ ಶುಲ್ಕ ಅನಿಯಂತ್ರಿತವಾಗಿದೆ. ಹೀಗಾಗಿ ಪರಿಸ್ಥಿತಿ ಬಿಗಡಾಯಿಸಿದೆ. ಎಲ್ಲಾ ಕಾಲೇಜುಗಳಲ್ಲಿಯೂ ಸರ್ಕಾರಿ ಕೋಟ ಶೇ 50ಕ್ಕಿಂತಲೂ ಹೆಚ್ಚಿರಬೇಕು. ಶುಲ್ಕ ನಿರ್ಧರಿಸಲು ಪ್ರತಿ ವರ್ಷ ಸಮಿತಿ ರಚಿಸಬೇಕು. ಸಚಿವರು ಹಾಗೂ ಖಾಸಗಿ ಕಾಲೇಜು ಆಡಳಿತ ಮಂಡಳಿಯವರು ತಮಗೆ ಬೇಕಾದ ಹಾಗೆ ಶುಲ್ಕ ಹೆಚ್ಚಳ ಮಾಡುತ್ತಿದ್ದಾರೆ. ಇದನ್ನು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಂಘಟನೆಗಳು ಪ್ರಶ್ನಿಸಬೇಕು’.

–ಡಾ.ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯರು, ಸಾಮಾಜಿಕ ಕಾರ್ಯಕರ್ತ. ಮಂಗಳೂರು

ಪೂರ್ಣ ಸಂವಾದಕ್ಕಾಗಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು