ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಜಾರಿಗೆ ತಂದ ಪ್ರತಿ ಯೋಜನೆಯ ಕೇಂದ್ರ ಬಿಂದು ಬಡವರೇ: ಪ್ರಲ್ಹಾದ ಜೋಶಿ

ಪ್ರಧಾನಿ ಮೋದಿ ವಿಡಿಯೊ ಸಂವಾದ ವೀಕ್ಷಣೆಯಲ್ಲಿ ಸಚಿವ ಪ್ರಲ್ಹಾದ ಜೋಶಿ ಅಭಿಮತ
Last Updated 31 ಮೇ 2022, 10:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಪ್ರತಿಯೊಂದು ಯೋಜನೆಯ ಕೇಂದ್ರ ಬಿಂದು ಬಡವರೇ ಆಗಿದ್ದಾರೆ. ಅವರ ಆಡಳಿತದ ಎಂಟು ವರ್ಷದ ಅವಧಿಯಲ್ಲಿ ದೇಶ ಸಾಕಷ್ಟು ಸುಧಾರಣೆ ಕಂಡಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಕುಸಗಲ್‌ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಮಂಗಳವಾರ ನಡೆದ ‘ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಸಂವಾದ ವೀಕ್ಷಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಮತ್ತು ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಇಂದು (ಮಂಗಳವಾರ) ಪ್ರಧಾನಿ ಮೋದಿ ಅವರು ಒಂದೇ ಒಂದು ನಿಮಿಷದಲ್ಲಿ 10 ಕೋಟಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಿದ್ದಾರೆ. ಆ ಪಲಾನುಭವಿಗಳಲ್ಲಿ ಜಿಲ್ಲೆಯ ಫಲಾನುಭವಿಗಳು ಸಹ ಇದ್ದಾರೆ. ಜನಪರ ಆಡಳಿತ ನೀಡಲು ಸರ್ಕಾರ ಸದಾ ಬದ್ಧವಾಗಿದೆ’ ಎಂದರು.

‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸ್ಥಳೀಯ ಜನಪ್ರತಿನಿಧಿಗಳು, ಬಿಜೆಪಿ ಕಾರ್ಯಕರ್ತರು ಜನರ ಮನೆ ಬಾಗಿಲಿಗೆ ಮುಟ್ಟಿಸಬೇಕು. ಒಂದು ತಿಂಗಳ ಅವಧಿಯಲ್ಲಿ ಎಲ್ಲರಿಗೂ ಯೋಜನೆ ಬಗ್ಗೆ ಮಾಹಿತಿ ನೀಡುವ ಸಂಕಲ್ಪ ಮಾಡಬೇಕು. ಯುಪಿಎ ಅವಧಿಯಲ್ಲಿಯೂ ಸಾಲ ಮನ್ನಾ ಮಾಡಲಾಗಿತ್ತು. ಆದರೆ, ಏನಾಯ್ತು, ಎಷ್ಟು ಮಂದಿಗೆ ಅದರ ಪ್ರಯೋಜನ ದೊರಕಿದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ, ಬಿಜೆಪಿ ಆಡಳಿತದಲ್ಲಿ ₹23 ಲಕ್ಷ ಕೋಟಿ ಸಾಲಮನ್ನಾ ಮಾಡಲಾಗಿದೆ. ಇದು ಆಡಳಿತದಲ್ಲಾದ ಬದಲಾವಣೆ’ ಎಂದು ಹೇಳಿದರು.

‘ಪ್ರತಿಯೊಂದು ಯೋಜನೆಯೂ ಭ್ರಷ್ಟಾಚಾರ ಮುಕ್ತವಾಗಿರಬೇಕು ಎಂದು ಫಲಾನುಭವಿಗಳ ಖಾತೆಗೆ ನೇರ ಹಣ ಸಂದಾಯ ಮಾಡಲಾಗುತ್ತಿದೆ. ಇದರಿಂದ ಮಧ್ಯವರ್ತಿಗಳ ಹಾವಳಿಯಿಲ್ಲದೆ ಯೋಜನೆಯ ಲಾಭ ಸಂಪೂರ್ಣವಾಗಿ ಜನಸಾಮಾನ್ಯರಿಗೆ ದೊರೆಯುತ್ತಿದೆ. ರಾಜ್ಯದಲ್ಲಿ 35 ಲಕ್ಷ ರೈತರು ಕಿಸಾನ್ ಸಮ್ಮಾನ್‌ ಯೋಜನೆ ಪ್ರಯೋಜನ ಪಡೆಯುತ್ತಿದ್ದಾರೆ. ಅನೇಕ ಬಡವರು ಇನ್ನೂ ಆಯುಷ್ಮಾನ್ ಭಾರತ ಕಾರ್ಡ್ ಪಡೆದಿಲ್ಲ. ಅದು ಅವರಿಗೆ ತಲುಪುವಂತಾಗಬೇಕು’ ಎಂದರು.

‘ನ್ಯಾನೋ ಗೊಬ್ಬರ; ಕ್ರಾಂತಿಯಾಗಲಿದೆ’

‘45 ಕೆಜಿ ಸಾಮರ್ಥ್ಯದ ಯೂರಿಯಾ ಗೊಬ್ಬರವನ್ನು 450 ಎಂಎಲ್‌ಎ ಬಾಟಲ್‌ನಲ್ಲಿ ಸಂಗ್ರಹಿಸಬಹುದು’ ಎಂದು ನ್ಯಾನೋ ಗೊಬ್ಬರದ ಕುರಿತು ಯುಎಸ್‌ಎದಲ್ಲಿ ಇರುವ ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೇಲ್‌ ಮಾಡಿದ್ದರು. ಅವರನ್ನು ಪತ್ತೆ ಹಚ್ಚಿ ಭಾರತಕ್ಕೆ ಕರೆತಂದು ಪ್ರಧಾನಿ ಸಚಿವಾಲಯದಲ್ಲಿರುವ ಕೃಷಿ ವಿಭಾಗದವರ ಜೊತೆ ಚರ್ಚಿಸಲಾಯಿತು. ಅದರಿಂದ ಸಾಗಾಣಿಕೆ ವೆಚ್ಚ ಸಾಕಷ್ಟು ಪ್ರಮಾಣದಲ್ಲಿ ಉಳಿತಾಯವಾಗಲಿದೆ. ನ್ಯಾನೋ ಗೊಬ್ಬರ ಸಂಶೋಧನಾ ಯೋಜನೆ ಯಶಸ್ವಿಯಾದರೆ ದೇಶದಲ್ಲಿ ದೊಡ್ಡ ಕ್ರಾಂತಿಯಾಗಲಿದೆ’ ಎಂದು ಸಚಿವ ಜೋಶಿ ಹೇಳಿದರು.

‘ಪ್ರಧಾನಿ ಮೋದಿ ಅವರು ಜನರ ಜೊತೆ ನೇರ ಸಂವಾದ ಮಾಡುವ, ಯಾರಾದರೂ ಮೇಲ್‌ ಕಳುಹಿಸಿದರೆ ಅದಕ್ಕೆ ಸ್ಪಂದಿಸುವ ವ್ಯಕ್ತಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT