ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾ ಪ್ರಶ್ನೆಗಳ ಸತ್ಯಶೋಧನೆ ಆಗಲಿ: ಪ್ರತಾಪ ಸಿಂಹ

Last Updated 20 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಮೈಸೂರು: ‘ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಐಎಎಸ್‌ ರೋಹಿಣಿ ಸಿಂಧೂರಿ ಅವರ ಕುರಿತು ಫೇಸ್‌ಬುಕ್‌ನಲ್ಲಿ ಎತ್ತಿರುವ ಪ್ರಶ್ನೆಗಳು ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಸರಿಯಾಗಿವೆ. ಅವುಗಳ ಸತ್ಯಶೋಧನೆಯಾಗಬೇಕು’ ಎಂದು ಸಂಸದ ಪ್ರತಾಪ್‌ ಸಿಂಹ ಪ್ರತಿಪಾದಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ರೂಪಾ ಅವರ ಪ್ರಶ್ನೆಗಳ ಕುರಿತು ಮಾಧ್ಯಮಗಳೂ ಶೋಧನೆ ಮಾಡಬೇಕು. ಸರ್ಕಾರವೂ ಸಮಿತಿ ರಚಿಸಿ ಸತ್ಯಾಸತ್ಯತೆ ಪರಾಮರ್ಶಿಸಬೇಕು. ಇದು ಐಎಎಸ್‌, ಐಪಿಎಸ್‌ ನಡುವಿನ ಜಗಳವಲ್ಲ. ಕಾನೂನತ್ಮಾಕ ಪ್ರಶ್ನೆಗಳಿಗೆ ಉತ್ತರ ಹುಡುಕುವ ಸಮಯ’ ಎಂದರು.

‘ರೋಹಿಣಿ ಹಾಸನ ಜಿಲ್ಲಾಧಿಕಾರಿಯಾಗಿದ್ದಾಗ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರೊಂದಿಗೆ ಬೀದಿ ರಂಪಾಟವಾಗಿತ್ತು. ಐಎಎಸ್‌ ಅಧಿಕಾರಿ ರಶ್ಮಿ ಮಹೇಶ್ ಮೇಲೆ ಹಲ್ಲೆಯಾಗಿತ್ತು. ಜಿಲ್ಲಾಧಿಕಾರಿ ಶಿಖಾ ಅವರನ್ನು ಸಿದ್ದರಾಮಯ್ಯ ಶಿಷ್ಯ ಕೆ.ಮರೀಗೌಡ ಅವಾಚ್ಯ ಶಬ್ದದಿಂದ ನಿಂದಿಸಿದ್ದರು. ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರನ್ನು ಡ್ರ್ಯಾಗನ್‌ನಲ್ಲಿ ಚುಚ್ಚಿದಾಗ, ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ಅನುಮಾನಸ್ಪದಾವಾಗಿ ಸತ್ತಾಗ, ಕೊಡಗು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ರಾಜ್ಯದಲ್ಲಿ ಯಾವ ಸರ್ಕಾರವಿತ್ತು. ಅಧಿಕಾರಿಗಳ ಸ್ಥಿತಿ ಏನಾಗಿತ್ತು’ ಎಂದು ಪ್ರಶ್ನಿಸಿದರು.

‘2021ರ ಮೇ ತಿಂಗಳಲ್ಲಿ ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಒಂದೇ ದಿನ 24 ಜನ ಮೃತಪಟ್ಟಿದ್ದಕ್ಕೆ, ಮೈಸೂರಿನಿಂದ ಆಮ್ಲಜನಕ ಪೂರೈಕೆಯಾಗದಿದ್ದುದೇ ಕಾರಣ ಎಂಬ ಆರೋಪ ಬಂತು. ಮೈಸೂರಿನಿಂದಲೇ ಕೊಡಗು, ಮಂಡ್ಯಕ್ಕೂ ಆಮ್ಲಜನಕ ಪೂರೈಕೆಯಾಗುತ್ತಿತ್ತು. ಆರೋಪ ಬಂದ ಬಳಿಕ, ಪೂರೈಕೆ ಜವಾಬ್ದಾರಿ ನಾನು ಹೊತ್ತುಕೊಂಡೆ. ಎಸ್‌.ಟಿ.ಸೋಮಶೇಖರ್‌ ಜಿಲ್ಲಾ ಉಸ್ತುವಾರಿ ಸಚಿವರಾದ ಅದೇ ತಿಂಗಳು ಮೈಸೂರಿನಲ್ಲಿ 1,100 ಮಂದಿ ಕೋವಿಡ್‌ನಿಂದ ಮೃತಪಟ್ಟರು. ನಮ್ಮ ಮೇಲೂ ಆರೋಪ ಬಂದಿತ್ತು. ಆ ಬಗ್ಗೆಯೂ ರೂಪಾ ಪ್ರಶ್ನೆ ಎತ್ತಿದ್ದಾರೆ’ ಎಂದರು.

ಮಗನ ಹೆಸರು ಎಳೆದು ತರಬೇಡಿ: ಡಿ.ಕೆ. ರವಿ ತಾಯಿ ಮನವಿ

ರಾಮನಗರ: ‘ನಿಮ್ಮ ಜಗಳದ ನಡುವೆ ನನ್ನ ಮಗನ ಹೆಸರು ಎಳೆದು ತರಬೇಡಿ’ ಎಂದು ಐಎಎಸ್‌ ಅಧಿಕಾರಿಯಾಗಿದ್ದ ದಿವಂಗತ ಡಿ.ಕೆ. ರವಿ ಅವರ ತಾಯಿ ಗೌರಮ್ಮ ಸೋಮವಾರ ಅಧಿಕಾರಿಗಳಾದ ಡಿ. ರೂಪಾ ಮತ್ತು ರೋಹಿಣಿ ಸಿಂಧೂರಿ ಅವರಿಗೆ ಮನವಿ ಮಾಡಿದರು.

ಚನ್ನಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ನನ್ನ ಮಗ ರವಿ, ರೋಹಿಣಿ ಸಿಂಧೂರಿ ಅವರ ಬ್ಯಾಚ್‌ಮೇಟ್. ಈ ಹಿಂದೆ ಆಕೆ ನಮ್ಮ ಮನೆಗೂ ಬಂದಿದ್ದರು. ಅವರಿಗೆ ನನ್ನ ಮಗ ಮೆಸೇಜ್‌ ಮಾಡಿರಲೂಬಹುದು. ಆದರೆ, ಅದೆಲ್ಲ ಈಗ ಮುಗಿದ ಅಧ್ಯಾಯ’ ಎಂದರು.

‘ಐಪಿಎಸ್‌ ಅಧಿಕಾರಿ ಡಿ. ರೂಪಾ ಅವರು ಈಗ ಅದನ್ನೆಲ್ಲ ಪ್ರಸ್ತಾಪಿಸಿ ಅನಗತ್ಯವಾಗಿ ನನ್ನ ಮಗನ ಹೆಸರಿಗೆ ಕಳಂಕ ತರಬಾರದು ಮತ್ತು ನಮ್ಮ ಕುಟುಂಬಕ್ಕೆ ನೋವು ನೀಡಬಾರದು’ ಎಂದು ಮನವಿ ಮಾಡಿದರು.

‘ಇಬ್ಬರೂ ಅಧಿಕಾರಿಗಳಾಗಿ ದೊಡ್ಡ ಹುದ್ದೆಗಳಲ್ಲಿ ಇದ್ದಾರೆ. ಅದನ್ನು ನಿಭಾಯಿಸಿಕೊಂಡು ಹೋಗಬೇಕು’ ಎಂದು ಗೌರಮ್ಮ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT