ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ನಲ್ಲಿ ಹೊಸ ಪ್ರವಾಸೋದ್ಯಮ ನೀತಿ: ಸಚಿವ ಸಿ.ಟಿ.ರವಿ

ಜಾಗತಿಕ ಮತ್ತು ಸ್ಥಳೀಯ ಪ್ರವಾಸೋದ್ಯಮಕ್ಕೆ ಆದ್ಯತೆ
Last Updated 27 ಆಗಸ್ಟ್ 2020, 21:56 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕ ಮತ್ತು ಸ್ಥಳೀಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಹೊಸ ಪ್ರವಾಸೋದ್ಯಮ ನೀತಿ 2020–25 ಅನ್ನು ಸೆಪ್ಟೆಂಬರ್‌ನಲ್ಲೇ ಜಾರಿ ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

ಹೊಸ ಪ್ರವಾಸೋದ್ಯಮ ನೀತಿಯನ್ನು ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ಜಾರಿಗೆ ತರಲಾಗುವುದು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಚಿವರಾಗಿ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ವರ್ಷದ ಸಾಧನೆಗಳನ್ನು ವಿವರಿಸಿದ ಅವರು, ‘ಸ್ಥಳೀಯರಿಗೆ ಉದ್ಯೋಗ, ಪ್ರವಾಸಿ ತಾಣಗಳ ಸರ್ವಾಂಗೀಣ ಅಭಿವೃದ್ಧಿ, ಮೂಲಸೌಕರ್ಯಗಳಿಗೆ ಒತ್ತು ನೀಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

‘ಸಚಿವನಾಗಿ ಅಧಿಕಾರ ಸ್ವೀಕರಿಸಿದ 83 ದಿನಗಳಲ್ಲಿಯೇ ರಾಜ್ಯದ 30 ಜಿಲ್ಲೆಗಳಿಗೆ ಪ್ರವಾಸ ಮಾಡಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದೆ. ಕಾಲಮಿತಿಯೊಳಗೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಸೂಚನೆ ನೀಡಿದ್ದರಿಂದ, ಸಾಧನೆಗಳು ಗೋಚರಿಸುತ್ತಿವೆ‘ ಎಂದರು.

‘ವಿಶ್ವ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದ್ದು, ಇದಕ್ಕೆ ಪೂರಕವಾಗಿ ಸ್ಥಳೀಯ ಮಟ್ಟದಲ್ಲೂ ಕೌಶಲ ಅಭಿವೃದ್ಧಿ, ಸ್ಥಳೀಯ ಆಹಾರ ಪದ್ಧತಿಯನ್ನು ಹೊರ ಜಗತ್ತಿಗೆ ಪರಿಚಯಿಸಲಾಗುವುದು. ಪ್ರಾದೇಶಿಕ ಮಟ್ಟದಲ್ಲಿ ಆಹಾರ ಮೇಳಗಳನ್ನು ನಡೆಸಿ, ಆಹಾರ ಪ್ರಿಯರನ್ನು ಸೆಳೆಯುವ ಖಾದ್ಯಗಳ ಪ್ರವಾಸೋದ್ಯಮ ಬೆಳೆಸಲು ಅವಕಾಶ ಇದೆ’ ಎಂದರು.

ಆದಿವಾಸಿ ಹೆರಿಟೇಜ್, ಅಗ್ರಿ ಟೂರಿಸಂ...

‘ರಾಜ್ಯದ ಬಹುಸಂಸ್ಕೃತಿಯನ್ನು ಉಳಿಸುವ ಮತ್ತು ಅದನ್ನು ದೇಶ–ವಿದೇಶಗಳ ಪ್ರವಾಸಿಗರಿಗೆ ಪರಿಚಯಿಸುವ ಹಾಗೂ ಅನುಭವ ಕಟ್ಟಿಕೊಡುವ ನಿಟ್ಟಿನಲ್ಲಿ ಆದಿವಾಸಿ ಮತ್ತು ಬಂಜಾರ ಕಲ್ಚರಲ್‌ ಹೆರಿಟೇಜ್‌ ನಿರ್ಮಾಣ ಕಲ್ಪನೆಗೆ ಚಾಲನೆ ನೀಡಲಾಗುವುದು’ ಎಂದು ಸಚಿವ ರವಿ ತಿಳಿಸಿದರು.

‘ಇದನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಈ ವರ್ಷ ₹15 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಕೃಷಿ, ತೋಟಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಗಳ ಜಂಟಿ ಸಹಯೋಗದಲ್ಲಿ ಕೃಷಿ ಸಂಸ್ಕೃತಿಯನ್ನು ಕಟ್ಟಿಕೊಡಲು ಅಗ್ರಿ ಟೂರಿಸಂ ಯೋಜನೆ ರೂಪಿಸಲಾಗುತ್ತಿದೆ’ ಎಂದರು.

‘ಕಳೆದ 10 ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ ಗೋಲ್ಡನ್‌ ಚಾರಿಯಟ್‌ ರೈಲು ಸೇವೆಯ ಪುನರಾರಂಭಕ್ಕೆ ಕ್ರಮಕೈಗೊಳ್ಳಲಾಗಿದೆ. ಈ ಸಂಬಂಧ ಭಾರತೀಯ ರೈಲ್ವೆ ನಿಗಮದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT