ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕೃಷಿ ಮಾರುಕಟ್ಟೆ ನಿರ್ಮಾಣಕ್ಕೆ ಸಿದ್ಧತೆ

ಪರವಾನಗಿ ಪಡೆದ ಹಿರಿಯೂರಿನ ಅಕ್ಷಯ ಫುಡ್‌ ಪಾರ್ಕ್‌
Last Updated 21 ಫೆಬ್ರುವರಿ 2021, 22:52 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ರೈತರಿಂದ ಭಾರಿ ವಿರೋಧದ ಬೆನ್ನಲ್ಲೇ ಹಿರಿಯೂರು ತಾಲ್ಲೂಕಿನಲ್ಲಿ ಖಾಸಗಿ ಕೃಷಿ ಮಾರುಕಟ್ಟೆ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಮಾರುಕಟ್ಟೆ ಏಪ್ರಿಲ್‌ ತಿಂಗಳಿಂದ ಕಾರ್ಯಾರಂಭವಾಗುವ ಸಾಧ್ಯತೆ ಇದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆ ತಿದ್ದುಪಡಿಯಾದ ಬಳಿಕ ಅಸ್ತಿತ್ವಕ್ಕೆ ಬರುವ ರಾಜ್ಯದ ಮೊದಲ ಖಾಸಗಿ ಕೃಷಿ ಮಾರುಕಟ್ಟೆ ಇದು ಎನ್ನಲಾಗಿದೆ. ಈ ಸಂಬಂಧ ‘ಅಕ್ಷಯ ಫುಡ್‌ ಪಾರ್ಕ್‌’ ಎಂಬ ಸಂಸ್ಥೆ ಅಕ್ಟೋಬರ್‌ನಲ್ಲೇ ಪರವಾನಗಿ ಪಡೆದಿದೆ.

ಹಿರಿಯೂರು ತಾಲ್ಲೂಕಿನ ಹುಚ್ಚವ್ವನಹಳ್ಳಿಯ 106 ಎಕರೆ ವಿಸ್ತೀರ್ಣದಲ್ಲಿ‘ಅಕ್ಷಯ ಫುಡ್‌ ಪಾರ್ಕ್‌’ ಅಸ್ತಿತ್ವಕ್ಕೆ ಬರಲಿದೆ. ಆಹಾರ ಧಾನ್ಯ, ತರಕಾರಿ, ಹಣ್ಣು ಸೇರಿದಂತೆ ಕೃಷಿ ಉತ್ಪನ್ನಗಳ ವರ್ಗೀಕರಣ, ಮೌಲ್ಯವರ್ಧನೆ ಹಾಗೂ ಪ್ಯಾಕಿಂಗ್‌ ವ್ಯವಸ್ಥೆ ಇದೆ. ಧಾನ್ಯ ಸಂಗ್ರಹ ಗೋದಾಮು, ತರಕಾರಿ ಹಾಗೂ ಹಣ್ಣುಗಳಿಗೆ ಕೋಲ್ಡ್‌ ಸ್ಟೋರೇಜ್‌ ವ್ಯವಸ್ಥೆಯೂ ಇರಲಿದೆ.

‘ಪರ್ಯಾಯ ಕೃಷಿ ಮಾರುಕಟ್ಟೆ ಪರಿಕಲ್ಪನೆ ಕರ್ನಾಟಕಕ್ಕೆ ಹೊಸದು. ಉತ್ತರ ಭಾರತದ ಹಲವೆಡೆ ಇಂತಹ ಮಾರುಕಟ್ಟೆಗಳು ನಿರ್ಮಾಣವಾಗಿವೆ. ಹಲವು ದಿನಗಳಿಂದ ಇದಕ್ಕೆ ಸಿದ್ಧತೆ ನಡೆಯುತ್ತಿತ್ತು. ಪರವಾನಗಿ ದೊರೆತ ಬಳಿಕ ವಿಶ್ವಾಸ ಹೆಚ್ಚಾಗಿದೆ’ ಎನ್ನುತ್ತಾರೆ ‘ಅಕ್ಷಯ ಫುಡ್‌ ಪಾರ್ಕ್‌’ ವ್ಯವಸ್ಥಾಪಕ ನಿರ್ದೇಶಕ ಎಂ.ನಾರಾಯಣಸ್ವಾಮಿ.

ಖರೀದಿದಾರರನ್ನು ಆಹ್ವಾನಿಸುವ ಪ್ರಕ್ರಿಯೆ ಆರಂಭವಾಗಿದೆ. ‍ಪರ್ಯಾಯ ಮಾರುಕಟ್ಟೆ ಬಗ್ಗೆ ರೈತರ ಗಮನ ಸೆಳೆಯುವ ಪ್ರಯತ್ನಗಳೂ ನಡೆಯುತ್ತಿದೆ. ಕೃಷಿ ಉತ್ಪನ್ನವನ್ನು ಗುಣಮಟ್ಟದ ಆಧಾರದಲ್ಲಿ ವಿಂಗಡಿಸಿ ಪ್ರಮಾಣೀಕರಿಸಲಾಗುತ್ತದೆ. ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ–ನಾಮ್‌) ವ್ಯವಸ್ಥೆಯಲ್ಲಿ ಅಂತರ್ಜಾಲದ ಮೂಲಕವೇ ಉತ್ಪನ್ನವನ್ನು ಮಾರಾಟ ಮಾಡಲಾಗುತ್ತದೆ. ಫುಡ್‌ ಪಾರ್ಕ್‌ನಲ್ಲಿರುವ ಇತರ ಕೈಗಾರಿಕೆಗಳೂ ಈ ಉತ್ಪನ್ನವನ್ನು ಖರೀದಿಸಲಿವೆ.

‘ಮೊಟ್ಟೆ, ಮಾಂಸ ಬಿಟ್ಟು ಎಲ್ಲ ಕೃಷಿ ಉತ್ಪನ್ನಗಳನ್ನೂ ಮಾರುಕಟ್ಟೆಗೆ ತರಬಹುದು. ರೈತರು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಿಟ್ಟು ಬೆಲೆ ಹೆಚ್ಚಿದಾಗ ಮಾರಬಹುದು. ಆನ್‌ಲೈನ್‌ನಲ್ಲಿ ಯಾರು ಬೇಕಾದರೂ ಖರೀದಿಸಬಹುದು. ಜೇವರ್ಗಿಯ ಫುಡ್‌ಪಾರ್ಕಿನಲ್ಲೂ ಪರ್ಯಾಯ ಕೃಷಿ ಮಾರುಕಟ್ಟೆ ನಿರ್ಮಾಣಕ್ಕೆ ಚಿಂತನೆ ನಡೆಯುತ್ತಿದೆ’ ಎಂದು ಹೇಳುತ್ತಾರೆ ನಾರಾಯಣಸ್ವಾಮಿ.

ಫುಡ್‌ ಪಾರ್ಕ್‌ ಬಗ್ಗೆ ಅಸಮಾಧಾನ

ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ನಾಲ್ಕು ಫುಡ್‌ ಪಾರ್ಕ್‌ಗಳಲ್ಲಿ ‘ಅಕ್ಷಯ ಫುಡ್‌ ಪಾರ್ಕ್‌’ ಕೂಡ ಒಂದು. 2010ರಲ್ಲಿ ನಿರ್ಮಾಣವಾದ ಈ ಪಾರ್ಕ್‌ನಿಂದ ರೈತರು ಹಾಗೂ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಸರ್ಕಾರ ವಿಧಿಸಿದ ಷರತ್ತುಗಳನ್ನು ಫುಡ್‌ ಪಾರ್ಕ್‌ ಪಾಲಿಸಿಲ್ಲ ಎಂಬ ಬಗ್ಗೆ ಕೈಗಾರಿಕೆ ಹಾಗೂ ಕೃಷಿ ಸಚಿವರಿಗೆ ದೂರುಗಳು ಸಲ್ಲಿಕೆಯಾಗಿದ್ದವು. ಮೂಲಸೌಕರ್ಯ ಕೊರತೆಯಿಂದಾಗಿ ಉದ್ದಿಮೆದಾರರಿಗೆ ಬ್ಯಾಂಕುಗಳು ಸಾಲ ಕೊಡುತ್ತಿಲ್ಲ ಎಂಬ ಆರೋಪವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT