ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಆರೋಗ್ಯ ಕ್ಷೇತ್ರ ಬಲಪಡಿಸಬೇಕು: ರಾಮನಾಥ ಕೋವಿಂದ್

ಆರ್‌ಜಿಎಚ್‌ಎಸ್ 23ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಷ್ಟ್ರಪತಿಯಿಂದ ಭಾಷಣ
Last Updated 7 ಫೆಬ್ರುವರಿ 2021, 8:19 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಶ್ವ ಆರೋಗ್ಯ ಕ್ಷೇತ್ರವನ್ನೇ ಕೋವಿಡ್‌ ಸಂಕಷ್ಟ ತಲ್ಲಣಗೊಳಿಸಿದೆ. ಕೊರೊನೋತ್ತರ ಕಾಲಘಟ್ಟದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಬಲಪಡಿಸಬೇಕಾದ ಅಗತ್ಯವಿದೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅಭಿಪ್ರಾಯಪಟ್ಟರು.

ನಿಮ್ಹಾನ್ಸ್‌ ಸಮಾವೇಶ ಕೇಂದ್ರದಲ್ಲಿ ಭಾನುವಾರ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಎಚ್‌ಎಸ್) 23ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಗಿ ಭಾಗವಹಿಸಿ, ಅವರು ಘಟಿಕೋತ್ಸವ ಭಾಷಣ ಮಾಡಿದರು.

‘ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ಕೋವಿಡ್‌ನ್ನು ಸವಾಲಾಗಿ ಸ್ವೀಕರಿಸಿ, ರಾತ್ರಿ ಹಗಲು ಕೆಲಸ ಮಾಡಿದ್ದಾರೆ. ದೇಶದ ಜನರ ಜೀವ ಉಳಿಸಿದ್ದಾರೆ. ಭವಿಷ್ಯದಲ್ಲಿ ಇಂಥ ಸಾಂಕ್ರಾಮಿಕ ರೋಗವನ್ನು ಸಮರ್ಪಕವಾಗಿ ನಿಯಂತ್ರಿಸಲು ಆರೋಗ್ಯ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ’ ಎಂದು ಅವರು ಒತ್ತಿ ಹೇಳಿದರು.

ಹೆಣ್ಮಕ್ಕಳ ಸಾಧನೆ ಪ್ರಶಂಸನೀಯ: ‘ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಸಾಧನೆ ಮಾಡಿ ಜೀವನದಲ್ಲಿ ಮುಂದೆ ಬರುತ್ತಿರುವುದು ಪ್ರಶಂಸನೀಯ ಸಂಗತಿ. ಈ ಬಾರಿ ವಿಶ್ವವಿದ್ಯಾಲಯದ 111 ಮಂದಿ ಚಿನ್ನದ ಪದಕ ವಿಜೇತರಲ್ಲಿ 87 ಮಂದಿ ಹೆಣ್ಣು ಮಕ್ಕಳು ಎಂದು ಕೇಳಿ ಸಂತಸವಾಯಿತು. ಅದು ಶೇಕಡಾ 80ರಷ್ಟು ಇದ್ದು, ನಿಜಕ್ಕೂ ಉತ್ತಮ ಸಾಧನೆ’ ಎಂದೂ ರಾಷ್ಟ್ರಪತಿ ಹೇಳಿದರು.

‘ಮುಂದಿನ ದಿನಗಳಲ್ಲಿ ಅದರಲ್ಲೂ ವಿಶೇಷವಾಗಿ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ದೇಶವನ್ನು ಮಹಿಳೆಯರು ಮುನ್ನಡೆಸಿದರೆ ನಿಜಕ್ಕೂ ಸಂತೋಷವಾಗುತ್ತದೆ’ ಎಂದೂ ಅವರು ಹೇಳಿದರು.

‘ವೈದ್ಯಕೀಯ ಪಪವಿ ಪಡೆದ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ನಿಜವಾದ ಶಿಕ್ಷಣ ಆರಂಭವಾಗಲಿದೆ. ಅಧ್ಯಯನ ಹಾಗೂ ಸಂಶೋಧನೆಯ ಜೊತೆಗೆ ಜ್ಞಾನವನ್ನು ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಉನ್ನತೀಕರಿಸುತ್ತಾ ಜನ ಸಾಮಾನ್ಯರಿಗೆ ಉತ್ತಮ ಸೇವೆ ನೀಡಬೇಕು’ ಎಂದೂ ಅವರು ಆಶಿಸಿದರು.

‘ಭಾರತವು ವೇದ ಕಾಲದಿಂದಲೂ ಜ್ಞಾನಾಧಾರಿತವಾಗಿ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿತ್ತು. ಕೋವಿಡ್‌ ನಿಯಂತ್ರಣ ಸಂದರ್ಭದಲ್ಲಿ ಆತ್ಮ ನಿರ್ಭರ್‌ ಆಗುವ ನಿಟ್ಟಿನಲ್ಲಿ ಲಸಿಕೆ ಸಂಶೋಧನೆಯ ಜೊತೆಗೆ ವಿದೇಶಕ್ಕೂ ನೀಡುತ್ತಿದ್ದೇವೆ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಘಟಿಕೋತ್ಸವದಲ್ಲಿ ಆರೋಗ್ಯ ವಿಜ್ಞಾನಗಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಅಲಂಗಾರ್ ಸತ್ಯರಂಜನ್ ದಾಸ್ ಹೆಗ್ಡೆ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್‌’ ಗೌರವ ನೀಡಿ ಗೌರವಿಸಲಾಯಿತು. ವಿವಿಧ ವಿಭಾಗಗಳಲ್ಲಿ 122 ಚಿನ್ನದ ಪದಕ ಹಾಗೂ 8 ನಗದು ಬಹುಮಾನಗಳಿಗೆ ಪಾತ್ರರಾದ ಒಟ್ಟು 111 ವಿದ್ಯಾರ್ಥಿಗಳು ಭಾಜನರಾಗಿದ್ದಾರೆ. ಅವರಿಗೆ ರಾಷ್ಟ್ರಪತಿ ಪದವಿ ಪ್ರದಾನ ಮಾಡಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿ ಡಾ.ಕೆ. ಸುಧಾಕರ್‌, ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ಸಚ್ಚಿದಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT