ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ–ಮುಸ್ಲಿಂ ಧಾರ್ಮಿಕ ಸಭೆ: ಧರ್ಮಗುರುಗಳ ಸಾಮರಸ್ಯದ ಸಂದೇಶ

Last Updated 19 ಫೆಬ್ರುವರಿ 2022, 16:38 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಜಾಬ್‌ ವಿಚಾರವಾಗಿ ರಾಜ್ಯದಲ್ಲಿ ಧಾರ್ಮಿಕ ಸಾಮರಸ್ಯ ಕದಡಿದೆ. ರಾಜ್ಯದಲ್ಲಿ ನಾವೆಲ್ಲರೂ ಪ್ರೀತಿ, ಸಾಮರಸ್ಯದಿಂದ ಬದುಕುತ್ತಿದ್ದೆವು. ಮತ್ತೆ ಮೊದಲಿನಂತೆ ಸಾಮರಸ್ಯ ವಾತಾವರಣ ನಿರ್ಮಾಣವಾಗಬೇಕು.ಎಲ್ಲರೂ ಶಾಂತಿ ಕಾಪಾಡಬೇಕು...’

ಹಿಜಾಬ್‌ ವಿಚಾರವಾಗಿ ರಾಜ್ಯದಲ್ಲಿ ಭುಗಿಲೆದ್ದಿರುವ ಧಾರ್ಮಿಕ ಸಂಘರ್ಷ ತಡೆಯುವ ಸಂಬಂಧ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಏರ್ಪಡಿಸಿದ್ದ
‘ಹಿಂದೂ–ಮುಸ್ಲಿಂ ಧಾರ್ಮಿಕ ಸಭೆ’ಯಲ್ಲಿ ವಿವಿಧ ಧರ್ಮಗಳ ಗುರುಗಳು ರಾಜ್ಯದ ಜನರಲ್ಲಿ ಮಾಡಿದ ಮನವಿಯಿದು.

‘ಹಿಜಾಬ್ ಸಂಘರ್ಷ ಮಾನವ ನಿರ್ಮಿತ ಬಿಕ್ಕಟ್ಟು. ವಸ್ತ್ರ ಸಂಹಿತೆ ವಿಚಾರದಲ್ಲಿ ಕ್ಷೋಭೆ ಸೃಷ್ಟಿಸಲಾಗಿದ್ದು, ಸಮಾಜದ ಸಾಮರಸ್ಯ ಕದಡ ಲಾಗಿದೆ.ತಿಳಿವಳಿಕೆ ಉಳ್ಳವರು ಇದಕ್ಕೆ ಪರಿಹಾರ ಸೂತ್ರ ಕಂಡುಕೊಂಡು ಪರಿ ಸ್ಥಿತಿ ತಿಳಿಗೊಳಿಸಬೇಕು.ನಾವೆಲ್ಲರೂ ಶಾಂತಿ, ಸಾಮರಸ್ಯದ ಪರವಾಗಿದ್ದೇವೆ’ ಎಂದು ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

‘ವಿದ್ಯೆ ಕೆಟ್ಟರೆ ಇಡೀ ಜೀವನ ನಾಶವಾಗುತ್ತದೆ. ವಸ್ತ್ರಸಂಹಿತೆಯಲ್ಲಿ ಸಂಘರ್ಷ ನಡೆದಿದೆ. ಅದರ ತೀವ್ರತೆತಗ್ಗಿಸಲು ಸಭೆ ಅನಿವಾರ್ಯ. ಹೈಕೋರ್ಟ್‌ನಲ್ಲೂ ಈ ವಿವಾದದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್‌ ಆದೇಶವನ್ನು ನಾವೆಲ್ಲ ಒಪ್ಪಬೇಕು’ ಎಂದು ಹೇಳಿದರು.

ಮಾದಾರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ,‘ವಿದ್ಯಾರ್ಥಿಗಳ ನಡುವೆ ಉತ್ತಮ ವಾತಾವರಣವಿತ್ತು. ಈಗ ಪರಸ್ಪರ ಮುಖ ನೋಡದ ಸ್ಥಿತಿ ಇದೆ’ ಎಂದು ಅಭಿಪ್ರಾಯಪಟ್ಟರು.

ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು,, ‘ಭಾರತ ಹಲವು ಧರ್ಮಗಳ ತೋಟ. ನಮ್ಮ‌ ಧರ್ಮದ ಜೊತೆ ಬೇರೆ ಧರ್ಮಕ್ಕೂ ಮಾನ್ಯತೆ ಕೊಡುತ್ತೇವೆ. ನಮಗೆ ಸಂವಿ ಧಾನ ಎನ್ನುವ ಧರ್ಮವಿದೆ. ಅದರಡಿ ಎಲ್ಲ ಧರ್ಮಗಳಿಗೆ ಸ್ವಾತಂತ್ರ್ಯವಿದೆ’ ಎಂದರು.

ಸುನ್ನಿ ಜಮಾಯಾತ್ ಕರ್ನಾಟಕದ ಅಧ್ಯಕ್ಯ ಮೌಲಾನ ಶಬ್ಬೀರ್ ಹಾಶ್ಮಿಪೀರ್, ‘ಹಿಜಾಬ್ ಅನ್ನು ಇತ್ತೀಚೆಗೆ ಧರಿಸುತ್ತಿಲ್ಲ ಎಂಬುದನ್ನು ಎಲ್ಲರೂ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಧರ್ಮದ ಹೆಸರಿನಲ್ಲಿ ಶಿಕ್ಷಣ ಹಾಳು ಮಾಡುವುದು ಸರಿಯಲ್ಲ’ ಎಂದು ಹೇಳಿದರು.

ನಾಸೆ ಫೌಂಡೇಷನ್‌ ಅಧ್ಯಕ್ಷ ಮೌಲಾನ ಶಬ್ಬೀರ್ ನಖ್ವಿ, ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಅನಗತ್ಯವಾಗಿ ವಿವಾದ ಸೃಷ್ಟಿ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT