ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಪುಸ್ತಕ ಖರೀದಿಗೆ ಒತ್ತಡ: ‘ಕ್ಯಾಮ್ಸ್‌’ ಆರೋಪ

Last Updated 16 ಮಾರ್ಚ್ 2021, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ಕಾರಣದಿಂದ ಕಳೆದ ಶೈಕ್ಷಣಿಕ ಸಾಲಿನ ಪಠ್ಯ ಪುಸ್ತಕವನ್ನೇ ಪೋಷಕರು ತೆಗೆದುಕೊಂಡು ಹೋಗಿಲ್ಲ. ಹೀಗಾಗಿ, ಪ್ರಸಕ್ತ ಸಾಲಿನ ಪುಸ್ತಕ ಖರೀದಿ ಸಂಬಂಧ ಶಿಕ್ಷಣ ಇಲಾಖೆ ಒತ್ತಡ ಹೇರುವುದು ಸರಿಯಲ್ಲ’ ಎಂದು ಕರ್ನಾಟಕ ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌) ಸರ್ಕಾರಕ್ಕೆ ಮನವಿ ಮಾಡಿದೆ.

‘2021-22ನೇ ಶೈಕ್ಷಣಿಕ ಅವಧಿಗೆ ಅವಶ್ಯವಾದ ಪಠ್ಯಪುಸ್ತಕಗಳನ್ನು ಖರೀದಿಸುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಪುಸ್ತಕ ಖರೀದಿಗೂ ಈ ರೀತಿ ದೌರ್ಜನ್ಯ ನಿಲ್ಲಿಸಬೇಕು. ಕೊರೊನಾ ಕಾರಣದಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಖಾಸಗಿ ಶಾಲೆಗಳಿಗೆ ಉಚಿತವಾಗಿ ಪಠ್ಯಪುಸ್ತಕ ಒದಗಿಸಬೇಕು’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಒತ್ತಾಯಿಸಿದ್ದಾರೆ.

‘ಖಾಸಗಿ ಶಾಲೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಹಲವು ಶಾಲೆಗಳಲ್ಲಿ ಪೋಷಕರು ಮಕ್ಕಳನ್ನುಇನ್ನೂ ದಾಖಲು ಮಾಡಿಲ್ಲ. ಕೆಲವು ಕಡೆಗಳಲ್ಲಿ ಶುಲ್ಕ ಪಾವತಿ ಆಗಿಲ್ಲ. ಅಲ್ಲದೆ, ಕಳೆದ ಸಾಲಿನ ಪುಸ್ತಕವನ್ನೇ ಪೋಷಕರು ತೆಗೆದುಕೊಂಡು ಹೋಗಿಲ್ಲ. ಈ ಪರಿಸ್ಥಿತಿಯಲ್ಲಿ ಶಿಕ್ಷಣ ಇಲಾಖೆ ಪಠ್ಯಪುಸ್ತಕ ಖರೀದಿಸುವಂತೆ ಒತ್ತಡ ಹೇರುವುದು ಸರಿಯಲ್ಲ. ಪಠ್ಯಪುಸ್ತಕ ಸಂಘ ತಮಗೆ ಎಷ್ಟು ಬೇಕೋ ಅಷ್ಟು ಪಠ್ಯ ಪುಸ್ತಕ ಮುದ್ರಿಸಿ ಇಟ್ಟುಕೊಳ್ಳಲಿ. ಮಕ್ಕಳ ದಾಖಲಾತಿ ಪ್ರಕ್ರಿಯ ಮುಗಿದ ಬಳಿಕ ವಿದ್ಯಾರ್ಥಿಗಳ ದಾಖಲಾತಿ ಆಧಾರದಲ್ಲಿ ಪುಸ್ತಕ ಖರೀದಿಸುತ್ತೇವೆ. ಈಗ ಒತ್ತಡ ಹೇರಿ ದೌರ್ಜನ್ಯ ಮಾಡುವುದು ಸರಿಯಲ್ಲ’ ಎಂದೂ ಅವರು ತಿಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೂ ಅವರು ಈ ಬಗ್ಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT