ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿತು, ಕಾರ್ಮಿಕರ ವೇತನ ಇಳಿಯಿತು!

Last Updated 17 ಅಕ್ಟೋಬರ್ 2020, 19:57 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಭಾಗದಲ್ಲಿ ಕೆಲವೊಂದು ಅಗತ್ಯ ವಸ್ತುಗಳು ಮತ್ತು ಅಗತ್ಯ ಸೇವೆಗಳ ಬೆಲೆಯಲ್ಲಿ ಏರಿಕೆಯಾಗಿದೆ. ಖಾದ್ಯತೈಲ ಹಾಗೂ ಬೇಳೆಕಾಳುಗಳ ಬೆಲೆ ಹೆಚ್ಚಳವಾಗಿದ್ದು, ಗ್ರಾಹಕರ ಜೇಬಿಗೆ ಭಾರವಾಗಿವೆ.

ಲಾಕ್‌ಡೌನ್‌ ಘೋಷಣೆಯಾದ ಅವಧಿಯಲ್ಲಿ ಒಂದು ಲೀಟರ್‌ ಅಡುಗೆ ಎಣ್ಣೆ ಬೆಲೆ ₹ 100 ಇತ್ತು. ಆದರೆ ಈಗ ದರ ₹ 128ಕ್ಕೆ ಏರಿದೆ.

‘ಲಾಕ್‌ಡೌನ್‌ ಅವಧಿಯಲ್ಲಿ ಖಾದ್ಯ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ವಿದೇಶದಿಂದ ಆಮದು ಪ್ರಮಾಣ ತಗ್ಗಿತ್ತು. ವಿವಿಧ ಕಂಪನಿಗಳ ಖಾದ್ಯ ತೈಲ ಲೀಟರ್‌ಗೆ ₹ 15ರಿಂದ ₹ 20ರಷ್ಟು ಹೆಚ್ಚಳವಾಗಿದೆ’ ಎಂದು ಮೈಸೂರಿನ ವ್ಯಾಪಾರಿ ವೆಂಕಟೇಶ್‌ ಹೇಳುತ್ತಾರೆ.

‘ಲೀಟರ್‌ ಖಾದ್ಯ ತೈಲದ ಬೆಲೆ ₹ 120 ದಾಟಿರುವ ಕಾರಣ ನಾವೀಗ ಅಡುಗೆಗೆ ಪಾಮ್‌ ಆಯಿಲ್‌ ಬಳಸುತ್ತಿದ್ದೇವೆ. ಗುಣಮಟ್ಟ ಬದಲಾಗಿರುವ ಕಾರಣ ಮನೆ ಮಂದಿಯಲ್ಲಿ ಕೆಮ್ಮು, ನೆಗಡಿ ಕಾಣಿಸಿಕೊಂಡಿದೆ. ಆದರೂ ಈಗ ಪಾಮ್‌ ಆಯಿಲ್‌ಗೆ ಹೊಂದಿಕೊಳ್ಳಬೇಕಾಗಿದೆ’ ಎಂದು ಮಂಡ್ಯ ಸುಭಾಷ್‌ ನಗರದ ರಮೇಶ್‌ ಹೇಳಿದರು.

ತೊಗರಿ ಬೇಳೆ ದರವೂ ಹೆಚ್ಚಾಗಿದ್ದು ಗ್ರಾಹಕರು ಪರದಾಡುವಂತಾಗಿದೆ. ₹ 85 ಇದ್ದ ಕೆ.ಜಿ ತೊಗರಿ ಬೇಳೆ ಈಗ ₹ 115ಕ್ಕೆ ಏರಿಕೆ ಆಗಿದೆ. ‘ತೊಗರಿ ಪೂರೈಕೆಯಲ್ಲಿ ಕೊರತೆಯಾಗಿರುವ ಕಾರಣ ಬೆಲೆ ಏರಿಕೆಯಾಗಿದೆ’ ಎಂದು ಮಂಡ್ಯದ ವ್ಯಾಪಾರಿ ಮೋಹನ್‌ ತಿಳಿಸಿದರು.

ಚಾಮರಾಜನಗರದಲ್ಲಿ ವೈದ್ಯರ ಸಲಹಾ ಶುಲ್ಕ ₹20ರಿಂದ ₹50ರಷ್ಟು ಜಾಸ್ತಿಯಾಗಿದೆ. ಕ್ಷೌರದಂಗಡಿಯಲ್ಲಿ ಶುಲ್ಕ ಮೊದಲಿಗಿಂತ ₹10ರಿಂದ ₹30ರಷ್ಟು ಹೆಚ್ಚಳವಾಗಿದೆ.

ಹಾಸನದಲ್ಲಿ ತರಕಾರಿ, ದಿನಸಿ ಸಾಮಾನುಗಳ ದರ ಹೆಚ್ಚಾಗಿದೆ. ವೈದ್ಯರ ಸಲಹಾ ಶುಲ್ಕ ಗ್ರಾಮೀಣ ಪ್ರದೇಶದಲ್ಲಿ ₹ 100, ನಗರ ಪ್ರದೇಶದಲ್ಲಿ ₹150ರಿಂದ 300ರವರೆಗೆ ಏರಿಕೆ ಆಗಿದೆ. ಕ್ಷೌರ, ಹೇರ್‌ ಕಟಿಂಗ್‌ ಶುಲ್ಕದಲ್ಲೂ ಅಲ್ಪ ಏರಿಕೆಯಾಗಿದೆ.

ಕೋವಿಡ್‌ ಕಾರಣ ಜನರು ಸಮೂಹ ಸಾರಿಗೆ ಬಸ್‌ಗಳಲ್ಲಿ ಹೆಚ್ಚಾಗಿ ಪ್ರಯಾಣಿಸುತ್ತಿಲ್ಲ. ಸ್ವಂತ ವಾಹನಗಳನ್ನು ಬಳಸುತ್ತಿರುವುದರಿಂದ ಗ್ಯಾರೇಜ್‌ಗಳ ಮುಂದೆ ವಾಹನಗಳ ಸಾಲು ನೋಡಬಹುದು.
ಗ್ಯಾರೇಜುಗಳಲ್ಲಿ ಸೇವಾ ಶುಲ್ಕ ಸಹ ಏರಿಕೆ ಆಗಿದೆ. ಕಾರು ವಾಷಿಂಗ್‌ ಶುಲ್ಕ ₹ 400ರಿಂದ ₹500ಕ್ಕೆ ಏರಿಕೆಯಾಗಿದೆ.

ಸಂಬಳ ಇಳಿಕೆ: ಕೊಡಗು ಜಿಲ್ಲೆಯ ಕಾಫಿ ಎಸ್ಟೇಟ್‌ಗಳ ಕೂಲಿ ಕೆಲಸವನ್ನೇ ನಂಬಿ ಎಷ್ಟೋ ಕಾರ್ಮಿಕ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಕೋವಿಡ್‌ ಕಾರಣಕ್ಕೆ ಅವರ ಬದುಕು ಈಗ ಅತಂತ್ರವಾಗಿದೆ. ಮೊದಲಿಗಿಂತ ಕಡಿಮೆ ಸಂಬಳ ಸಿಗುತ್ತಿದೆ ಎಂಬುದು ಕಾರ್ಮಿಕರ ನೋವು. ಈಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಕಾರ್ಮಿಕರು ಸಮಸ್ಯೆಗೆ ಸಿಲುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT