ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಂಶುಪಾಲರ ಹುದ್ದೆ ಭರ್ತಿಗೆ ಶೀಘ್ರ ಚಾಲನೆ

ಬೋಧಕರ ವರ್ಗಾವಣೆ ಪ್ರಕ್ರಿಯೆ ಶೀಘ್ರ ಆರಂಭ: ಅಶ್ವತ್ಥ ನಾರಾಯಣ
Last Updated 11 ಫೆಬ್ರುವರಿ 2021, 14:53 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 310 ಪ್ರಾಂಶುಪಾಲರ ಹುದ್ದೆ ಭರ್ತಿಗೆ ಕೂಡಲೇ ಚಾಲನೆ ನೀಡಲಾಗುವುದು. ಈ ನಿಟ್ಟಿನಲ್ಲಿ ಪ್ರಾಧ್ಯಾಪಕ ಹುದ್ದೆಯ ಪದೋನ್ನತಿ ಪ್ರಕ್ರಿಯೆಗೂ ಚಾಲನೆ ನೀಡಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ನಗರದಲ್ಲಿ ಕರ್ನಾಟಕ ಸರ್ಕಾರಿ ಕಾಲೇಜುಗಳ ಬೋಧಕರ ಸಂಘದ ಪದಾಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಅವರು, ‘2021ರ ವರ್ಗಾವಣೆ ಕಾಯ್ದೆಯ ಪ್ರಕಾರ ಈಗಾಗಲೇ ಸರ್ಕಾರ ವರ್ಗಾವಣೆ ನೀತಿ ರೂಪಿಸಿದೆ. ಈ ವರ್ಷದ ವರ್ಗಾವಣೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಆರಂಭಿಸಲಾಗುವುದು’ ಎಂದರು.

ಪಿಎಚ್‌ಡಿ ಮಾಡಲು ಅರ್ಜಿ ಸಲ್ಲಿಸುವ ವೇಳೆ ನಿರಾಪೇಕ್ಷಣಾ ಪತ್ರ ಕೇಳಬಾರದು. ಬದಲಿಗೆ ಪ್ರವೇಶ ಪಡೆದ ಮೇಲೆಯೇ ಈ ಪತ್ರವನ್ನು ಸಲ್ಲಿಸಿದರೆ ಸಾಕು. ಈ ಬಗ್ಗೆ ಎಲ್ಲ ವಿಶ್ವವಿದ್ಯಾಲಯಗಳಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಪ್ರಾಧ್ಯಾಪಕರ ರಾಷ್ಟ್ರೀಯ ಪಿಂಚಣಿ ಯೋಜನೆಗೆ ರಾಜ್ಯ ಸರ್ಕಾರದ ಪಾಲು ತುಂಬಲಾಗಿಲ್ಲ. ಈ ಮೊತ್ತವನ್ನು ಕೂಡಲೇ ತುಂಬಲಾಗುವುದು. 2006ರ ಯುಜಿಸಿ ವೇತನ ಹಿಂಬಾಕಿ ಮತ್ತು 2019ರ ಏಪ್ರಿಲ್‌ನಿಂದ ಪಾವತಿಯಾಗಬೇಕಿರುವ ವೇತನ ಕುರಿತು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಲಾಗುವುದು’ ಎಂದೂ ಅವರು ತಿಳಿಸಿದರು.

ಬೋಧಕ ಸಿಬ್ಬಂದಿ ಪದನಾಮ:

‘ಕಾಲೇಜುಗಳಲ್ಲಿ ಈವರೆಗೂ ಬೋಧಕೇತರ ಸಿಬ್ಬಂದಿಯಾಗಿದ್ದ ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಸಿಬ್ಬಂದಿಗೆ ಪ್ರಾಧ್ಯಾಪಕರ ಸ್ಥಾನಮಾನ ನೀಡುವುದು, ಸರ್ಕಾರಿ ಸ್ವಾಮ್ಯದಲ್ಲಿರುವ 108 ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅರ್ಹ ಪ್ರಾಧ್ಯಾಪಕರಿಗೆ ಪಿಎಚ್‌ ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಲು ಅವಕಾಶ ಕೊಡುವ ಬಗ್ಗೆ ಪರಿಶೀಲಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

‘2003ರಲ್ಲಿ ನೇಮಕಗೊಂಡ ಅರೆಕಾಲಿಕ ಉಪನ್ಯಾಸಕರಿಗೆ ಮಾನವೀಯತೆಯ ಆಧಾರದ ಮೇಲೆ ಪದೋನ್ನತಿ ನೀಡಲು ಹಾಗೂ ಬಾಕಿ ಇರುವ ಪದೋನ್ನತಿ ಪ್ರಸ್ತಾವಗಳನ್ನು ಕೆಲವೇ ದಿನಗಳಲ್ಲಿ ಮಂಜೂರು ಮಾಡಲಾಗುವುದು’ ಎಂದು ಸಚಿವರು ಹೇಳಿದರು.

ಎಲ್ಲ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಉಪಮುಖ್ಯಮಂತ್ರಿಯವರಿಗೆ ಸಂಘದ ಅಧ್ಯಕ್ಷ ಡಾ. ಟಿ.ಎಂ. ಮಂಜುನಾಥ್ ಧನ್ಯವಾದ ಹೇಳಿದರು.

ಸಭೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌, ಮುಖ್ಯ ಆಡಳಿತಾಧಿಕಾರಿ ಬಾಲಚಂದ್ರ ಹಾಗೂ ಇತರೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT