ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಖಾಸಗೀಕರಣ: ಕೇಂದ್ರದ ಪ್ರಸ್ತಾವ ತಿರಸ್ಕರಿಸಿದ ರಾಜ್ಯ ಸರ್ಕಾರ

Last Updated 18 ಅಕ್ಟೋಬರ್ 2020, 21:03 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್‌ ಸರಬರಾಜು ನಿಗಮಗಳನ್ನು (ಎಸ್ಕಾಂ) ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಖಾಸಗೀಕರಣಗೊಳಿಸುವ ಕ್ರಮ ಸದ್ಯದ ಪರಿಸ್ಥಿತಿಯಲ್ಲಿ ಅಗತ್ಯವಿಲ್ಲ ಎಂದೂ ಹೇಳಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್‌) ಅಡಿ ವಿದ್ಯುತ್‌ ವಿತರಿಸುವ ಐದು ಎಸ್ಕಾಂಗಳ ಪೈಕಿ, ಮೂರನ್ನು ಖಾಸಗಿಯವರ ನಿರ್ವಹಣೆಗೆ ಕೊಡುವಂತೆ ಕೇಂದ್ರದ ಪ್ರಸ್ತಾವದಲ್ಲಿತ್ತು. ಕೋವಿಡ್‌ನಿಂದ ಆರ್ಥಿಕ ವ್ಯವಸ್ಥೆಗೆ ಹಿನ್ನಡೆ ಉಂಟಾಗಿರುವುದರಿಂದ ಈ ಸುಧಾರಣಾ ಕ್ರಮ ಕೈಗೊಳ್ಳಬೇಕಾಗಿದ್ದು, ಪ್ರತಿಕ್ರಿಯೆ ನೀಡುವಂತೆ ಸೆ. 20ರಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ವಿದ್ಯುತ್ ಸಚಿವಾಲಯ ಪ್ರಸ್ತಾವ ಸಲ್ಲಿಸಿತ್ತು.

ದೇಶದ 34 ಎಸ್ಕಾಂಗಳ ಪೈಕಿ, ರಾಜ್ಯದ ಬೆಸ್ಕಾಂ (ಬೆಂಗಳೂರು), ಚೆಸ್ಕಾಂ (ಮೈಸೂರು) ಹಾಗೂ ಜೆಸ್ಕಾಂ (ಕಲಬುರ್ಗಿ)ಗಳನ್ನು ಖಾಸಗೀಕರಣಗೊಳಿಸಲು ಸಚಿವಾಲಯ ಗುರುತಿಸಿತ್ತು. ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಎಸ್ಕಾಂಗಳನ್ನು ಮೇ ತಿಂಗಳಲ್ಲಿ ಖಾಸಗೀಕರಣಗೊಳಿಸಲಾಗಿದೆ.

ಕೇಂದ್ರದ ಪ್ರಸ್ತಾವಕ್ಕೆ ಪ್ರತಿಕ್ರಿಯೆ ನೀಡಲು ಅ. 5 ಕೊನೆಯ ದಿನವಾಗಿತ್ತು. ಪ್ರತಿಕ್ರಿಯೆ ನೀಡಲು ಹೆಚ್ಚುವರಿಯಾಗಿ ಒಂದು ವಾರ ಕಾಲಾವಕಾಶವನ್ನೂ ರಾಜ್ಯ ಸರ್ಕಾರ ಕೇಳಿತ್ತು.

‘ರಾಜ್ಯದಲ್ಲಿನ ಎಸ್ಕಾಂಗಳು ಆರ್ಥಿಕವಾಗಿ ಸದೃಢವಾಗಿವೆ. ಅವುಗಳನ್ನು ಖಾಸಗೀಕರಣಗೊಳಿಸುವ ಅವಶ್ಯಕತೆ ಸದ್ಯಕ್ಕಿಲ್ಲ ಎಂಬ ಅಂಶವೂ ಸೇರಿದಂತೆ ವಿವರವಾದ ಪ್ರತಿಕ್ರಿಯೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇವೆ’ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಖಾಸಗೀಕರಣ ವಿರೋಧಿಸಿ ನಿಗಮಗಳ ಉದ್ಯೋಗಿಗಳು, ವಿದ್ಯುತ್‌ ಗುತ್ತಿಗೆದಾರರು ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT