ಸೋಮವಾರ, ಸೆಪ್ಟೆಂಬರ್ 28, 2020
22 °C
ವೇತನ ನೀಡದ ಖಾಸಗಿ ಶಿಕ್ಷಣ ಸಂಸ್ಥೆಗಳು– ಕೆಲಸ ಕಳೆದುಕೊಳ್ಳುತ್ತಿರುವ ಶಿಕ್ಷಕರು

ಖಾಸಗಿ ಶಾಲೆ ಬಾಗಿಲು: ಶಿಕ್ಷಕರ ಬಾಳು ಗೋಳು

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

ಖಾಸಗಿ ಶಾಲೆ ಶಿಕ್ಷಕರು–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ‘ನಾವು  ಆಡಳಿತ ಮಂಡಳಿಗೂ ಬೇಡವಾಗಿದ್ದೇವೆ. ಸರ್ಕಾರಕ್ಕೂ ಬೇಡವಾಗಿದ್ದೇವೆ. ನಮ್ಮ ಶಾಲೆಗಳು ಮುಚ್ಚಿದಾಗಿನಿಂದ ಕೆಲಸ–ವೇತನವಿಲ್ಲದೆ ಬೀದಿಗೆ ಬಿದ್ದಿದ್ದೇವೆ...’

ಇದು ನಾಲ್ಕು ತಿಂಗಳಿಗೂ ಹೆಚ್ಚು ಅವಧಿಯಿಂದ ವೇತನ ಇಲ್ಲದೇ ಪರದಾಡುತ್ತಿರುವ ಖಾಸಗಿ ಶಾಲೆಗಳ ಶಿಕ್ಷಕರ ಅಳಲು.

‘ಲಾಕ್‌ಡೌನ್‌ ಆದಾಗಿನಿಂದ ನಮಗೆ ವೇತನ ನೀಡುತ್ತಿಲ್ಲ. ಬೋಧನೆ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ಮತ್ತೊಂದು ಆದಾಯದ ಮೂಲವೂ ಇಲ್ಲ. ಮನೆ ಬಾಡಿಗೆ ಕಟ್ಟುವುದಕ್ಕೂ ಆಗುತ್ತಿಲ್ಲ’ ಎಂದು ಅಳಲು ತೋಡಿಕೊಳ್ಳುತ್ತಾರೆ ದಾವಣಗೆರೆಯ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುವ ಶಿಕ್ಷಕರೊಬ್ಬರು. 

‘ನಮ್ಮ ಸಮಸ್ಯೆಯ ಅರಿವಿದ್ದರೂ ಇಲ್ಲದಂತೆ ಸರ್ಕಾರ ವರ್ತಿಸುತ್ತಿದೆ. ಶುಲ್ಕ ಕಟ್ಟಲು ಒತ್ತಾಯ ಮಾಡಬೇಡಿ ಎಂದು ಸರ್ಕಾರ ಪ್ರಾರಂಭದಲ್ಲಿ ಹೇಳಿದ್ದನ್ನೇ ನೆಪವಾಗಿಟ್ಟುಕೊಂಡು ದುಡ್ಡಿರುವ ಪೋಷಕರೂ ಶುಲ್ಕ ಕಟ್ಟುತ್ತಿಲ್ಲ. ಆಡಳಿತ ಮಂಡಳಿ–ಸರ್ಕಾರದ ನಡುವಿನ ಸಂಘರ್ಷದಲ್ಲಿ ನಾವು ಸಂಕಷ್ಟಕ್ಕೆ ಈಡಾಗಿದ್ದೇವೆ’ ಎನ್ನುತ್ತಾರೆ ಬೆಂಗಳೂರಿನ ನಾಗರಭಾವಿಯ ಶಿಕ್ಷಕಿಯೊಬ್ಬರು. 

‘ಏಪ್ರಿಲ್‌ನಿಂದಲೂ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಪರಿಶೀಲಿಸಲಾಗುವುದು, ಗಮನಿಸಲಾಗುವುದು, ಸಮಸ್ಯೆಯ ಅರಿವಿದೆ ಎಂದು ಹೇಳುತ್ತಾರೆ. ಆದರೆ, ಪರಿಹಾರ ಮಾತ್ರ ಒದಗಿಸುತ್ತಿಲ್ಲ. ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್‌ ಘೋಷಿಸುವುದು ಸರ್ಕಾರಕ್ಕೆ ಕಷ್ಟವೇನಲ್ಲ’ ಎಂದು ಅವರು ಹೇಳುತ್ತಾರೆ.

ಅತಿಥಿ ಶಿಕ್ಷಕರಿಗೂ ವೇತನವಿಲ್ಲ: 

‘ಬಾಗಲಕೋಟೆಯ ಗುಳೇದಗುಡ್ಡದಲ್ಲಿ ಸರ್ಕಾರಿ ಶಾಲೆಯಲ್ಲಿಯೇ ನಾನು ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ತಿಂಗಳಿಗೆ ₹7,500 ಗೌರವ ಧನವಿದೆ. ಆದರೆ, ಎರಡು–ಮೂರು ತಿಂಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ವೇತನ ನೀಡಿಲ್ಲ. ಸರ್ಕಾರವೇ ಸರಿಯಾಗಿ ವೇತನ ಪಾವತಿಸುವುದಿಲ್ಲ ಎಂದ ಮೇಲೆ ಖಾಸಗಿಯವರಿಗೆ ಹೇಳಿ ಪ್ರಯೋಜನವೇನಿದೆ’ ಎಂದು ಶಿಕ್ಷಕರೊಬ್ಬರು ದೂರಿದರು. 

‘ಹೋದ ವರ್ಷದ ವೇತನ, ಕಳೆದ ಜೂನ್‌ನಲ್ಲಿ ನೀಡಿದ್ದಾರೆ. ಯಾವಾಗಲೂ ತಿಂಗಳಿಗೆ ಸರಿಯಾಗಿ ವೇತನ ಪಾವತಿಸುವುದಿಲ್ಲ’ ಎಂದು ಅವರು ಹೇಳಿದರು. 

ರಾಜ್ಯದಲ್ಲಿ ಸುಮಾರು 20 ಸಾವಿರ ಖಾಸಗಿ ಶಾಲೆಗಳಿದ್ದು, ಈ ಶಾಲೆಗಳಲ್ಲಿ ಸುಮಾರು 2.50 ಲಕ್ಷ ಶಿಕ್ಷಕ, ಶಿಕ್ಷಕಿಯರು ಕೆಲಸ ಮಾಡುತ್ತಿದ್ದಾರೆ.

‘ಆರ್‌ಟಿಇ ಹಣವೇ ಬಂದಿಲ್ಲ’

‘ಪ್ರಾರಂಭದಲ್ಲಿ ಸರ್ಕಾರವೇ ಶುಲ್ಕ ತೆಗೆದುಕೊಳ್ಳಬೇಡಿ ಎಂದಿದ್ದಕ್ಕೆ ಬಹಳಷ್ಟು ಪೋಷಕರು ಶುಲ್ಕ ಕಟ್ಟಲೇ ಇಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಿಂದಿನ ವರ್ಷದ ಆರ್‌ಟಿಇ ಬಾಕಿಯೇ ₹1,000 ಕೋಟಿಯವರೆಗೆ ಬರಬೇಕು. ₹275 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳುತ್ತಾರೆ. ಆದರೆ, ಆ ಹಣ ಇನ್ನೂ ನಮ್ಮ ಕೈಗೆ ಸಿಕ್ಕಿಲ್ಲ’ ಎಂದು ರಾಜ್ಯ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಹೇಳುತ್ತಾರೆ.

‘ಬಹಳಷ್ಟು ಶಾಲೆಗಳ ಬ್ಯಾಂಕ್‌ ಖಾತೆಯಲ್ಲಿ ಹಣವಿಲ್ಲ. ಬೇರೆ ಕಟ್ಟಡ ಖರೀದಿ, ಶಾಲಾ ಕಟ್ಟಡ ಅಭಿವೃದ್ಧಿಗೆ ಹಣ ಬಳಸಿದ್ದಾರೆ. ಕೆಲವು ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಹಣವಿಲ್ಲದೆ ಶಿಕ್ಷಕರಿಗೆ ವೇತನ ನೀಡಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸುತ್ತಾರೆ.

‘ಮಾರ್ಚ್‌ಗಿಂತ ಮೊದಲೇ ದಾಖಲಾತಿ ಆರಂಭಿಸಿದ್ದ ಕೆಲವು ಶಾಲೆಗಳು ವೇತನ ನೀಡುತ್ತಿವೆ. ಆದರೆ, ಶಾಲೆಯ ಬ್ಯಾಂಕ್‌ ಖಾತೆಯಲ್ಲಿ ಸಾಕಷ್ಟು ಹಣವಿದ್ದೂ, ಶಿಕ್ಷಕರಿಗೆ ವೇತನ ನೀಡದಿರುವುದು ತಪ್ಪು. ಇಂತಹ ಶಾಲೆಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ’ ಎಂದೂ ಅವರು ಹೇಳುತ್ತಾರೆ.

ಬೇಡಿಕೆಗಳೇನು ?

* ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು  

* ಆರ್‌ಟಿಇ ಮರುಪಾವತಿ ಹಣ ಸಂಸ್ಥೆಗಳಿಗೆ ಕೂಡಲೇ ಪಾವತಿಸಬೇಕು

* ಬ್ಯಾಂಕುಗಳಿಂದ ಸಾಲ ಸೌಲಭ್ಯ ಒದಗಿಸಬೇಕು

* ಕೆಲಸದಿಂದ ತೆಗೆಯದಂತೆ ಆದೇಶಿಸಬೇಕು. ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು

‘ಮೂರು ದಿನಗಳಲ್ಲಿ ಪರಿಹಾರ ಕ್ರಮ’

‘ಯಾವ ರೀತಿ ಸಮಸ್ಯೆ ಪರಿಹರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಮೂರು–ನಾಲ್ಕು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ತಿಳಿಸಿದರು.

‘ಆರ್‌ಟಿಇ ಮರುಪಾವತಿಯ ಮೊದಲ ಕಂತಿನಲ್ಲಿ ₹275 ಕೋಟಿ ಬಿಡುಗಡೆ ಮಾಡಿದ್ದು, ₹260 ಕೋಟಿ ಈಗಾಗಲೇ ಸಂಸ್ಥೆಗಳ ಖಾತೆಗೆ ಜಮಾ ಮಾಡಲಾಗಿದೆ. ಎರಡನೇ ಕಂತಿನ ಹಣ ಬಿಡುಗಡೆಗೂ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

‘ಶಾಲೆಗಳು ಪುನರಾರಂಭವಾದರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ಶಾಲೆ ಪ್ರಾರಂಭವಾದರೆ ಪೋಷಕರು ಬೋಧನಾ ಶುಲ್ಕ ಕೊಡುತ್ತಾರೆ, ಕನಿಷ್ಠ ವೇತನವಾದರೂ ಬರುತ್ತದೆ ಎಂದು ಸಂಸ್ಥೆಗಳವರು ಹೇಳುತ್ತಾರೆ. ಶಾಲೆಗಳನ್ನು ಪ್ರಾರಂಭಿಸುವುದು ಕೇಂದ್ರ ಸರ್ಕಾರದ ಆದೇಶವನ್ನು ಅವಲಂಬಿಸಿದೆ. ಅವರ ಆದೇಶ ಎದುರು ನೋಡುತ್ತಿದ್ದೇವೆ’ ಎಂದರು.

‘ಶಿಕ್ಷಕರಿಗೆ ತಲಾ ₹10 ಸಾವಿರ ನೀಡಬೇಕೆಂದರೆ ₹240 ಕೋಟಿ ಬೇಕಾಗುತ್ತದೆ. ಸರ್ಕಾರಿ ಶಾಲಾ ಶಿಕ್ಷಕರಿಗೆ ಒಂದೆರಡು ದಿನದ ವೇತನ ನೀಡಲು ಹೇಳಿದ್ದೇವೆ. ಒಂದು ದಿನದ ವೇತನ ₹37 ಕೋಟಿ ಆಗುತ್ತದೆ. ಮೂರು ದಿನದ ವೇತನ ನೀಡಿದರೂ ₹100ಕೋಟಿ ಆಗಬಹುದು. ಇನ್ನೂ ₹140 ಕೋಟಿ ಬೇಕು. ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸುತ್ತಿದ್ದೇವೆ’ ಎಂದರು.

* ನಮ್ಮ ಶಾಲೆಯಲ್ಲಿ ಏಪ್ರಿಲ್‌ನಿಂದಲೇ ವೇತನ ನೀಡಿಲ್ಲ. ಯಾವ ಮಕ್ಕಳ ಅಡ್ಮಿಷನ್‌ ಆಗುತ್ತಿಲ್ಲ. ಕೆಲವರು ಶುಲ್ಕ ಕಟ್ಟಿಲ್ಲ. ಅನಿವಾರ್ಯವಾಗಿ ಹೊಲಕ್ಕೆ ದುಡಿಯಲು ಹೋಗುತ್ತಿದ್ದೇನೆ

- ಮಾರುತಿ ಬಡಿಗೇರ,  ಶಿಕ್ಷಕ, ಹುಬ್ಬಳ್ಳಿ

* ಮೂರು ತಿಂಗಳಿನಿಂದ ವೇತನವನ್ನೇ ಕೊಟ್ಟಿಲ್ಲ. ಶಾಲೆ ಪ್ರಾರಂಭವಾಗುವವರೆಗೂ ಇತ್ತ ಸುಳಿಯಬೇಡಿ ಎನ್ನುತ್ತಾರೆ

- ಆರ್.ಕೆ. ವೀರಭದ್ರಪ್ಪ, ಶಿಕ್ಷಕ, ವಾಡಿ, ಕಲಬುರ್ಗಿ

* ಏಪ್ರಿಲ್‌ನಿಂದ ಶೇ 50ರಷ್ಟು ವೇತನ ನೀಡುತ್ತಿದ್ದಾರೆ. ಮನೆಯಲ್ಲಿ ನಾನೊಬ್ಬನೇ ದುಡಿಯುವುದು. ಬದುಕು ಕಷ್ಟವಾಗಿದೆ

- ಎಸ್. ಪ್ರಭಾತ್‌, ದೈಹಿಕ ಶಿಕ್ಷಣ ಶಿಕ್ಷಕ, ಮಂಗಳೂರು

* ರಾಜಕೀಯ ನಾಯಕರು ಅವರ ಸಂಸ್ಥೆಗಳ ಶಿಕ್ಷಕರಿಗೆ ವೇತನ ನೀಡಿದರೆ. ನಂತರ, ಎಲ್ಲರೂ ಅವರನ್ನು ಅನುಸರಿಸುತ್ತಾರೆ

- ಎಚ್.ಟಿ. ಭರತ್‌ಕುಮಾರ್, ಶಿಕ್ಷಣ ಉಳಿಸಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ

ಅಂಕಿ–ಅಂಶ

20 ಸಾವಿರ

ರಾಜ್ಯದಲ್ಲಿರುವ ಖಾಸಗಿ ಶಾಲೆಗಳ ಅಂದಾಜು ಸಂಖ್ಯೆ

2.50 ಲಕ್ಷ

ಖಾಸಗಿ ಶಾಲೆಗಳಲ್ಲಿನ ಬೋಧಕರ ಅಂದಾಜು ಸಂಖ್ಯೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು