ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಿ ಭೇಟಿಗೆ ಸಾಕ್ಷ್ಯ ಕೊಡಿ: ಬಿಜೆಪಿ ಮುಖಂಡರಿಗೆ ಪ್ರಿಯಾಂಕ್‌ ಖರ್ಗೆ ಸವಾಲು

Last Updated 17 ನವೆಂಬರ್ 2021, 17:52 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಮಂತ್ರಿಯಾಗಿದ್ದ ಅವಧಿಯಲ್ಲಿ ಹ್ಯಾಕರ್‌ ಶ್ರೀಕೃಷ್ಣನನ್ನು ಭೇಟಿಯಾಗಿದ್ದೆ ಎಂಬ ಆರೋಪಕ್ಕೆ ಸಾಕ್ಷ್ಯವಿದ್ದರೆ ಬಿಜೆಪಿಯವರು ಬಹಿರಂಗಪಡಿಸಲಿ’ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರೊಂದಿಗೆ ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಶ್ರೀಕೃಷ್ಣನನ್ನು ಭೇಟಿ ಮಾಡಿದ್ದೆ ಎಂದು ಬಿಜೆಪಿ ವಕ್ತಾರ ಗಣೇಶ್‌ ಕಾರ್ಣಿಕ್‌ ಆರೋಪಿಸಿದ್ದಾರೆ. ನಾನು ಆತನನ್ನು ಯಾವತ್ತೂ ಭೇಟಿಮಾಡಿಲ್ಲ’ ಎಂದರು.

ಬಿಟ್‌ಕಾಯಿನ್‌ ಹ್ಯಾಕಿಂಗ್‌ ಹಗರಣದ ವಿಚಾರದಲ್ಲಿ ಬಿಜೆಪಿ ಸರ್ಕಾರ ಏನನ್ನೋ ಮುಚ್ಚಿಡಲು ಯತ್ನಿಸುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರಕರಣದ ಕುರಿತು ಸರಿಯಾದ ತನಿಖೆ ನಡೆದರೆ ಬಿಜೆಪಿ ಸರ್ಕಾರದಲ್ಲಿ ಮೂರನೇ ಮುಖ್ಯಮಂತ್ರಿ ಬರುತ್ತಾರೆ ಎಂಬ ಹೇಳಿಕೆಗೆ ಈಗಲೂ ತಾವು ಬದ್ಧ. ಆದರೆ, ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ ಎಂದು ದೂರಿದರು.

ಶ್ರೀಕಿ ರಾಜ್ಯ ಸರ್ಕಾರದ ಇ–ಸಂಗ್ರಹಣಾ ವ್ಯವಸ್ಥೆಯ ಸರ್ವರ್‌ ಹ್ಯಾಕ್‌ ಮಾಡಿ ಕೋಟಿಗಟ್ಟಲೆ ಹಣ ದೋಚಿದ್ದ. ಅದರ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಸರ್ಕಾರ ಹೇಳಬೇಕು. ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನೂ ಬಹಿರಂಗಪಡಿಸಲಿ ಎಂದು ಪ್ರಿಯಾಂಕ್‌ ಆಗ್ರಹಿಸಿದರು.

ಮುಚ್ಚಿಡಲು ಸಂಘಟಿತ ಯತ್ನ: ರಾಮಲಿಂಗಾ ರೆಡ್ಡಿ ಮಾತನಾಡಿ, ‘ಪ್ರಕರಣದಲ್ಲಿ ಏನೂ ಇಲ್ಲ ಎಂದು ಮುಖ್ಯಮಂತ್ರಿ ಮತ್ತು ಸಚಿವರು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಅದರ ಬೆನ್ನಲ್ಲೇ, ಕಾಂಗ್ರೆಸ್‌ನವರು ಇದ್ದಾರೆ, ಸಿಐಡಿ ತನಿಖೆ ನಡೆಯುತ್ತಿದೆ ಎಂಬ ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ಕಾಂಗ್ರೆಸ್‌ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂರಿಸಿ ಪ್ರಕರಣವನ್ನು ಮುಚ್ಚಿಹಾಕಲು ಸಂಘಟಿತ ಪ್ರಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT