ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಗ ಕುಟುಂಬದವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು ಅಕ್ಷಮ್ಯ: ಪ್ರಿಯಾಂಕ್ ಖರ್ಗೆ

Last Updated 29 ಡಿಸೆಂಬರ್ 2021, 10:01 IST
ಅಕ್ಷರ ಗಾತ್ರ

ಬೆಂಗಳೂರು: ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಗ ಕಾಲೋನಿಯಲ್ಲಿ ಸೋಮವಾರ ರಾತ್ರಿ ಕೊರಗ ಸಮುದಾಯದ ಹಲವರ ಮೇಲೆ ಪೊಲೀಸರು ಲಾಠಿ ಚಾರ್ಚ್‌ ನಡೆಸಿದ್ದನ್ನು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ.

ಈ ವಿಚಾರವನ್ನು ಸಾಮಾಜಿಕ ಮಾಧ್ಯಮ ‘ಕೂ’ನಲ್ಲಿ ಉಲ್ಲೇಖಿಸಿರುವ ಅವರು, ಪೊಲೀಸರ ಕೃತ್ಯ ಅಕ್ಷಮ್ಯ ಎಂದು ಹೇಳಿದ್ದಾರೆ.

‘ಮೈಕ್ ಬಳಸಿದ ಒಂದೇ ಕಾರಣಕ್ಕೆ ಪೊಲೀಸರು ಕೊರಗ ಕುಟುಂಬವೊಂದರ ಮದುವೆ ಕಾರ್ಯಕ್ರಮಕ್ಕೆ ನುಗ್ಗಿ ವೃದ್ಧರು, ಮಕ್ಕಳು, ಮಹಿಳೆಯರು, ಮದುಮಗ ಎಂಬುದನ್ನೂ ನೋಡದೆ ಮನಸೋ ಇಚ್ಛೆ ಥಳಿಸಿದ್ದು ಅಕ್ಷಮ್ಯ ಕೃತ್ಯ. ಸಮಾಜ ಕಲ್ಯಾಣ ಸಚಿವರ ತವರೂರಲ್ಲೇ ಈ ಘಟನೆ ನಡೆದಿರುವುದು, ಈ ದಲಿತ ವಿರೋಧಿ ಬಿಜೆಪಿ ಸರ್ಕಾರದ ದಬ್ಬಾಳಿಕೆ ಧೋರಣೆಗೆ ಹಿಡಿದ ಕೈಗನ್ನಡಿ’ ಎಂದು ಪ್ರಿಯಾಂಕ್ ಖರ್ಗೆ ಉಲ್ಲೇಖಿಸಿದ್ದಾರೆ.

‘ಇಷ್ಟೆಲ್ಲಾ ನಡೆದಿದ್ದರೂ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಸರ್ಕಾರದ ಯಾವೊಬ್ಬರೂ ಈವರೆಗೂ ಸ್ಥಳಕ್ಕೆ ಭೇಟಿ ನೀಡಿಲ್ಲ, ಪೊಲೀಸ್ ದೌರ್ಜನ್ಯದ ಸಂತ್ರಸ್ತರ ನೋವು ಆಲಿಸಿಲ್ಲ. ಈ ಸರ್ಕಾರ ಬಂದಾಗಿನಿಂದ ದಲಿತ ಸಮುದಾಯದ ಜನರ ಮೇಲಿನ ದೌರ್ಜನ್ಯದ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿಯೇ ಸಾಗುತ್ತಿದೆ’ ಎಂದು ಅವರು ಟೀಕಿಸಿದ್ದಾರೆ.

‘ಶೋಷಿತರು ಒಳ್ಳೆ ಬಟ್ಟೆ ಹಾಕಿದರೆ ಸಹಿಸರು, ಶೋಷಿತರು ದುಡಿದು ತಿಂದರೂ ಸಹಿಸರು, ಶೋಷಿತರು ದೇವಾಲಯಕ್ಕೆ ಬಂದರೂ ಸಹಿಸರು, ಶೋಷಿತರ ಏಳಿಗೆಯನ್ನು ಸಹಿಸರು, ಶೋಷಿತರು ಸಂಭ್ರಮಿಸಿದರೂ ಸಹಿಸರು. ಅಶಕ್ತ ಕೊರಗ ಸಮುದಾಯದ ಜನರ ಮೇಲೆ ದೌರ್ಜನ್ಯ ನಡೆದಿದ್ದರೂ ಅಲ್ಲಿ ’ಭಯಂಕರ’ ಹಿಂದೂ ರಕ್ಷಕರಿದ್ದರೂ ಇವರ ನೆರವಿಗೆ ಈವರೆಗೂ ನಿಂತಿಲ್ಲವೇಕೆ’ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಗ ಕಾಲೋನಿಯಲ್ಲಿ ಸೋಮವಾರ ರಾತ್ರಿ ನಡೆದ ಮೆಹೆಂದಿ ಕಾರ್ಯಕ್ರಮದಲ್ಲಿ ಅವಧಿ ಮೀರಿ ಲೌಡ್‌ ಸ್ಪೀಕರ್ ಬಳಸಿದ ಆರೋಪದ ಮೇಲೆ ಮದುಮಗ ಸೇರಿ ಕೊರಗ ಸಮುದಾಯದ ಹಲವರ ಮೇಲೆ ಪೊಲೀಸರು ಲಾಠಿ ಚಾರ್ಚ್‌ ನಡೆಸಿದ್ದಾರೆ ಎಂದು ಕೊರಗ ಸಮುದಾಯದವರು ಮಂಗಳವಾರ ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT