ಶನಿವಾರ, ಡಿಸೆಂಬರ್ 3, 2022
20 °C

ಪ್ರಿಯಾಂಕ್ ಖರ್ಗೆ ಕೊಲೆಗೆ ಬಿಜೆಪಿ ಸರ್ಕಾರದ ಸಂಚು: ಕಾಂಗ್ರೆಸ್ ಮುಖಂಡ ಗಂಭೀರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ‘ಬಿಟ್ ಕಾಯಿನ್ ಹಗರಣ, ಪಿಎಸ್‌ಐ ನೇಮಕಾತಿ ಅಕ್ರಮ, ಬೋರ್‌ವೆಲ್ ಅವ್ಯವಹಾರದ ವಿರುದ್ಧ ಸದನದ ಒಳಗೆ ಮತ್ತು ಹೊರಗೂ ಧ್ವನಿ ಎತ್ತುತ್ತಿರುವ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಕೊಲೆ ಮಾಡಲು ಬಿಜೆಪಿ ಸರ್ಕಾರ ಸಂಚು ಮಾಡುತ್ತಿದೆ’ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಾ.ಶರಣ ಪ್ರಕಾಶ ಪಾಟೀಲ ಅವರು ಗಂಭೀರ ಆರೋಪ ಮಾಡಿದರು.

‘ನಮಗೆ ಶೂಟ್ ಮಾಡಿದರೆ ತಮಗೂ ಶೂಟ್ ಮಾಡುವುದಾಗಿ’ ವಿವಾದತ್ಮಕ ಹೇಳಿಕ ನೀಡಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರ ಹೇಳಿಕೆಯನ್ನು ಖಂಡಿಸಿದ ಶರಣ ಪ್ರಕಾಶ ಪಾಟೀಲ ಅವರು, ‘ಚುನಾಯಿತ ಶಾಸಕ, ಎರಡು ಬಾರಿ ಸಚಿವರಿರಾದ ಪ್ರಿಯಾಂಕ್ ಖರ್ಗೆ ಅವರನ್ನು ಶೂಟ್ ಮಾಡುವ ಬೆದರಿಕೆಯನ್ನು ಬಿಜೆಪಿ ಸರ್ಕಾರ ತಮ್ಮ ಮುಖಂಡರ ಮೂಲಕ ಹೇಳಿಕೆ ಕೊಡಿಸುತ್ತಿದೆ. ಪೂರ್ವ ನಿಯೋಜಿತವಾಗಿ ಪ್ರಿಯಾಂಕ್ ಅವರ ಮೇಲೆ ಸೇಡು ತಿರಿಸಿಕೊಳ್ಳಲು ಹೊಂಚು ಹಾಕುತ್ತಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಪ್ರಿಯಾಂಕ್ ಖರ್ಗೆ ಅವರಿಗೆ ಮೂರು ಬಾರಿ ಜೀವ ಬೆದರಿಕೆಯ ಎಚ್ಚರಿಕೆಗಳು ಬಂದಿವೆ. ಪೊಲೀಸ್ ಠಾಣೆಯಲ್ಲಿ ಎರಡು ದೂರು ಸಹ ದಾಖಲಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ಪ್ರಿಯಾಂಕ್ ಅವರು ಖುದ್ದಾಗಿ ಭೇಟಿ ಮಾಡಿ, ಭದ್ರತೆ ಒದಗಿಸುವಂತೆ ಮನವಿ ಸಹ ಮಾಡಿದ್ದರು. ಇದು ಕಳೆದ ಎರಡು ವರ್ಷಗಳು ಕಳೆದರೂ ಭದ್ರತೆ ನೀಡಿಲ್ಲ. ಈ ಬಗ್ಗೆ ಸರ್ಕಾರವೇ ಉತ್ತರಿಸಬೇಕು’ ಎಂದು ಒತ್ತಾಯಿಸಿದರು.

‘ಜನಪ್ರತಿನಿಧಿಗೆ ಜೀವ ಬೆದರಿಕೆ ಇದ್ದಾಗ ಅವರಿಗೆ ಭದ್ರತೆ ಕೊಡುವುದು ಕಡ್ಡಾಯ. ಅದು ಸರ್ಕಾರದ ಜವಾಬ್ದಾರಿ. ಬಿಜೆಪಿಯು ತನ್ನ ಸಣ್ಣ–ಪುಟ್ಟ ನಾಯಕರಿಗೆ ಭದ್ರತೆ ಕೊಟ್ಟಿದೆ. ಜೀವ ಬೆದರಿಕೆ ಇರುವ ಶಾಸಕರಿಗೆ ಭದ್ರತೆ ಏಕಿಲ್ಲ? ಶಾಸಕರಿಗೆ ಬಹಿರಂಗವಾಗಿ ಶೂಟ್ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದವರ ವಿರುದ್ಧ ಪೊಲೀಸ್ ಇಲಾಖೆ ಏನು ಕ್ರಮ ತೆಗೆದುಕೊಂಡಿದೆ? ಶೂಟ್ ಮಾಡುತ್ತೇವೆ ಎಂಬ ಹೇಳಿಕೆ ಬಿಜೆಪಿಯ ನಿಲುವಾ ಅಥವಾ ಸರ್ಕಾರದ ನಿಲುವಾ? ಮಣಿಕಂಠ ರಾಠೋಡ ಯಾರು? ಅಪರಾಧ ಹಿನ್ನಲ್ಲೆಯಿಂದ ಗಡಿಪಾರು ಆದೇಶ ಬಂದಿದ್ದು, ಈ ಬಗ್ಗೆ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ’ ಎಂದು ಪ್ರಶ್ನಿಸಿದರು.


ಡಾ.ಶರಣ ಪ್ರಕಾಶ ಪಾಟೀಲ

‘ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೂ ದ್ವೇಷದ ರಾಜಕಾರಣ ನಡೆದಿಲ್ಲ. ನಾಳೆ ಮುಖ್ಯಮಂತ್ರಿಗಳು ಕಲಬುರಗಿಗೆ ಬರುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಗಲಾಟೆ ಮಾಡಬಹುದು. ಹರಾಜಕತೆ ಸೃಷ್ಟಿ ಮಾಡಲು ನಾವು ಬಿಡುವುದಿಲ್ಲ. ನಾವು ಯಾವುದಕ್ಕೂ ಹೆದರುವುದಿಲ್ಲ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಮರ್ಯಾದೆ ರೇಖೆಯನ್ನು ದಾಟದೆ ರಾಜಕೀಯ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಇತಿ ಮಿತಿಯೊಳಗೆ ಕೆಲಸ ಮಾಡಿದ್ದೇವೆ’ ಎಂದು ಅವರು ಹೇಳಿದರು.

‘ಬಿಜೆಪಿಯ ನಾಯಕರು ಜಿಲ್ಲೆಯನ್ನು ವ್ಯವಸ್ಥಿತವಾಗಿ ಲೂಟಿ ಮಾಡುತ್ತಿದ್ದಾರೆ. ಟೆಂಡರ್‌ಗಳಲ್ಲಿ ಒಳ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ, ಲಂಚ ಇಲ್ಲದೆ ಕೆಲಸಗಳು ಆಗುತ್ತಿಲ್ಲ. ಅದನ್ನು ಮುಚ್ಚಿ ಹಾಕಲು ರಾಜಕೀಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ಕೊಲೆಗೆ ಸಂಚು ಮಾಡುತ್ತಿದೆ. ಸರ್ಕಾರ ಸಹ ಇದಕ್ಕೆ ಬೆಂಬಲ ಕೊಡುತ್ತಿದೆ’ ಎಂದು ಶರಣಪ್ರಕಾಶ ಪಾಟೀಲ ಅವರು ಆರೋಪಿಸಿದರು.

‘ಶಾಸಕರನ್ನು ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದವರ ವಿರುದ್ಧ ಪಕ್ಷದ ವತಿಯಿಂದ ದೂರು ನೀಡುತ್ತೇವೆ. ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡಿದರೆ ಬಿಡುವುದಿಲ್ಲ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮುಖಂಡ ಸುಭಾಷ ರಾಠೋಡ, ತಿಪ್ಪಣಪ್ಪ ಕುಮಕನೂರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು