ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ: ಬೊಮ್ಮಾಯಿ

ಕಾಂಗ್ರೆಸ್, ಜೆಡಿಎಸ್ ತೊರೆದ ನಾಲ್ವರು ಮಾಜಿ ಶಾಸಕರು ಬಿಜೆಪಿಗೆ
Last Updated 7 ಮೇ 2022, 16:12 IST
ಅಕ್ಷರ ಗಾತ್ರ

ಬೆಂಗಳೂರು: ‘ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಪರವಾಗಿ ಬಲವಾದ ಅಲೆ ಎದ್ದಿದೆ. ವಿವಿಧ ಪಕ್ಷಗಳ ಇನ್ನೂ ಹಲವು ಮುಖಂಡರುಬ ಬಿಜೆಪಿಗೆ ಬರಲಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ನಾಲ್ವರು ಮಾಜಿ ಶಾಸಕರು, ರಾಜ್ಯಸಭೆಯ ಒಬ್ಬ ಮಾಜಿ ಸದಸ್ಯ ಸೇರಿದಂತೆ ಹಲವು ಮುಖಂಡರನ್ನು ಬಿಜೆಪಿಗೆ ಸ್ವಾಗತಿಸಿ ಅವರು ಮಾತನಾಡಿದರು.

‘ಬಿಜೆಪಿ ಈಗ ವಿಶ್ವಾಸಾರ್ಹ ರಾಜಕೀಯ ಪಕ್ಷವಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲೂ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ವಿವಿಧ ಪಕ್ಷಗಳ ಹಲವು ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಐದು ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಹಲವರು ನನ್ನನ್ನು ಭೇಟಿ ಮಾಡಿದ್ದರು. ಸಂಯಮದಿಂದ ಇರುವಂತೆ ಎಲ್ಲರಿಗೂ ತಿಳಿಸಿದ್ದೇನೆ’ ಎಂದರು.

ವಿರೋಧ ಪಕ್ಷದ ನಾಯಕರು ಈಗಾಗಲೇ ಅಧಿಕಾರಕ್ಕೆ ಬಂದಾಗಿದೆ ಎಂಬ ಭ್ರಮೆಯಲ್ಲಿ ಓಡಾಡುತ್ತಿದ್ದಾರೆ. ಆದರೆ, ಮುಂದಿನ ಚುನಾವಣೆಯಲ್ಲಿ ಅವರ ಬಲ 2018ಕ್ಕಿಂತಲೂ ಕಡಿಮೆಯಾಗಲಿದೆ. ಹಿಂದೆ ಆಡಳಿತ ನಡೆಸಿದ್ದಂತಹ ದೌರ್ಭಾಗ್ಯದ ಸರ್ಕಾರ ಬೇಡ ಎಂಬ ಭಾವನೆ ಜನರಲ್ಲಿದೆ ಎಂದು ಹೇಳಿದರು.

‘ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ನಾಂದಿ’: ನಳಿನ್‌ ಕುಮಾರ್‌ ಕಟೀಲ್ ಮಾತನಾಡಿ, ‘ಕಾಂಗ್ರೆಸ್‌ ಮುಕ್ತ ಭಾರತದ ಕನಸು ನನಸಾಗಲು ಮಾಜಿ ಸಚಿವರು, ಮಾಜಿ ಶಾಸಕರ ಸೇರ್ಪಡೆಯು ನಾಂದಿ ಹಾಡಲಿದೆ’ ಎಂದರು.

‘ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಈಗಲೇ ಸಂಗೀತ ಕುರ್ಚಿ ಆರಂಭವಾಗಿದೆ. ಬಂಡೆ ಒಡೆದು ಹೋಗುತ್ತದೆ, ಹುಲಿ ಪಕ್ಷದಿಂದ ಹೊರಗೆ ಹೋಗುತ್ತದೆ. ಮುಳುಗುವ ಹಡಗಿನಿಂದ ನೀವೆಲ್ಲರೂ ಹೊರಗೆ ಬಂದಿದ್ದೀರಿ’ ಎಂದು ಹೇಳಿದರು.

ಮಾಜಿ ಶಾಸಕ ಪ್ರಮೋದ್‌ ಮಧ್ವರಾಜ್‌, ರಾಜ್ಯಸಭೆಯ ಮಾಜಿ ಸದಸ್ಯ ಕೆ.ಬಿ. ಕೃಷ್ಣಮೂರ್ತಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. ಪಕ್ಷೇತರರಾಗಿಯೇ ಇದ್ದ ಮಾಜಿ ಶಾಸಕ ವರ್ತೂರು ಪ್ರಕಾಶ್‌, ಜೆಡಿಎಸ್‌ನಲ್ಲಿದ್ದ ಮಾಜಿ ಶಾಸಕ ಕೆ.ಎಸ್‌. ಮಂಜುನಾಥ ಗೌಡ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಸಂದೇಶ್ ನಾಗರಾಜ್‌, ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್‌ ಜಯರಾಂ, ಮಾಜಿ ಐಆರ್‌ಎಸ್‌ ಅಧಿಕಾರಿ ಲಕ್ಷ್ಮಿ ಅಶ್ವಿನ್‌ ಗೌಡ ಬಿಜೆಪಿ ಸದಸ್ಯತ್ವ ‍ಪಡೆದರು.

ಸಚಿವರಾದ ಆರ್‌. ಅಶೋಕ, ಕೆ. ಗೋಪಾಲಯ್ಯ, ಕೆ.ಸಿ. ನಾರಾಯಣ ಗೌಡ, ಡಾ.ಕೆ. ಸುಧಾಕರ್‌, ಎಸ್‌.ಟಿ. ಸೋಮಶೇಖರ್‌, ಸಂಸದ ಮುನಿಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ, ಎನ್.ರವಿಕುಮಾರ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT