ಶುಕ್ರವಾರ, ಜನವರಿ 22, 2021
28 °C
ವರ್ಷಾರಂಭದಲ್ಲೇ ಆಸ್ತಿ ತೆರಿಗೆ ಪರಿಷ್ಕರಣೆಗೆ ಸರ್ಕಾರ ಒಪ್ಪಿಗೆ

ನಗರವಾಸಿಗಳಿಗೆ ತೆರಿಗೆ ಬರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿ ಬಿಟ್ಟು ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ದರ ಪರಿಷ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದಕ್ಕೆ ಪೂರಕವಾಗಿ, ಕರ್ನಾಟಕ ಮಹಾನಗರ ಪಾಲಿಕೆಗಳ (ಕೆಎಂಸಿ) ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಕೇಂದ್ರ ಸರ್ಕಾರದ ನಿರ್ದೇಶನದಂತೆ ಆಸ್ತಿ ತೆರಿಗೆ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ವಸತಿ ಮತ್ತು ವಸತಿಯೇತರ ಕಟ್ಟಡ ಗಳ ಮಾರ್ಗಸೂಚಿ ದರದ ಶೇಕಡ 50ರಷ್ಟು ಮೌಲ್ಯದ ಆಧಾರದಲ್ಲಿ ಶೇ 0.3ರಿಂದ ಶೇ 1ರಷ್ಟು ಆಸ್ತಿ ತೆರಿಗೆ ವಿಧಿ ಸಲು ಅವಕಾಶವಿತ್ತು. ಅದನ್ನು ಆಸ್ತಿಯ ಪ್ರಸ್ತುತ ಮಾರುಕಟ್ಟೆ ದರದ ಶೇ 25ರಷ್ಟು ಮೌಲ್ಯದ ಆಧಾರದಲ್ಲಿ ಶೇ 0.2ರಿಂದ ಶೇ 1.5ರಷ್ಟು ಆಸ್ತಿ ತೆರಿಗೆ ವಿಧಿಸಲು ಅವಕಾಶ ಕಲ್ಪಿಸಿ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.

ಕಟ್ಟಡಗಳಿಗೆ ಹೊಂದಿಕೊಂಡಿರುವ ಖಾಲಿ ನಿವೇಶನವನ್ನು ಈವರೆಗೆ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಕೇಂದ್ರ ಸರ್ಕಾರದ ನಿರ್ದೇಶನ ದಂತೆ ಕಟ್ಟಡಕ್ಕೆ ಹೊಂದಿಕೊಂಡ ಖಾಲಿ ನಿವೇಶನವನ್ನೂ ಆಸ್ತಿ ತೆರಿಗೆ ವ್ಯಾಪ್ತಿಗೆ ತರಲಾಗುತ್ತಿದೆ. ಮಾರುಕಟ್ಟೆ ದರದ ಶೇ 50ರ ಮೌಲ್ಯದ ಆಧಾರದಲ್ಲಿ ಶೇ 0.2ರಿಂದ ಶೇ 0.5ರಷ್ಟು ತೆರಿಗೆ ವಿಧಿಸ ಲಾಗುವುದು. 1,000 ಚದರ ಅಡಿ
ಗಳವರೆಗಿನ ಖಾಲಿ ನಿವೇಶನಗಳಿಗೆ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗುವುದು ಎಂದು ಮಾಧುಸ್ವಾಮಿ ವಿವರಿಸಿದರು.

3,000 ಚದರ ಅಡಿಗಳವರೆಗಿನ (1,000 ಚ.ಮೀ) ಸಂಪೂರ್ಣ ಖಾಲಿ ನಿವೇಶನಗಳಿಗೆ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು. ಈ ವಿನಾಯಿತಿಯನ್ನು ರದ್ದುಪಡಿಸಿದ್ದು, ಎಲ್ಲ ಅಳತೆಯ ಸಂಪೂರ್ಣ ಖಾಲಿ ನಿವೇಶ ನಗಳಿಗೂ ಆಸ್ತಿ ತೆರಿಗೆ ಪಾವತಿ ಕಡ್ಡಾಯವಾಗಲಿದೆ ಎಂದರು.

ಸ್ಥಳೀಯ ಸಂಸ್ಥೆಗಳ ಸಂಪನ್ಮೂಲ ಹೆಚ್ಚಿಸಿಕೊಳ್ಳುವುದಕ್ಕೆ ಆಸ್ತಿ ತೆರಿಗೆ ಪರಿಷ್ಕರಣೆಗೆ ಜ. 25ರೊಳಗೆ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಈ ತಿದ್ದುಪಡಿ ಜಾರಿಗೊಳಿಸಿದಲ್ಲಿ ಜಿಎಸ್‌ಡಿಪಿಯ ಶೇ 0.25ರಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ಸಾಲ ಮಾಡಲು ಅವಕಾಶ ದೊರೆಯಲಿದೆ. ಬಳಕೆದಾರರ ಶುಲ್ಕವನ್ನೂ ಪರಿಷ್ಕರಿಸುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಅದನ್ನು ಬಾಕಿ ಇರಿಸಲಾಗಿದೆ ಎಂದರು.

ಬಡ್ತಿಗೆ ಅವಕಾಶ: ಅಂಗವಿಕಲರು, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಈವರೆಗೂ ಬಡ್ತಿಗೆ ಅವಕಾಶವಿರಲಿಲ್ಲ. ಪ್ರಥಮ ದರ್ಜೆ ಸಹಾಯಕರಿಗಿಂತ ಮೇಲಿನ ಹುದ್ದೆಗಳಲ್ಲಿ ಶೇ 50ರಷ್ಟನ್ನು ನೇರವಾಗಿ ಮತ್ತು ಶೇ 50ರಷ್ಟನ್ನು ಬಡ್ತಿ ಮೂಲಕ ತುಂಬು ವುದಕ್ಕೆ ಅವಕಾಶ ಕಲ್ಪಿಸುವ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದು ಪಡಿಗೂ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು.

ಪರಿಷ್ಕರಣೆಯ ಪರಿಣಾಮ?

ಕೆಎಂಸಿ ಕಾಯ್ದೆಯ ತಿದ್ದುಪಡಿ ಪರಿಣಾಮವಾಗಿ ಆಸ್ತಿ ತೆರಿಗೆಯ ಕನಿಷ್ಠ ಮೊತ್ತದಲ್ಲಿ ಇಳಿಕೆಯಾಗಲಿದ್ದು, ಗರಿಷ್ಠ ಮೊತ್ತದಲ್ಲಿ ಏರಿಕೆಯಾಗಲಿದೆ. ಉದಾಹರಣೆಗೆ ₹ 3,000 ತೆರಿಗೆ ಪಾವತಿಸುತ್ತಿದ್ದವರಿಗೆ ಮುಂದೆ ₹ 2,000 ತೆರಿಗೆ ವಿಧಿಸಬಹುದು. ₹ 1 ಲಕ್ಷ ತೆರಿಗೆ ಪಾವತಿಸುತ್ತಿದ್ದವರು ಮುಂದೆ ₹ 1.5 ಲಕ್ಷ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು