ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿ ಟೋಲ್: ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ

ಜೆಡಿಎಸ್: ಕೇಂದ್ರ, ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಘೋಷಣೆ
Last Updated 16 ಮಾರ್ಚ್ 2023, 23:59 IST
ಅಕ್ಷರ ಗಾತ್ರ

ಕೆಂಗೇರಿ: ಟೋಲ್ ಸಂಗ್ರಹ ವಿರೋಧಿಸಿ ನೂರಾರು ಜೆಡಿಎಸ್ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬೆಂಗಳೂರು-ಮೈಸೂರು ರಸ್ತೆಯ ಕಣಮಿಣಕಿ ಟೋಲ್ ಪ್ಲಾಜಾ ಬಳಿ ಪ್ರತಿಭಟನೆ ನಡೆಸಿದರು.

ಬೆಳಗ್ಗಿನಿಂದಲೇ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರು, ರೈತರು ಹಾಗೂ ಜೆಡಿಸ್ ಕಾರ್ಯಕರ್ತರು ಟೋಲ್ ಪ್ಲಾಜಾ ಬಳಿ ಜಮಾವಣೆಗೊಂಡು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಿದರು.

ಮುಖಂಡ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ‘ಹೆದ್ದಾರಿ ಕಾಮಗಾರಿ ತಾಂತ್ರಿಕವಾಗಿ ಇನ್ನೂ ಪೂರ್ಣಗೊಂಡಿಲ್ಲ. ಹಲವಾರು ಕಡೆ ಸರ್ವಿಸ್ ರಸ್ತೆಗಳ ನಿರ್ಮಾಣವಾಗಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಉದ್ಘಾಟನೆ ಮಾಡಿ ಸಂಪೂರ್ಣ ವ್ಯವಸ್ಥೆಯಿಲ್ಲದ ರಸ್ತೆಗೆ ಟೋಲ್ ನಿಗದಿಪಡಿಸಿರುವುದು ಸರ್ಕಾರದ ಜನವಿರೋಧಿ ಧೋರಣೆಯನ್ನು ತೋರಿಸುತ್ತಿದೆ’ ಎಂದು ದೂರಿದರು.

ಹೆದ್ದಾರಿ ಕಾಯ್ದೆ ಅನ್ವಯ ಸರ್ವಿಸ್ ರಸ್ತೆ, ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆ ಹಾಗೂ ಶೌಚಾಲಯದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ. ನಿಯಮಗಳನ್ನು ಗಾಳಿಗೆ ತೂರಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ, ದುಬಾರಿ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಖಂಡನಾರ್ಹ ಎಂದರು.

‘ಟೋಲ್ ದರ ಅತ್ಯಂತ ದುಬಾರಿ. ಆರ್ಥಿಕವಾಗಿ ಸಬಲರಾಗಿರುವಷ್ಟೆ ಈ ದರವನ್ನು ಭರಿಸಲು ಸಾಧ್ಯ. ಬಿಜೆಪಿ ಸರ್ಕಾರ ಶ್ರೀಮಂತರು ಹಾಗೂ ವಾಣಿಜ್ಯೋದ್ಯಮಿಗಳಿಗೆ ಮಾತ್ರ ಮೀಸಲಾಗಿದೆಯೇ’ ಎಂದು ಪ್ರಶ್ನಿಸಿದರು. ಬಿಡದಿ, ರಾಮನಗರಕ್ಕೆ ತೆರಳುವವರಿಗೂ ಒಂದೇ ಮೊತ್ತದ ತೆರಿಗೆ ವಿಧಿಸುತ್ತಿರುವುದು ಅತಾರ್ಕಿಕವಾಗಿದೆ ಎಂದರು.

‘ಸರ್ವಿಸ್ ರಸ್ತೆ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯ. ಹಣ ಪಾವತಿಸಿ ಹೆದ್ದಾರಿ ಮುಖಾಂತರವೇ ಓಡಾಡಬೇಕೆಂದು ಒತ್ತಾಯ ಹೇರುವ ಹಕ್ಕು ಯಾರಿಗೂ ಇಲ್ಲ’ ಎಂದು ಹೆದ್ದಾರಿ ಪ್ರಾಧಿಕಾರ ಯೋಜನಾ ಅಧಿಕಾರಿ ಶ್ರೀಧರ್ ಅವರಿಗೆ ತಿರುಗೇಟು ನೀಡಿದರು.

ಮಾಗಡಿ ಶಾಸಕ ಎ . ಮಂಜು ಮಾತನಾಡಿದರು. ಕೆ.ಆರ್.ಎಸ್.ರಾಜ್ಯ ಉಪಾಧ್ಯಕ್ಷ ಎಚ್.ಎಸ್.ರಾಜೇಗೌಡ, ಕೆ.ಎಂ.ಎಫ್.ನಿರ್ದೇಶಕ ಜಯಮುತ್ತು, ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್, ಜೆಡಿಎಸ್ ಮಾಧ್ಯಮ ವಕ್ತಾರ ನರಸಿಂಹಮೂರ್ತಿ, ಬೆಂಗಳೂರು ನಗರ ಜೆಡಿಎಸ್ ಉಪಾಧ್ಯಕ್ಷ ಸಿದ್ದೇಗೌಡ, ಜೆಡಿಎಸ್ ಮೈಸೂರು ನಗರ ಕಾರ್ಮಿಕ ಘಟಕದ ಅಧ್ಯಕ್ಷ ಸಿದ್ಧೇಶ್ವರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT