ಗುರುವಾರ , ಜುಲೈ 7, 2022
20 °C

ನಕಲಿ ಜಾತಿ ಪ್ರಮಾಣಪತ್ರ ಪ್ರಕರಣ: ಸಚಿವ ಪ್ರಭು ಚವ್ಹಾಣ್ ವಜಾಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರಿಗೆ ಸಂಬಂಧಿಸಿದ ನಕಲಿ ಜಾತಿ ಪ್ರಮಾಣಪತ್ರ ಪ್ರಕರಣದ ಮರು ತನಿಖೆಗೆ ನ್ಯಾಯಾಲಯ ಆದೇಶಿಸಿರುವುದರಿಂದ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿಯ (ಭೀಮಶಕ್ತಿ) ಅಧ್ಯಕ್ಷ ಜೆ.ವೆಂಕಟೇಶ್ ಹೆಬ್ಬಾಳ್ ಆಗ್ರಹಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಮಹಾರಾಷ್ಟ್ರದವರಾದ ಪ್ರಭು ಚವ್ಹಾಣ್, ರಾಜ್ಯದ ಲಂಬಾಣಿ ಸಮುದಾಯದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವ ಆರೋಪದ ಮೇರೆಗೆ ಶಾಸಕ ಸ್ಥಾನದಿಂದ ಅವರನ್ನು ವಜಾ ಮಾಡುವಂತೆ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ರಿಟ್‌ ಅರ್ಜಿ ದಾಖಲಾಗಿತ್ತು. ಆದರೆ, ತಮ್ಮ ಪ್ರಭಾವದಿಂದ ಪ್ರಕರಣದಿಂದ ಪಾರಾಗಿದ್ದರು. ಈಗ ಅದೇ ಪ್ರಕರಣದ ಮರು ತನಿಖೆ ಮಾಡುವಂತೆ ಬೀದರ್‌ನ ಜಾತಿ ಪರಿಶೀಲನಾ ಸಮಿತಿಗೆ ನ್ಯಾಯಾಲಯ ಆದೇಶಿಸಿದೆ’ ಎಂದರು.

‘ಪ್ರಭು ಚವ್ಹಾಣ್ ಸಚಿವರಾಗಿರುವುದರಿಂದ ತಮ್ಮ ಪ್ರಭಾವ ಬಳಸಿ, ಮರು ತನಿಖೆಯಲ್ಲೂ ತಮ್ಮ ಪರ ವರದಿ ಬರುವಂತೆ ಮಾಡುವ ಸಾಧ್ಯತೆ ಇದೆ. ಹಾಗಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಭು ಚವ್ಹಾಣ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ನ್ಯಾಯಯುತ ತನಿಖೆಗೆ ಅವಕಾಶ ಮಾಡಿಕೊಡಬೇಕು. ನ್ಯಾಯಾಲಯದ ತೀರ್ಪು ಬರುವವರೆಗೆ ಅವರಿಗೆ ಯಾವುದೇ ಸಾಂವಿಧಾನಿಕ ಹುದ್ದೆಗಳನ್ನು ನೀಡಬಾರದು’ ಎಂದು ಒತ್ತಾಯಿಸಿದರು. 

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಪ್ರಭು ಚವ್ಹಾಣ್,‘ನನ್ನ ಮೇಲಿನ ಆರೋಪಗಳು ಸುಳ್ಳು. ಕಾಂಗ್ರೆಸ್‌ನವರು ನನ್ನ ವಿರುದ್ಧ ಈ ರೀತಿಯ ಷಡ್ಯಂತ್ರಗಳನ್ನು ನಡೆಸುತ್ತಿದ್ದಾರೆ. ಪ್ರಕರಣದ ಮರು ತನಿಖೆ ಎಷ್ಟು ಬಾರಿಯಾದರೂ ನಡೆಯಲಿ. ನ್ಯಾಯಾಲಯವನ್ನು ನಾನು ಗೌರವಿಸುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು