ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿ ಅಧ್ಯಯನಕ್ಕೆ ಬಂದಿದ್ದ ತಂಡಕ್ಕೆ ಪ್ರತಿಭಟನೆಯ ಬಿಸಿ

ನೆರೆ, ಅತಿವೃಷ್ಟಿ ಹಾನಿ ಅಧ್ಯಯನ ಪ್ರವಾಸ
Last Updated 8 ಸೆಪ್ಟೆಂಬರ್ 2020, 17:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೆರೆ ಹಾಗೂ ಅತಿವೃಷ್ಟಿಯಿಂದಾದ ಹಾನಿ ಪರಿಶೀಲಿಸಲು ಬೆಳಗಾವಿ, ಬಾಗಲಕೋಟೆ ಜಿಲ್ಲೆಗೆ ಮಂಗಳವಾರ ಬಂದಿದ್ದ ಕೇಂದ್ರ ಅಧ್ಯಯನ ತಂಡಕ್ಕೆ ವಿರೋಧ ವ್ಯಕ್ತವಾಯಿತು.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಲೋಳಸೂರ ಸೇತುವೆ ಬಳಿ ಸಮಸ್ಯೆ ಹೇಳಿಕೊಳ್ಳಲು ಮುಂದಾದ ಸ್ಥಳೀಯರಿಗೆ ಹಾಗೂ ಮುಖಂಡರಿಗೆ ಹೈದರಾಬಾದ್‌ನ ಕೃಷಿ ಇಲಾಖೆಯ ಎಣ್ಣೆಬೀಜಗಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಮನೋಹರನ್ ಹಾಗೂ ಬೆಂಗಳೂರಿನ ಜಲಶಕ್ತಿ ಸಚಿವಾಲಯದ ಸೂಪರಿಂಟೆಂಡೆಂಟ್‌ ಎಂಜಿನಿಯರ್ ಗುರುಪ್ರಸಾದ್ ಜೆ. ಅವಕಾಶ ನೀಡಲಿಲ್ಲ. ಕಾರಿನಿಂದ ಇಳಿಯಲಿಲ್ಲ. ಇದರಿಂದ ಸಿಟ್ಟಾದ ಮುಖಂಡರು ಕಾರ್‌ಗೆ ಘೇರಾವ್‌ ಹಾಕಿ ಪ್ರತಿಭಟಿಸಿದರು.

‘ಕಳೆದ ವರ್ಷ ನೆರೆಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಮನೆ ಹಾನಿ ಬಗ್ಗೆ ಸಮೀಕ್ಷೆ ಮೇಲೆ ಸಮೀಕ್ಷೆ ನಡೆದಿದೆ. ಆದರೆ, ಬಹಳ ಮಂದಿಗೆ ಹಣ ಬಂದಿಲ್ಲ. ಬೆಳೆ ಹಾನಿ ಪರಿಹಾರದ ಕತೆಯೂ ಹಾಗೆಯೇ ಆಗಿದೆ. ಕೇಂದ್ರದ ಅಧಿಕಾರಿಗಳು ಏನೂ ಕೇಳಲು ಸಿದ್ಧವಿರಲಿಲ್ಲ. ಇದು ಖಂಡನೀಯ’ ಎಂದು ಗೋವಿಂದ ಕೊಪ್ಪದ ಮಾಧ್ಯಮ ಪ್ರತಿನಿಧಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರ ಮನವಿಗೆ ಸ್ಪಂದಿಸಿ,
ಕಾರುಗಳಿಗೆ ಹೋಗಲು ಅವಕಾಶ ಮಾಡಿಕೊಟ್ಟರು.

ಬಾಗಲಕೋಟೆಯಲ್ಲೂ ಆಕ್ರೋಶ

ಇದೇ ತಂಡವು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಗೋವನಕೊಪ್ಪದ ಹಳೆ ಸೇತುವೆ, ರಸ್ತೆ ಹಾಗೂ ಬೆಳೆ ಹಾನಿ ವೀಕ್ಷಿಸಿತು. ಈ ಸಂದರ್ಭದಲ್ಲಿ ಸಮಸ್ಯೆ ಹೇಳಿಕೊಳ್ಳಲು ಪೊಲೀಸರು ಅವಕಾಶ ನೀಡಲಿಲ್ಲವೆಂದು ಪ್ರವಾಹ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರದಿಂದ ಅಧಿಕಾರಿಗಳು ಬಂದಿದ್ದಾರಂತೆ. ಅವರು ಬಂದಿರೋದು ಕಾರಿನಲ್ಲಿ ಹತ್ತಿ ಹೋಗುವುದಕಲ್ಲ, ನಮ್ಮ ಸಮಸ್ಯೆ ಅರಿಯಲಿ’ ಎಂದು ಒತ್ತಾಯಿಸಿದರು.

ಇನ್ನೊಂದುತಂಡ

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ವಿ.ಪಿ.ರಾಜವೇದಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿ ಅಧೀಕ್ಷಕ ಎಂಜಿನಿಯರ್‌ ಸದಾನಂದ ಬಾಬು ಅವರನ್ನೊಳಗೊಂಡ ಕೇಂದ್ರದಇನ್ನೊಂದುತಂಡ, ಮಲಪ್ರಭಾ ಪ್ರವಾಹದಿಂದ ಹಾನಿಗೊಳಗಾದ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರು, ವಾಸನ ಮತ್ತು ಲಖಮಾಪುರ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT