ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿಯಲ್ಲೂ ಅಕ್ರಮ? ಬ್ಲೂ ಟೂತ್‌ ಸಾಧನ ಬಳಕೆ?

ಸೇವಾನಿರತ ಅಭ್ಯರ್ಥಿಗಳಿಂದಲೂ ಎಡಿಜಿಪಿಗೆ (ನೇಮಕಾತಿ) ದೂರು
Last Updated 24 ಜನವರಿ 2022, 19:49 IST
ಅಕ್ಷರ ಗಾತ್ರ

ಬೆಂಗಳೂರು: ನೇಮಕಾತಿಯಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ, ಅಕ್ರಮ ಆರೋಪ ಪೊಲೀಸ್‌ ನೇಮಕಾತಿ ವಿಭಾಗಕ್ಕೂ ಅಂಟಿಕೊಂಡಿದೆ.

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ- ಸಿವಿಲ್‌) 545 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತಪಡಿಸಿ ಹಲವು ಅಭ್ಯರ್ಥಿಗಳು ಪಿಎಸ್‌ಐ (ಸಿವಿಲ್‌) ನೇಮಕಾತಿ ಸಮಿತಿಯ ಅಧ್ಯಕ್ಷರಾಗಿರುವ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಿಗೆ (ಎಡಿಜಿಪಿ – ನೇಮಕಾತಿ) ದೂರು ನೀಡಿದ್ದಾರೆ.

ಈ ಪೈಕಿ, ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಲೇ ಸೇವಾನಿರತ ವಿಭಾಗದ ಮೀಸಲಾತಿ ಅಡಿ ಅರ್ಜಿ ಸಲ್ಲಿಸಿದವರೂ ಇದ್ದಾರೆ.

ಎಡಿಜಿಪಿಗೆ (ನೇಮಕಾತಿ) ದೂರು ನೀಡಿರುವ ಬೆಂಗಳೂರು ನಗರ ಸುಬ್ರಹ್ಮಣ್ಯಪುರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಡಿ.ಆರ್‌. ಮೋಹನ್‌ಕುಮಾರ್‌, ಕಲಬುರಗಿ ನಗರ ಬ್ರಹ್ಮಪುರ ಠಾಣೆಯ ಕಾನ್‌ಸ್ಟೆಬಲ್‌ ಮಾಳಪ್ಪ ಮತ್ತಿತರರು, ‘ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ– 1ರ (ವಿವರಣಾತ್ಮಕ ಉತ್ತರ ಬಯಸುವ ಪ್ರಶ್ನೆಗಳು) ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನ ಮಾಡಬೇಕು ಮತ್ತು ಅಂಕಗಳ ಮರುಎಣಿಕೆ ಮಾಡಿ ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದ್ದಾರೆ.

ಇಲಾಖೆಯಲ್ಲಿ ಸೇವಾನಿರತರು ಮತ್ತುಕಲ್ಯಾಣ ಕರ್ನಾಟಕ ಭಾಗಕ್ಕೆ ಹುದ್ದೆ ಮೀಸಲು ಸೇರಿ ಒಟ್ಟು 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ 2021ರ ಜ. 21ರಂದು ಅಧಿಸೂಚನೆ ಹೊರಡಿಸಲಾಗಿತ್ತು.

ಅ. 3ರಂದು ನಡೆದ ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳನ್ನು ಪತ್ರಿಕೆ– 1 (ವಿವರಣಾತ್ಮಕ) ಮತ್ತು ಪತ್ರಿಕೆ– 2 (ಬಹುಆಯ್ಕೆ) ಸ್ಮರ್ಧಾತ್ಮಕ ಪರೀಕ್ಷೆಗೆ ಆಯ್ಕೆ ಮಾಡಲಾಗಿತ್ತು.
ಇದೇ 19ರಂದು ಹುದ್ದೆಗೆ ಆಯ್ಕೆಯಾದವರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

‘ನಾನು ಪತ್ರಿಕೆ–2ರಲ್ಲಿ 99.375 ಅಂಕ ಪಡೆದಿದ್ದು, ಪತ್ರಿಕೆ– 1ನ್ನು ಕೂಡಾ ಚೆನ್ನಾಗಿಯೇ ಬರೆದಿದ್ದೇನೆ. ಪತ್ರಿಕೆ– 1ರಲ್ಲಿ ಕನಿಷ್ಠ 30 ಅಂಕ ಗಳಿಸುವ ವಿಶ್ವಾಸವಿದೆ. ಆಯ್ಕೆ ಪಟ್ಟಿ ಪ್ರಕಾರ ಮೀಸಲಾತಿ ‘3ಬಿ’ ಪ್ರವರ್ಗದಲ್ಲಿ ಆಯ್ಕೆಯಾದ ಕೊನೆಯ ಅಭ್ಯರ್ಥಿ 123.875 ಅಂಕ ಗಳಿಸಿದ್ದಾರೆ. ನಾನು ಈ ಹಿಂದೆ ಪಿಎಸ್‌ಐ ಹುದ್ದೆಗೆ ಬರೆದ ಪರೀಕ್ಷೆಗಳ ಪತ್ರಿಕೆ– 1ರಲ್ಲಿ 2017ರಲ್ಲಿ 37, 2018ರಲ್ಲಿ 33 ಮತ್ತು 29, 2019ರಲ್ಲಿ 32 ಮತ್ತು 27.5 ಅಂಕ ಪಡೆದಿದ್ದು, ಯಾವುದೇ ಪರೀಕ್ಷೆಯಲ್ಲಿ 27ಕ್ಕಿಂತ ಕಡಿಮೆ ಅಂಕ ಪಡೆದಿಲ್ಲ. 2017ರಲ್ಲಿ ಸಂದರ್ಶನಕ್ಕೂ ಆಯ್ಕೆ ಆಗಿದ್ದೆ. ಆದರೆ, ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆದರೂ ಆಯ್ಕೆ ಆಗಲೇಬೇಕಿತ್ತು’ ಎಂದು ಮನವಿಯಲ್ಲಿ ಮೋಹನ್‌ ಕುಮಾರ್‌ ವಿವರಿಸಿದ್ದಾರೆ.

‘ಪತ್ರಿಕೆ–2ರಲ್ಲಿ 103.3 ಅಂಕ ಪಡೆದಿರುವ ಮಾಳಪ್ಪ ಅವರದ್ದೂ ಇದೇ ಅಹವಾಲು. ‘ಪತ್ರಿಕೆ– 1ರಲ್ಲಿ ಕನಿಷ್ಠ 30 ಅಂಕ ಗಳಿಸುವ ವಿಶ್ವಾಸವಿದೆ. ಆಯ್ಕೆ ಪಟ್ಟಿಯಲ್ಲಿ ಮೀಸಲಾತಿ ‘2ಎ’ ಕಲ್ಯಾಣ ಕರ್ನಾಟಕ ಪ್ರವರ್ಗದಲ್ಲಿ ಆಯ್ಕೆಯಾದ ಕೊನೆಯ ಅಭ್ಯರ್ಥಿ 121.375 ಅಂಕ ಗಳಿಸಿದ್ದಾರೆ. ಪಿಎಸ್‌ಐ ಹುದ್ದೆಗೆ ಈ ಹಿಂದೆ ಬರೆದ ಪರೀಕ್ಷೆಗಳ ಪತ್ರಿಕೆ–1ರಲ್ಲಿ 2017ರಲ್ಲಿ 28, 2018ರಲ್ಲಿ 32, 2019ರಲ್ಲಿ 31.5 ಮತ್ತು 29 ಅಂಕ ಪಡೆದಿದ್ದು, ಯಾವುದೇ ಪರೀಕ್ಷೆಯಲ್ಲಿ 28ಕ್ಕಿಂತ ಕಡಿಮೆ ಅಂಕ ಪಡೆದಿಲ್ಲ. 2018ರಲ್ಲಿ ಸಂದರ್ಶನಕ್ಕೂ ಆಯ್ಕೆ ಆಗಿದ್ದೆ. ಈ ಬಾರಿ 18 ಅಂಕ ಪಡೆದರೂ ಆಯ್ಕೆ ಆಗಲೇಬೇಕಿತ್ತು’ ಎಂದು ಮಾಳಪ್ಪ ತಿಳಿಸಿದ್ದಾರೆ. ಹುದ್ದೆ ವಂಚಿತ ಹಲವು ಅಭ್ಯರ್ಥಿಗಳು ಇದೇ ರೀತಿ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪಿಎಸ್‌ಐ (ಸಿವಿಲ್‌) ನೇಮಕಾತಿ ಸಮಿತಿ ಅಧ್ಯಕ್ಷ ಅಮೃತ್‌ ಪಾಲ್‌ ಅವರಿಗೆ ಕರೆ ಮಾಡಿದರೂ ಅವರು ಕರೆಸ್ವೀಕರಿಸಲಿಲ್ಲ.

ಬ್ಲೂ ಟೂತ್‌ ಸಾಧನ ಬಳಕೆ?

‘ತಾತ್ಕಾಲಿಕ ನೇಮಕಾತಿ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪೂರ್ಣ ಮಾಹಿತಿ (ಜನ್ಮ ದಿನಾಂಕ, ಮನೆ ವಿಳಾಸ ಇತ್ಯಾದಿ) ನೀಡಿಲ್ಲ. ಆ ಮೂಲಕ, ಯಾವ ಭಾಗದಿಂದ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆಂಬ ಮಾಹಿತಿಯನ್ನು ಮುಚ್ಚಿಡಲಾಗಿದೆ. ಕಲಬುರಗಿ ಜಿಲ್ಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗಿರುವ ಮಾಹಿತಿ ಇದೆ. ಪತ್ರಿಕೆ –2ರಲ್ಲಿ (ಬಹು ಆಯ್ಕೆ) ಹೆಚ್ಚಿನ ಅಂಕ ಗಳಿಸಿದವರು, ಪತ್ರಿಕೆ– 1ರಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯ ಆಗಿಲ್ಲ. ಬ್ಲೂ ಟೂತ್‌ ಸಾಧನ ಬಳಸಿ ಪರೀಕ್ಷೆ ಬರೆದಿರುವ ಸಂದೇಹವಿದೆ’ ಎಂದೂ ಕೆಲವರು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

***

ನೇಮಕಾತಿ ವೇಳೆ ಅಕ್ರಮ ನಡೆದಿರುವ ಅನುಮಾನ ವ್ಯಕ್ತಪಡಿಸಿ ನನಗೆ ನೇರವಾಗಿ ಯಾರೂ ದೂರು ಕೊಟ್ಟಿಲ್ಲ. ಆದರೆ, ಇಂಥ ದೂರುಗಳನ್ನು ಖಂಡಿತ ಪರಿಶೀಲಿಸುತ್ತೇನೆ.

-ಆರಗ ಜ್ಞಾನೇಂದ್ರ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT