ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮ: ಜೈಲಿಗಟ್ಟುವಲ್ಲಿ ಯಶಸ್ವಿಯಾದ ಶಿವಶರಣಪ್ಪ

ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮ ಆರೋಪದಡಿ ಬಂಧಿತರಾದ 32 ಮಂದಿಯೂ ಕಂಬಿಗಳ ಹಿಂದೆ
Last Updated 13 ಮೇ 2022, 22:15 IST
ಅಕ್ಷರ ಗಾತ್ರ

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮ ಆರೋಪದಡಿ ಈವರೆಗೆ ಬಂಧಿತರಾದ 32 ಆರೋಪಿಗಳಲ್ಲಿ ಯಾರೊಬ್ಬರಿಗೂ ಜಾಮೀನು ಸಿಕ್ಕಿಲ್ಲ. ಎಲ್ಲರ ಸಿಐಡಿ ಕಸ್ಟಡಿ ಅವಧಿ ಶುಕ್ರವಾರಕ್ಕೆ ಮುಗಿದಿದ್ದು, ಕೇಂದ್ರ ಕಾರಾಗೃಹದ ಅತಿಥಿಗಳಾಗಿದ್ದಾರೆ. ಇವರೆಲ್ಲರನ್ನೂ ಜೈಲಿಗಟ್ಟುವಲ್ಲಿ ಸಮರ್ಥ ವಾದ ಮಂಡಿಸಿದ್ದು, ಸಹಾಯಕ ಸರ್ಕಾರಿ ಅಭಿಯೋಜಕ ಶಿವಶರಣಪ್ಪ ಹೋತಪೇಟ ಅವರು.

ಹೌದು.ಸಿಐಡಿ ಪರ ವಕೀಲರಾದ ಶಿವಶರಣಪ್ಪ ಅವರು ಆರಂಭದಿಂದಲೂ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದರು. ಆರ್ಥಿಕವಾಗಿ ಬಲಾಢ್ಯರೂ ಆಗಿರುವ ಆರೋಪಿಗಳು ಸಿಐಡಿ ಕಸ್ಟಡಿ ತಪ್ಪಿಸಿಕೊಳ್ಳಲು ಹಾಗೂ ಜಾಮೀನು ಪಡೆಯಲು ಇನ್ನಿಲ್ಲದ ಯತ್ನ ಮಾಡಿದರು. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿದಂತೆ ಕೆಲವರು, ಬಂಧನಕ್ಕೂ ಮುಂಚಿತವೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರಕರಣದ ಗಂಭೀರತೆಯನ್ನು ನ್ಯಾಯಾಲಯದ ಮುಂದೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದ ಶಿವಶರಣಪ್ಪ, ಜಾಮೀನು ಅರ್ಜಿ ತಿರಸ್ಕೃತವಾಗುವಂತೆ ವಾದ ಮಂಡಿಸಿದರು.

ಅಷ್ಟೇ ಅಲ, ಪ್ರಮುಖ ಆರೋಪಿಗಳಾದ ರುದ್ರಗೌಡ ಡಿ. ಪಾಟೀಲ, ಮಂಜುನಾಥ ಮೇಳಕುಂದಿ, ದಿವ್ಯಾ ಹಾಗರಗಿ ಹಾಗೂ ಅವರ ಸಹಚರರ ತಂಡವನ್ನು ಗರಿಷ್ಠ 13 ದಿನ ಸಿಐಡಿ ಕಸ್ಟಡಿಗೆ ಕೊಡಿಸುವಲ್ಲಿಯೂ ಯಶಸ್ವಿಯಾದರು.

ಪ್ರಕರಣದಲ್ಲಿ ಮೊದಲು ಬಂಧಿತರಾದ 1ರಿಂದ 8ರವರೆಗಿನ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಏಪ್ರಿಲ್‌ 22ರಂದು ಇತ್ತು. ಇಲ್ಲಿನ 3ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಧೀಶರಾದ ಬಸವರಾಜ ನೇಸರ್ಗಿ ಅವರು ವಾದಗಳನ್ನು ಪರಿಶೀಲಿಸಿದ ನಂತರ ಎಲ್ಲ ಎಂಟು ಆರೋಪಿಗಳ ಜಾಮೀನು ಅರ್ಜಿಯನ್ನೂ ತಿರಸ್ಕರಿಸಿದರು.

ಆರೋಪಿ ಸಂಖ್ಯೆ 1) ವೀರೇಶ ಹಳ್ಳಿ, 2) ಸಾವಿತ್ರಿ ಕಾಬಾ, 3) ಸುಮಾ ಕಂಬಳಿಮಠ, 4) ಸಿದ್ಧಮ್ಮ ಬಿರಾದಾರ, 5)ಚೇತನ್‌ ನಂದಗಾಂವ, 6) ಪ್ರವೀಣಕುಮಾರ ರೆಡ್ಡಿ, 7) ಅರುಣಕುಮಾರ ಪಾಟೀಲ, 8) ರಾಜೇಶ ಹಾಗರಗಿ ಅವರ ಜಾಮೀನು ಅರ್ಜಿಗಳು ವಜಾಗೊಂಡವು.

ಎರಡನೇ ಹಂತದಲ್ಲಿ ಬಂಧಿತರಾದ ಆರೋಪಿ ಸಂಖ್ಯೆ 9ರಿಂದ 23ರವರೆಗಿನವರ ಜಾಮೀನು ಅರ್ಜಿಗಳನ್ನೂ ನ್ಯಾಯಾಧೀಶರು ವಜಾಗೊಳಿಸಿದರು. ಕ್ರಮವಾಗಿ, 9ನೇ ಆರೋಪಿ ಹಯ್ಯಾಳಿ ದೇಸಾಯಿ, 10) ರುದ್ರಗೌಡ ಮುಕ್ಷರ, 11) ವಿಶಾಲ ಶಿರೂರ, 12) ಶರಣಬಸಪ್ಪ ಬೋರಗಿ, 13) ಮಹಾಂತೇಶ ರುದ್ರಗೌಡ ಪಾಟೀಲ, 15) ಮಲ್ಲಿಕಾರ್ಜುನ ಮೇಳಕುಂದಿ, 21) ಸುರೇಶ ಕಾಟೇಗಾಂವ, 22) ಕಾಳಿದಾಸ ತಂಡಳ, 23) ಸದ್ಧಾಮ್‌ಹುಸೇನ್‌ ಮುಲ್ಲಾ ಅವರನ್ನು ಈಗಾಗಲೇ ಜೈಲಿಗೆ ಕಳುಹಿಸಲಾಗಿದೆ.

ಆರೋಪಿ ಸಂಖ್ಯೆ 14 ರುದ್ರಗೌಡ ಡಿ. ಪಾಟೀಲ ಸೇರಿ 16ರಿಂದ 20ರವರೆಗಿನ ಐವರು ಆರೋಪಿಗಳ ಜಾಮೀನು ಅರ್ಜಿಗಳು ಇನ್ನೂ ಬಾಕಿ ಇವೆ.

ಡಿವೈಎಸ್ಪಿಮಲ್ಲಿಕಾರ್ಜುನ ‌ಸಾಲಿ, ಕಲಬುರಗಿಯ ಬೆರಳಚ್ಚು ವಿಭಾಗದ ಇನ್‌ಸ್ಪೆಕ್ಟರ್‌ ಆನಂದ ಮೇತ್ರಿ ಸೇರಿ ಇತರ ಆರೋಪಿಗಳ ಅರ್ಜಿಗಳು ಇನ್ನೂ ವಿಚಾರಣೆಗೆ ಬರಬೇಕಿದೆ. ಆರೋಪಿಗಳ ಪರ ವಕೀಲರು, ಜಾಮೀನು ಅರ್ಜಿ ಸಲ್ಲಿಸುವಲ್ಲಿ ವಿಳಂಬ ಮಾಡಿದ್ದರಿಂದ ಆರೋಪಿ ಸಂಖ್ಯೆ 24ರಿಂದ 32ರವರೆಗಿನವರ ಅರ್ಜಿಗಳು ವಿಚಾರಣೆಗೆ ಬಂದಿಲ್ಲ.

ಪತಿ ಕೈದಿ, ಪತ್ನಿ ಜೈಲರ್‌: ಒಬ್ಬರ ವರ್ಗಾವಣೆ ಸಾಧ್ಯತೆ

ಪಿಎಸ್‌ಐ ನೇಮಕಾತಿ ಅಕ್ರಮ ಆರೋಪದ ಮೇಲೆ ಕೇಂದ್ರ ಕಾರಾಗೃಹ ಸೇರಿರುವ, ಕೆಎಸ್‌ಆರ್‌ಪಿ ಸಹಾಯಕ ಕಮಾಂಡೆಂಟ್‌ ವೈಜನಾಥ ಕಲ್ಯಾಣಿ ರೇವೂರ ಅವರನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡುವಂತೆ ಸೋಮವಾರ (ಮೇ 16) ನ್ಯಾಯಾಲಯಕ್ಕೆ ಕೋರಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ಜೈಲಿನ ಮೂಲಗಳು ಹೇಳಿವೆ.

ಹಗರಣದ ಪ್ರಮುಖ ಆರೋಪಿಗಳಾದ ರುದ್ರಗೌಡ ಡಿ. ಪಾಟೀಲ, ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಅವರೊಂದಿಗೆ ವೈಜನಾಥ ಕೂಡ ಕೈಜೋಡಿಸಿದ್ದು, ಹಣಕಾಸಿನ ‘ಡೀಲ್‌’ ನಡೆಸಿದ ಆರೋಪದಡಿ ಬಂಧಿಸಲಾಗಿತ್ತು. ಮೇ 13ಕ್ಕೆ ಅವರ ಸಿಐಡಿ ಕಸ್ಟಡಿ ಕೊನೆಗೊಂಡಿದ್ದರಿಂದ ಶುಕ್ರವಾರ ಸಂಜೆ ಜೈಲಿಗೆ ಕಳುಹಿಸಲಾಯಿತು.

‘ವೈಜನಾಥ ಪತ್ನಿ ಸುನಂದಾ ಇದೇ ಕಾರಾಗೃಹದ ಜೈಲರ್‌ ಆಗಿದ್ದಾರೆ. ಹೀಗೆ, ಪತಿ ಕೈದಿಯಾಗಿದ್ದಾಗ ಪತ್ನಿ ಜೈಲರ್‌ ಆಗಿರಬಾರದು ಎಂಬ ನಿಯಮವಿಲ್ಲ. ಅವರು ಪತಿಗೆ ಅನುಕೂಲಕರ ವಾತಾವರಣ ಕಲ್ಪಿಸುವುದಕ್ಕೂ ಅವಕಾಶವಿಲ್ಲ. ಆದರೆ, ಪತಿ–ಪತ್ನಿಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ, ವಿಚಾರಣಾಧೀನ ಕೈದಿಯನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಕೋರುತ್ತೇವೆ. ಒಂದು ವೇಳೆ ನ್ಯಾಯಾಧೀಶರು ಇದನ್ನು ಪುರಸ್ಕರಿಸದಿದ್ದರೆ, ಜೈಲರ್‌ ಸುನಂದಾ ಅವರನ್ನೇ ತಾತ್ಕಾಲಿಕವಾಗಿ ವರ್ಗ ಮಾಡಲಾಗುವುದು’ ಎನ್ನಲಾಗುತ್ತಿದೆ.

ವೈಜನಾಥ ಜೈಲು ಸೇರಿದ ಕಾರಣ ಪತ್ನಿ ಸುನಂದಾ ಅವರಿಗೆ ಶನಿವಾರದಿಂದ ಸೋಮವಾರದವರೆಗೆ ರಜೆ ನೀಡಲಾಗಿದೆ ಎಂದೂ ಜೈಲಿನ ಮೂಲಗಳು ಖಚಿತಪಡಿಸಿವೆ.

ಗೇಲಿ ಮಾಡಿದ ವಿಡಿಯೊ ವೈರಲ್‌

ಇಲ್ಲಿನ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಮುಖ್ಯಸ್ಥೆ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರ ಹೆಸರು ಪ್ರಕರಣದಲ್ಲಿ ಕೇಳಿಬಂದ ದಿನದಿಂದಲೂ ಒಂದಲ್ಲ ಒಂದು ರೀತಿಯ ಟ್ರೋಲ್‌ ನಡೆಯುತ್ತಲೇ ಇದೆ. ಈ ಹಿಂದೆ ಅವರು ಸಿನಿಮಾ ಹಾಡಿಗೆ ಹಾಕಿದ್ದ ಹೆಜ್ಜೆಗಳನ್ನು ಪಡ್ಡೆಗಳು ಟ್ರೋಲ್‌ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿದ್ದ ಸೀರೆ ಉಟ್ಟ ಚಿತ್ರ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಈಗ ‘ರಿಮಿಕ್ಸ್‌’ ಒಂದನ್ನು ಸಿದ್ಧಪಡಿಸಿರುವ ಕಿಡಿಗೇಡಿಗಳು ‘ಮಸ್ತ್‌ ಮಸ್ತು ಹುಡುಗಿ ಬಂದ್ಲು...’ ಎಂಬ ಸಿನಿಮಾ ಹಾಡು ವೈರಲ್‌ ಮಾಡಿದ್ದಾರೆ. ಇದರಲ್ಲಿ ದಿವ್ಯಾ ಹಾಗರಗಿ ಅವರೊಂದಿಗೆಮುಖ್ಯಮಂತ್ರಿ, ಗೃಹಸಚಿವ ಮತ್ತು ಇತರ ಕೆಲ ಸಚಿವರು, ಬಿಜೆಪಿಯ ಮುಖಂಡರ ಭಾವಚಿತ್ರಗಳನ್ನು ಬಳಸಿಕೊಂಡು ಸಂಕಲನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT