ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ₹1.25 ಕೋಟಿವರೆಗೂ ಬಿಕರಿ?

ಆರೋಪಿ ಅಭ್ಯರ್ಥಿಗಳು ಬಾಯ್ಬಿಟ್ಟ ಸಂಗತಿ
Last Updated 2 ಮೇ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಆಯ್ಕೆಯಾಗುವುದಕ್ಕಾಗಿ ಆರೋಪಿ ಅಭ್ಯರ್ಥಿಗಳು, ₹ 30 ಲಕ್ಷದಿಂದ ₹ 1.25 ಕೋಟಿವರೆಗೂ ಹಣ ಕೊಟ್ಟಿದ್ದಾರೆಂಬ ಮಾಹಿತಿ ಸಿಐಡಿಗೆ ಲಭ್ಯವಾಗಿದೆ. ಹಣ ವರ್ಗಾವಣೆಗೆ ಸಂಬಂಧಪಟ್ಟ ಪುರಾವೆಗಳಿಗಾಗಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಒಎಂಆರ್‌ ತಿದ್ದಿ ಹಾಗೂ ಬ್ಲೂಟೂತ್ ಉಪಕರಣ ಮೂಲಕ ಅಕ್ರಮ ಎಸಗಿ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಗಿಟ್ಟಿಸಿದ್ದ 22 ಅಭ್ಯರ್ಥಿಗಳ ವಿರುದ್ಧ ಈಗಾಗಲೇ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳಾದ ಹೆಡ್‌ ಕಾನ್‌ಸ್ಟೆಬಲ್ ಎಸ್. ಮಮತೇಶ್ ಗೌಡ, ಕಾನ್‌ಸ್ಟೆಬಲ್‌ಗಳಾದ ಬಿ. ಗಜೇಂದ್ರ, ಸಿ. ಯಶವಂತ ದೀಪ, ಸಾಮಾನ್ಯ ಅಭ್ಯರ್ಥಿಗಳಾದ ಆರ್. ಮಧು, ಎಚ್‌.ಯು. ರಘುವೀರ್, ಸಿ.ಎಂ. ನಾಗರಾಜ್, ಮನುಕುಮಾರ್ ಸೇರಿದಂತೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಪ್ರಕರಣದಲ್ಲಿ 26 ಮಂದಿಯನ್ನು ಬಂಧಿಸಲಾಗಿದ್ದು, ಒಟ್ಟಾರೆ ಬಂಧಿತರ ಸಂಖ್ಯೆ 38ಕ್ಕೆ ಏರಿದೆ.

ಹೈಗ್ರೌಂಡ್ಸ್ ಠಾಣೆ ಪ್ರಕರಣದ ತನಿಖೆಯನ್ನೂ ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಂಧಿತ 12 ಅಭ್ಯರ್ಥಿಗಳನ್ನು ಸಿಐಡಿ ಅಧಿಕಾರಿಗಳು ಭಾನುವಾರ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

‘ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಕೆಲ ಅಭ್ಯರ್ಥಿಗಳು, ಲಿಖಿತ ಪರೀಕ್ಷೆಗೂ ಮುನ್ನವೇ ಕೆಲ ಏಜೆಂಟರನ್ನು ಸಂಪರ್ಕಿಸಿದ್ದರು. ಅಕ್ರಮ ಎಸಗಲು ಅನುಕೂಲ ಮಾಡಿಕೊಡುವಂತೆ ₹ 30 ಲಕ್ಷದಿಂದ ₹ 1.25 ಕೋಟಿವರೆಗೂ ಹಣ ಕೊಟ್ಟಿದ್ದರೆಂಬ ಮಾಹಿತಿ ಇದೆ. ಯಾವ ಅಭ್ಯರ್ಥಿ ಬಳಿಯೂ ಲಿಖಿತ ಪುರಾವೆ ಇಲ್ಲ. ಹೀಗಾಗಿ, ಹಣ ಎಲ್ಲಿದೆ? ಎಂಬುದನ್ನು ಪತ್ತೆ ಮಾಡಲು ಕಾಲಾವಕಾಶ ಬೇಕು’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಏಜೆಂಟರ ಜೊತೆ ಮಾತ್ರ ಅಭ್ಯರ್ಥಿಗಳು ಸಂಪರ್ಕದಲ್ಲಿದ್ದರು. ಆದರೆ, ಏಜೆಂಟರ ಮೇಲೆ ಯಾರೆಲ್ಲ ಇದ್ದಾರೆ ಹಾಗೂ ಯಾರಿಗೆಲ್ಲ ಹಣ ಹೋಗಿದೆ ಎಂಬ ಮಾಹಿತಿ ಅವರಿಗಿಲ್ಲ. ಇದನ್ನು ತಿಳಿದುಕೊಳ್ಳಲು ಪ್ರತ್ಯೇಕ ತಂಡ ತನಿಖೆ ಮುಂದುವರಿಸಿದೆ’ ಎಂದೂ ಹೇಳಿವೆ.

ಅರ್ಧ ಹಣ ಕೊಟ್ಟಿದ್ದ ಕೆಲ ಅಭ್ಯರ್ಥಿಗಳು: ‘ಲಿಖಿತ ಪರೀಕ್ಷೆಗೂ ಮುನ್ನ ಅರ್ಧ ಹಾಗೂ ಆಯ್ಕೆ ಪಟ್ಟಿಯಲ್ಲಿ ಹೆಸರು ಬಂದ ನಂತರ ಇನ್ನರ್ಧ ಹಣ ನೀಡುವ ಬಗ್ಗೆ ಕೆಲ ಅಭ್ಯರ್ಥಿಗಳು ಒಪ್ಪಂದ ಮಾಡಿಕೊಂಡಿದ್ದರು. ಹೀಗಾಗಿ, ಕೆಲವರು ₹ 30 ಲಕ್ಷದಿಂದ ₹ 65 ಲಕ್ಷದವರೆಗೂ ಹಣ ನೀಡಿರುವ ಶಂಕೆ ಇದೆ.’

‘ಬಂಧಿತ ಅಭ್ಯರ್ಥಿಗಳಲ್ಲದೇ ಮತ್ತಷ್ಟು ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವರೆಲ್ಲ ವಿಚಾರಣೆಗೂ ಬಾರದೇ ಗೈರಾಗಿದ್ದಾರೆ. ಅವರ ಪತ್ತೆಗೂ ಪ್ರತ್ಯೇಕ ತಂಡ ರಚಿಸಲಾಗಿದೆ. ಅಭ್ಯರ್ಥಿಗಳ ವಿಚಾರಣೆಯಿಂದ ಕೆಲ ಹೆಸರುಗಳು ಹೊರಬಿದ್ದಿವೆ. ಅವರೆಲ್ಲರಿಗೂ ನೋಟಿಸ್ ನೀಡಿ ವಿಚಾರಣೆಗೆ ಕರೆಸಲು ಚಿಂತನೆ ನಡೆಸಲಾಗುತ್ತಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳ ಸಲಹೆ ಪಡೆಯಬೇಕಿದೆ’ ಎಂದೂ ಮೂಲಗಳು ತಿಳಿಸಿವೆ.

ಕ್ಯಾಮೆರಾ ದೃಶ್ಯ ಸಂಗ್ರಹ: ಸಿಬ್ಬಂದಿ ವಿಚಾರಣೆ:

ಬೆಂಗಳೂರಿನ 7 ಕೇಂದ್ರಗಳು ಮಾತ್ರವಲ್ಲದೇ ಮತ್ತಷ್ಟು ಕಡೆ ಅಕ್ರಮ ನಡೆದಿರುವ ಅನುಮಾನ ಸಿಐಡಿಗೆ ಬಂದಿದೆ.

‘ಬೆಂಗಳೂರಿನ ಎಲ್ಲ ಪರೀಕ್ಷಾ ಕೇಂದ್ರಗಳ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಪರೀಕ್ಷೆ ದಿನದಂದು ಕೇಂದ್ರಗಳಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿ ಹಾಗೂ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರನ್ನು ವಿಚಾರಣೆ ಮಾಡಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಪ್ರಭಾವಿ’ ಮುಖಂಡನ ಪಾತ್ರ ?:

‘ಅಭ್ಯರ್ಥಿಗಳಿಂದ ಹಣ ಪಡೆಯುವ ವೇಳೆ ಕೆಲ ಏಜೆಂಟರು, ರಾಜ್ಯದ ಪ್ರಭಾವಿ ಮುಖಂಡರೊಬ್ಬರ ಹೆಸರು ಬಳಸಿರುವ ಮಾಹಿತಿ ಗೊತ್ತಾಗಿದೆ. ಆದರೆ, ಅದಕ್ಕೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪ್ರಭಾವಿ ರಾಜಕಾರಣಿ ಹೆಸರು ಹೇಳಿದ್ದ ಏಜೆಂಟರಿಗೆ ಹಣ ಕೊಟ್ಟಿದ್ದ ಕೆಲ ಅಭ್ಯರ್ಥಿಗಳು, ಪಿಎಸ್‌ಐ ಹುದ್ದೆಗೆ ಆಯ್ಕೆ ಆಗಿದ್ದಾರೆ. ಸೂಕ್ತ ಪುರಾವೆಗಳನ್ನು ಸಂಗ್ರಹಿಸಿದ ಮೇಲೆಯೇ, ಆರೋಪಿತ ಅಭ್ಯರ್ಥಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದೆ’ ಎಂದೂ ಮೂಲಗಳು ತಿಳಿಸಿವೆ.

ಹಣ ನೀಡಲೆಂದೇ ‘ರಕ್ತಚಂದನ’ ಸುಲಿಗೆ ?:

ಅಕ್ರಮ ಎಸಗಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗುವುದಕ್ಕಾಗಿಯೇ ಹೆಡ್‌ ಕಾನ್‌ಸ್ಟೆಬಲ್ ಎಸ್‌. ಮಮತೇಶ್ ಗೌಡ, ಹೊಸಕೋಟೆ ಠಾಣೆ ವ್ಯಾಪ್ತಿಯಲ್ಲಿ ರಕ್ತಚಂದನ ಸುಲಿಗೆ ಮಾಡಿದ್ದರೆಂಬ ಅನುಮಾನ ಸಿಐಡಿಗೆ ಲಭ್ಯವಾಗಿದೆ.

‘ಮಮತೇಶ್ ಗೌಡ, ಅಕ್ಟೋಬರ್‌ನಲ್ಲಿ ಪಿಎಸ್ಐ ಲಿಖಿತ ಪರೀಕ್ಷೆ ಬರೆದಿದ್ದ. 2021ರ ಡಿಸೆಂಬರ್ 15ರಂದು ಹೊಸಕೋಟೆ ಸಂತೇಗೇಟ್ ಬಳಿ ವಾಹನ ಅಡ್ಡಗಟ್ಟಿ, ಚಾಲಕನಿಗೆ ಕೈಕೋಳ ತೋರಿಸಿ ₹ 13 ಲಕ್ಷ ಮೌಲ್ಯದ ರಕ್ತ ಚಂದನದ ತುಂಡುಗಳನ್ನು ಸುಲಿಗೆ ಮಾಡಿದ್ದ. ಇದೇ ಪ್ರಕರಣದಲ್ಲಿ ಆತನನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT