ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ಅಮ್ರಿತ್ ಪೌಲ್‌ ಫಾರ್ಮ್‌ಹೌಸ್‌ ಮೇಲೆ ದಾಳಿ

ಹೇಳಿಕೆ ಆಧರಿಸಿ ‘ಪ್ರಭಾವಿ’ಗಳಿಗೆ ನೋಟಿಸ್‌ ನೀಡಲು ಸಿಐಡಿ ಸಿದ್ಧತೆ
Last Updated 6 ಜುಲೈ 2022, 18:59 IST
ಅಕ್ಷರ ಗಾತ್ರ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪೊಲೀಸ್‌ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮ್ರಿತ್ ಪೌಲ್‌ ಅವರ ವಸತಿ ಸಮುಚ್ಚಯ ಹಾಗೂ ಫಾರ್ಮ್‌ ಹೌಸ್‌ ಮೇಲೆ ಬುಧವಾರ ಸಿಐಡಿ ತಂಡವು ದಾಳಿ ನಡೆಸಿ ಶೋಧಿಸಿತು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಫಾರ್ಮ್‌ ಹೌಸ್‌ನಲ್ಲಿ ಬೆಳಿಗ್ಗೆ ಒಂದು ತಂಡವು ಶೋಧ ನಡೆಸಿದರೆ, ಮತ್ತೊಂದು ತಂಡವು ಬೆಂಗಳೂರಿನ ಸಹಕಾರ ನಗರದ ವಸತಿ ಸಮುಚ್ಚಯದಲ್ಲಿ ತಪಾಸಣೆ ನಡೆಸಿತು.

ವಸತಿ ಸಮುಚ್ಚಯದಲ್ಲಿ ಮಹತ್ವದ ದಾಖಲೆಗಳು, ನೇಮಕಾತಿ ಸಂಬಂಧ ಸರ್ಟಿಫಿಕೇಟ್‌ಗಳು ತನಿಖಾ ತಂಡಕ್ಕೆ ಸಿಕ್ಕಿದೆ. ಫಾರ್ಮ್‌ ಹೌಸ್‌ನಲ್ಲಿ ಕಡಿಮೆ ಮೊತ್ತದ ನಗದು ದೊರೆತಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಬ್ಬ ಆರೋಪಿ ಜಾಗೃತ್‌ ಮನೆಯಲ್ಲೂ ಶೋಧ ಕಾರ್ಯ ನಡೆಸಲಾಗಿದೆ. ಅಲ್ಲಿಯೂ ಮೊಬೈಲ್‌ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಅಮ್ರಿತ್‌ ಪೌಲ್‌ ಅವರನ್ನು ಸೋಮವಾರ ಬಂಧಿಸಿ ವಶಕ್ಕೆ ಪಡೆದಿದ್ದ ಸಿಐಡಿ ತಂಡವು ತನ್ನ ಕಚೇರಿಯಲ್ಲಿ ಮೂರನೇ ದಿನವಾದ ಬುಧವಾರ ಸಹ ತೀವ್ರ ವಿಚಾರಣೆಗೆ ಒಳಪಡಿಸಿತು. ಇತರೆ ಬಂಧಿತ ಆರೋಪಿಗಳು ನೀಡಿದ್ದ ಹೇಳಿಕೆ ಆಧರಿಸಿ ಪ್ರಶ್ನೆ ಹಾಕಲಾಗಿದೆ. ಕಮಿಷನ್‌ ವಿಚಾರ, ಹಣ ವರ್ಗಾವಣೆಯ ಬಗ್ಗೆ ಮಾಹಿತಿ ಕಲೆಹಾಕಿದೆ.

ಈ ಮಧ್ಯೆ 1ನೇ ಎಸಿಎಂಎಂ ನ್ಯಾಯಾಲಯವು ಅಮ್ರಿತ್‌ ಪೌಲ್‌ಗೆ ಮನೆಯ ಊಟ ನೀಡಲು ಅದೇಶಿಸಿದೆ.

ಪೌಲ್‌ ಅವರಿಗೆ ಆರೋಗ್ಯ ಸರಿಯಿಲ್ಲ. ಮನೆಯ ಊಟ ನೀಡಲು ಅವಕಾಶ ನೀಡುವಂತೆ ಅವರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ನ್ಯಾಯಾಲಯವು ಬೆಳಿಗ್ಗೆಯ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಮನೆ ನೀಡಲು ಅವಕಾಶ ನೀಡಿದೆ.

ಪೌಲ್‌ ವಿಚಾರಣೆ ವೇಳೆ ‘ಪ್ರಭಾವಿ’ಗಳ ಹೆಸರು ಬಹಿರಂಗ ಪಡಿಸಿದ್ದು, ಅವರಿಗೆ ನೋಟಿಸ್‌ ನೀಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT