ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ: ವೈಜನಾಥ ಕಲ್ಯಾಣಿ ಜಾಮೀನು ಅರ್ಜಿ ತಿರಸ್ಕೃತ

Last Updated 2 ಜೂನ್ 2022, 13:09 IST
ಅಕ್ಷರ ಗಾತ್ರ

ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನದಲ್ಲಿರುವ ಕೆಎಸ್‌ಆರ್‌ಪಿ ಸಹಾಯಕ ಕಮಾಂಡೆಂಟ್ ಆಗಿದ್ದ ವೈಜನಾಥ ಕಲ್ಯಾಣಿ ರೇವೂರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ ಮೂರನೇ ಜೆಎಂಎಫ್‌ಸಿ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

ಆರೋಪಿಯು ಪ್ರಭಾವಿ ಅಧಿಕಾರಿಯಾಗಿದ್ದುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬಾರದು ಎಂಬ ಸಿಐಡಿ ಪರ ವಕೀಲ ಶಿವಶರಣಪ್ಪ ಹೋತಪೇಟ ಅವರ ವಾದ ಪುರಸ್ಕರಿಸಿದ ನ್ಯಾಯಾಧೀಶ ಶ್ರೀನಿವಾಸ ಕೆ.ಆರ್. ಅವರು ಅರ್ಜಿಯನ್ನು ವಜಾಗೊಳಿಸಿದರು.

ಅಭ್ಯರ್ಥಿಗಳಿಗೆ ಅಕ್ರಮವಾಗಿ ಪರೀಕ್ಷೆಯಲ್ಲಿ ಪಾಸ್ ಮಾಡಿಸಲು ನೆರವಾದ ಆರೋಪದ ಮೇರೆಗೆ ವೈಜನಾಥ ಅವರನ್ನು ಮೇ 6ರಂದು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.

ಆರ್.ಡಿ. ಪಾಟೀಲ ಜೈಲಿಗೆ: ಪ್ರಕರಣದ ಪ್ರಮುಖ ಆರೋಪಿ ಅಫಜಲಪುರ ತಾಲ್ಲೂಕು ಸೊನ್ನ ಗ್ರಾಮದ ಆರ್‌.ಡಿ. ಪಾಟೀಲ ಸಿಐಡಿ ಕಸ್ಟಡಿ ಅಂತ್ಯಗೊಂಡಿದ್ದರಿಂದ ಗುರುವಾರ ಜೈಲಿಗೆ ಕಳಿಸಲಾಯಿತು.

ಕಲಬುರಗಿಯ ಎಂ.ಎಸ್. ಇರಾನಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿ ಪ್ರಭು ಶರಣಪ್ಪ ಎಂಬುವವರಿಗೆ ಬ್ಲೂಟೂತ್ ಮೂಲಕ ಉತ್ತರ ತಲುಪಿಸಿದ ಆರೋಪದ ಮೇರೆಗೆ ಪಾಟೀಲ ವಿರುದ್ಧ ನಗರದ ಸ್ಟೇಶನ್ ಬಜಾರ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಹೀಗಾಗಿ, ಮತ್ತೊಮ್ಮೆ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಇದಕ್ಕೂ ಮೊದಲು ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪರೀಕ್ಷಾಕೇಂದ್ರದಲ್ಲಿ ಹಲವು ಅಭ್ಯರ್ಥಿಗಳಿಗೆ ಅಕ್ರಮ ಮಾರ್ಗದ ಮೂಲಕ ಉತ್ತರ ತಲುಪಿಸಿದ ಆರೋಪದ ಮೇರೆಗೆ ಆರ್.ಡಿ. ಪಾಟೀಲ ಬಂಧನವಾಗಿತ್ತು.

ಬುಧವಾರ ಬಂಧಿತರಾದ ಅಫಜಲ‍ಪುರದ ಅಸ್ಲಂ ಸೈಫುನ್ ಮುಲ್ಕ್ ಮುಜಾವರ ಹಾಗೂ ಮುನಾಫ್ ಜಮಾದಾರಗೆ ಏಳು ದಿನ ಹಾಗೂ ಅರ್‌.ಡಿ. ಪಾಟೀಲ ಸೋದರಳಿಯ ಪ್ರಕಾಶ ಉಡಗಿಗೆ 9 ದಿನಗಳವರೆಗೆ ಸಿಐಡಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT