ಶನಿವಾರ, ಜೂನ್ 25, 2022
25 °C

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ಸಿಮ್‌ಕಾರ್ಡ್‌ ಖರೀದಿ ಹೊಣೆ ಅಭ್ಯರ್ಥಿಗಳಿಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸದ್ಯ ಸಿಐಡಿ ವಶದಲ್ಲಿರುವ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ, ಪರೀಕ್ಷೆ ವೇಳೆ ಬ್ಲೂಟೂತ್ ಸಾಧನ ಹಾಗೂ ಸಿಮ್‌ಕಾರ್ಡ್‌ಗಳ ಖರೀದಿ ಹೊಣೆ ಅಭ್ಯರ್ಥಿಗೆ ವಹಿಸುತ್ತಿದ್ದ. ಪರೀಕ್ಷೆ ಮುಗಿದ ಬಳಿಕ ಎರಡನ್ನೂ ಬಿಸಾಕುವಂತೆ ಹೇಳುತ್ತಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ನಗರದ ಎಂ.ಎಸ್. ಇರಾನಿ ಕಾಲೇಜಿನ ಪಿಎಸ್‌ಐ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯಾಗಿದ್ದ ಪ್ರಭು ಎಂಬಾತ ನೀಡಿದ ಮಾಹಿತಿ ಮೇರೆಗೆ ಆರ್‌.ಡಿ. ಪಾಟೀಲ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸಿಐಡಿ ಅಧಿಕಾರಿಗಳು, ಎರಡನೇ ಬಾರಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸುವ ವೇಳೆ ಈ ಮಾಹಿತಿ ಗೊತ್ತಾಗಿದೆ.

ಪರೀಕ್ಷೆಯ ವೇಳೆ ಬಳಸಲಾದ ಎರಡು ಸಿಮ್‌ಕಾರ್ಡ್‌ಗಳನ್ನು ಆರೋಪಿ ಪ್ರಭು ಹಾಗೂ ಆತನ ತಂದೆ ಶರಣಪ್ಪ ಕಲಬುರಗಿಯಲ್ಲೇ ಖರೀದಿಸಿದ್ದರು. ಪರೀಕ್ಷೆ ಮುಗಿದ ಬಳಿಕ ಯಾವುದೇ ಕಾರಣಕ್ಕೂ ಅವುಗಳನ್ನು ಬಳಸದಂತೆ ಆರ್‌.ಡಿ. ಪಾಟೀಲ ತಾಕೀತು ಮಾಡಿದ್ದ ಎಂದು ವಿಚಾರಣೆ ವೇಳೆ ತಂದೆ– ಮಗ ಹೇಳಿಕೆ ನೀಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುವುದಕ್ಕಾಗಿ ಆರ್‌.ಡಿ.ಪಾಟೀಲಗೆ ಏಳು ದಿನಗಳವರೆಗೆ ತಮ್ಮ ವಶಕ್ಕೆ ಪಡೆದಿದ್ದಾರೆ.

ತನಿಖೆಗೆ ಅಸಹಕಾರ: ಯಾವುದೇ ಪ್ರಶ್ನೆ ಕೇಳಿದರೂ ಆರೋಪಿ ಆರ್‌.ಡಿ. ಪಾಟೀಲ ಹಾರಿಕೆ ಉತ್ತರ ನೀಡುತ್ತಿದ್ದು,ಇದು ಸಿಐಡಿ ಅಧಿಕಾರಿಗಳಿಗೆ ತಲೆನೋವಾಗಿದೆ. ಆದಾಗ್ಯೂ, ಬೇರೆ ಬೇರೆ ಆರೋಪಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಇಟ್ಟುಕೊಂಡೇ ಪಾಟೀಲಗೆ ಬೆವರಿಳಿಸುತ್ತಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.

ಅಭ್ಯರ್ಥಿಯಾಗಿದ್ದ ಪ್ರಭುಗೆ ಬ್ಲೂಟೂತ್ ಸಾಧನ ಬಳಸಿ ಉತ್ತರ ಹೇಳುವ ಮೂಲಕ ಪಾಸ್ ಮಾಡಿಸಲು ಆರ್‌.ಡಿ. ಪಾಟೀಲ ₹ 50 ಲಕ್ಷ ಬೇಡಿಕೆ ಇಟ್ಟಿದ್ದ. ಅಷ್ಟೂ ಹಣವನ್ನು ತಮ್ಮ ನಿಕಟವರ್ತಿ, ಲೆಕ್ಕ ಪರಿಶೋಧಕ ಚಂದ್ರಕಾಂತ ಕುಲಕರ್ಣಿ ಮೂಲಕ ಪಡೆದುಕೊಂಡಿದ್ದ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಓದಿ... ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ: ಎಡಿಜಿಪಿ–ಡಿವೈಎಸ್ಪಿ ಮುಖಾಮುಖಿ ವಿಚಾರಣೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು