ಬೆಂಗಳೂರು: ಜೈಲಿನ ಒಳಗಿರುವ ಆಸ್ಪತ್ರೆ ಕೋಣೆಯಲ್ಲೇ ಇರಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು.ನನ್ನ ದೇಹ ಪ್ರಕೃತಿ ನಿರ್ದಿಷ್ಟ ಆಹಾರ ಪದ್ಧತಿಗೆ ಒಳಪಟ್ಟಿರುವ ಕಾರಣ ಮನೆ ಊಟವೇ ಬೇಕು. ಪ್ರತಿದಿನವೂ ಹೆಂಡತಿ ಮಕ್ಕಳನ್ನು 30 ನಿಮಿಷ ಭೇಟಿ ಮಾಡಲು ಅವಕಾಶ ನೀಡಬೇಕು...!
ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ಪ್ರಮುಖ ಆರೋಪಿಯಾದ ಐಪಿಎಸ್ ಅಧಿಕಾರಿ ಅಮ್ರಿತ್ ಪೌಲ್ ಕೋರ್ಟ್‌ಗೆ ಮಾಡಿದ ಮನವಿಯ ಮುಖ್ಯಾಂಶಗಳಿವು.
ನೇಮಕಾತಿ ವಿಭಾಗದ ಎಡಿಜಿಪಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಮ್ರಿತ್ ಪೌಲ್, ಹಗರಣದ 35ನೇ ಆರೋಪಿಯಾಗಿದ್ದು ಅವರನ್ನು ಶುಕ್ರವಾರ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಧೀಶ ಆನಂದ ಚೌಹಾಣ್ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ವಿಚಾರಣೆ ವೇಳೆ ಆರೋಪಿ ಪರ ವಕೀಲ ಅಶೀಶ್ ಕೃಪಾಕರ, ಪೌಲ್ ಅವರ ವಿಶೇಷ ಆರೈಕೆಗೆ ಕೋರಿ ಸಲ್ಲಿಸಿದ ಅರ್ಜಿಗೆ, ವಿಶೇಷ ಪ್ರಾಸಿಕ್ಯೂಟರ್ ಆದ ಹೈಕೋರ್ಟ್ ವಕೀಲ ಪಿ.ಪ್ರಸನ್ನಕುಮಾರ್ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
‘ಜೈಲು ಕೈಪಿಡಿ ಏನು ಹೇಳುತ್ತದೆಯೋ ಅದರ ಅನುಸಾರವೇ ಈ ಆರೋಪಿಯನ್ನೂ ನಡೆಸಿಕೊಳ್ಳಬೇಕು. ಅವರು ಕೋರಿರುವ ವಿಶೇಷ ಸೌಲಭ್ಯಗಳನ್ನು ಈ ನ್ಯಾಯಾಲಯ ಮಾನ್ಯ ಮಾಡದೇ, ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ಬಲವಾಗಿ ಪ್ರತಿಪಾದಿಸಿದರು. ಪ್ರಾಸಿಕ್ಯೂಷನ್‌ನ ಈ ಮನವಿಯನ್ನು ನ್ಯಾಯಾಧೀಶರುಪುರಸ್ಕರಿಸಿದರು.
ಇದೇ ವೇಳೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರಿ ಪ್ರಸನ್ನಕುಮಾರ್ ನ್ಯಾಯಾ ಧೀಶರಿಗೆ ರಿಮ್ಯಾಂಡ್ ಅರ್ಜಿ ಸಲ್ಲಿಸಿದರು.
ಅರ್ಜಿಯಲ್ಲಿನ ಕಾರಣಗಳು
* ಆರೋಪಿ ಪೌಲ್ ಪೊಲೀಸ್ ಇಲಾಖೆಯ ಘನತೆಗೆ ಕುಂದು ತರುವಂತಹ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.ಗಂಭೀರ ಸ್ವರೂಪದ ಈ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ.
*ಎಡಿಜಿಪಿ ದರ್ಜೆಯ ಉನ್ನತ ಅಧಿಕಾರಿಯಾಗಿದ್ದು, ಜಾಮೀನು ಪಡೆದು ಹೊರಗೆ ಹೋದಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ.
*ವಶಪಡಿಸಿಕೊಂಡಿರುವ ಮೊಬೈಲ್ ಫೋನ್‌ಗಳನ್ನು ಎಫ್‌ಎಸ್‌ಎಲ್ ವಿಶ್ಲೇಷಣೆಗೆ ಕಳುಹಿಸಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ.
*ಪೌಲ್ ತಮ್ಮ ಬಳಿಯಿದ್ದ ಪಿಎಸ್ಐ ನೇಮಕಾತಿಗೆ ಸಂಬಂಧಿಸಿದ ಒಎಂಆರ್ ಉತ್ತರ ಪತ್ರಿಕೆಗಳ ಕಿಟ್ ಬಾಕ್ಸ್‌ಗಳನ್ನು ಇಡಲಾಗಿದ್ದ ಅಲ್ಮೇರಾದ ಕೀಯನ್ನುಒಎಂಆರ್ ಪತ್ರಿಕೆ ತಿದ್ದುಪಡಿ ಮಾಡಲು ಒಂದನೇ ಆರೋಪಿಗೆ ನೀಡಿದ್ದಾಗಿ 31ನೇ ಆರೋಪಿ ಹೇಳಿಕೆ ನೀಡಿರುತ್ತಾನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕಾಗಿದೆ.
*ಆರೋಪಿತ ಅಧಿಕಾರಿಯೊಂದಿಗೆ ಪಿಎಸ್‌ಐಗೆ ಆಯ್ಕೆಯಾದ ಯಾರೆಲ್ಲಾ ಅಭ್ಯರ್ಥಿಗಳು, ಸಂಪರ್ಕ ಹೊಂದಿದ್ದರು ಎನ್ನುವ ಬಗ್ಗೆ ಸಾಕ್ಷ್ಯಾಧಾರ ಸಂಗ್ರಹಿಸಬೇಕಿದೆ.
‘ಪ್ರಭಾವಿಗಳನ್ನು ಇನ್ನೂ ಬಂಧಿಸಬೇಕಿದೆ’
‘ಈ ಹಗರಣದ ಆರೋಪಿಗಳು ಸಾಕಷ್ಟು ಹಣ ಮತ್ತು ರಾಜಕೀಯ ಬಲ ಉಳ್ಳವರಾಗಿದ್ದು, ಇದರಲ್ಲಿ ಭಾಗಿಯಾಗಿರುವ ಇನ್ನೂ ಕೆಲವು ಪ್ರಭಾವಿಗಳನ್ನು ಬಂಧಿಸಬೇಕಿದೆ’ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದೆ.
‘ಆರೋಪಿ ಪೌಲ್ ಆರ್ಥಿಕವಾಗಿ ಬಲಾಢ್ಯರಾಗಿದ್ದು, ಸಮಾಜದ ಉನ್ನತ ವ್ಯಕ್ತಿಗಳ ಪರಿಚಯ ಹೊಂದಿದ್ದಾರೆ. ಈ ಹಗರಣಸಮಾಜದ ಸ್ವಾಸ್ಥ್ಯವನ್ನೇ ಹಾಳುಮಾಡುವ ಸ್ವರೂಪ ಹೊಂದಿದೆ. ಆರೋಪಿಗಳಿಗೆ ಜಾಮೀನು ನೀಡಿದರೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಸಾಕ್ಷಿದಾರರಿಗೆ ಬೆದರಿಕೆ ಹಾಕಬಲ್ಲರು ಮತ್ತು ಆಮಿಷವೊಡ್ಡಬಲ್ಲರು. ಇದರಿಂದ ತನಿಖೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ’ ಎಂದು ಪ್ರಾಸಿಕ್ಯೂಷನ್ ಹೇಳಿದೆ.
‘ಮಂಪರು ಪರೀಕ್ಷೆಗೆ ಒಳಪಡಿಸಬೇಕು’
‘ಆರೋಪಿ ಅಮ್ರಿತ್ ಪೌಲ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಅವಶ್ಯಕತೆ ಇದೆ. ಹೀಗಾಗಿ ಅವರಿಂದ ಅನುಮತಿ ಪಡೆಯಲು ನಿರ್ದೇಶಿಬೇಕು’ ಎಂದು ಕೋರಿ ಪಿ.ಪ್ರಸನ್ನಕುಮಾರ್, ನ್ಯಾಯಾಧೀಶರಿಗೆ ಮನವಿ ಮಾಡಿದರು.
ಅರ್ಜಿ ಸ್ವೀಕರಿಸಿದ ನ್ಯಾಯಾಧೀಶ ಆನಂದ ಚೌಹಾಣ್, ‘ಶನಿವಾರ (ಜುಲೈ 16) ಈ ಅರ್ಜಿಗೆ ಉತ್ತರಿಸಿ’ ಎಂದು ಆರೋಪಿ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.