ಪಿಟಿಸಿಎಲ್: ಎಸ್‌ಸಿಎಸ್‌ಟಿ ಆಯೋಗಕ್ಕಿಲ್ಲ ಅಧಿಕಾರ

ಬೆಂಗಳೂರು: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂ ಪರಭಾರೆ ನಿಷೇಧ ಕಾಯ್ದೆ(ಪಿಟಿಸಿಎಲ್) ವಿಚಾರಣೆ ನಡೆಸುವ ಅಧಿಕಾರ ಎಸ್‌ಸಿಎಸ್‌ಟಿ ಆಯೋಗಕ್ಕೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅರ್ಜಿದಾರ ಶಿವಮೊಗ್ಗದ ಗಂಗಣ್ಣ ಮತ್ತು ಪ್ರತಿವಾದಿಗಳಲ್ಲಿ ಒಬ್ಬರಾದ ಎಚ್. ಜಯಪ್ಪ ನಡುವೆ ಬಹುದಿನಗಳಿಂದ ಭೂ ವ್ಯಾಜ್ಯ ನಡೆಯುತ್ತಿತ್ತು. ಗಂಗಣ್ಣ ಅವರ ಸ್ವಾಧೀನದಲ್ಲಿದ್ದ ಜಮೀನು ತಮಗೇ ಸೇರಬೇಕೆಂದು ಜಯಪ್ಪ, ಉಪವಿಭಾಗಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿ, ಇಬ್ಬರೂ ಮಂಜೂರಾತಿದಾರರೇ ಆಗಿದ್ದು ಪಿಟಿಸಿಎಲ್ ಕಾಯ್ದೆ ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದ್ದರು.
ಉಪವಿಭಾಗಾಧಿಕಾರಿ ಆದೇಶ ಪ್ರಶ್ನಿಸಿ ಜಯಪ್ಪ, ಎಸ್‌ಸಿಎಸ್‌ಟಿ ಆಯೋಗದ ಮೊರೆ ಹೋಗಿದ್ದರು. ಆಯೋಗವು ಜಯಪ್ಪ ಅವರಿಗೆ ಭೂಮಿ ವಾಪಸ್ ಕೊಡಿಸಲು ಮುಂದಾಯಿತು. ಆಯೋಗದ ಈ ನಡೆ ಪ್ರಶ್ನಿಸಿ ಗಂಗಣ್ಣ ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ‘ಉಪವಿಭಾಗಾಧಿಕಾರಿ ಆದೇಶದ ವಿರುದ್ಧ ಜಿಲ್ಲಾಧಿಕಾರಿಗೆ ಮೇಲ್ಮನವಿ ಹೋಗಿ ವ್ಯಾಜ್ಯ ಬಗೆಹರಿಸಿಕೊಳ್ಳಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡದವರ ರಕ್ಷಣೆ ಮತ್ತು ಅವರ ಕಲ್ಯಾಣಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಮಾತ್ರ ಆಯೋಗ ವಿಚಾರಣೆ ನಡೆಸಬಹುದು’ ಎಂದು ಹೇಳಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.