ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಪಠ್ಯ ಪರಿಷ್ಕರಣೆ ಇಲ್ಲ: ನಿರ್ಧಾರ ಕೈಬಿಟ್ಟ ಸರ್ಕಾರ

ರೋಹಿತ್ ಚಕ್ರತೀರ್ಥ ಸಮಿತಿಗೆ ನೀಡಿದ್ದ ಜವಾಬ್ದಾರಿ
Last Updated 7 ಜೂನ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಗೆ ಪಿಯು ತರಗತಿಯ ಪಠ್ಯವನ್ನು ಪರಿಷ್ಕರಿಸುವ ಹೊಣೆಯನ್ನು ನೀಡುವ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ.

ಈ ಬಗ್ಗೆ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ‘ಪಿಯು ತರಗತಿಯ ಒಂದೇ ಒಂದು ಪಾಠ ಪರಿಷ್ಕರಿಸಬೇಕು ಎಂಬ ಮನವಿ ಬಂದಿತ್ತು. ಒಂದು ಪಠ್ಯಕ್ಕಾಗಿ ಸಮಿತಿ ರಚಿಸುವುದು ಬೇಡವೆಂದು ಈ ಸಮಿತಿಗೇ ವಹಿಸಿದ್ದೆವು. ಈಗ ಸಮಿತಿಯೇ ವಿಸರ್ಜನೆ ಆಗಿದೆ. ಹೀಗಾಗಿ, ಪಿಯು ಪಠ್ಯದಲ್ಲಿ ಸದ್ಯ ಯಾವ ಪರಿಷ್ಕರಣೆ ಇಲ್ಲ. ಈಗಿರುವ ಪಠ್ಯವೇ ಮುಂದುವರಿಯಲಿದೆ’ ಎಂದರು.

ದ್ವಿತೀಯ ಪಿಯುಸಿ ಇತಿಹಾಸ ವಿಷಯದ ಪಠ್ಯದಲ್ಲಿ ಅಧ್ಯಾಯ 4.2ರ ‘ಹೊಸ ಧರ್ಮಗಳ ಉದಯ’ ಪಠ್ಯಭಾಗವನ್ನು ಪರಿಷ್ಕರಿಸಲು ಸರ್ಕಾರ ಮುಂದಾಗಿತ್ತು. ಪಠ್ಯ ಪರಿಷ್ಕರಣೆಯ ಹೊಣೆಯನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಗೆ ವಹಿಸಲಾಗಿತ್ತು. ಈ ಸಮಿತಿ ಪಠ್ಯವನ್ನು ಪರಿಷ್ಕರಿಸಿ ವರದಿಯನ್ನೂ ಸಿದ್ಧಪಡಿಸಿತ್ತು.

ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಶಾಲಾ ಪಠ್ಯ ಪುಸ್ತಕಗಳ ಬಗ್ಗೆ ವಿವಿಧ ವಲಯಗಳಿಂದ ತೀವ್ರ ಆಕ್ಷೇಪ, ವಿರೋಧ ವ್ಯಕ್ತವಾಗುತ್ತಿದ್ದಂತೆ, ಈ ಸಮಿತಿಯನ್ನು ವಿಸರ್ಜಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದರು. ‘ಸಮಿತಿಯನ್ನು ವಿಸರ್ಜಿಸಿರುವುದರಿಂದ ಪಿಯುಸಿ ಪಠ್ಯಪುಸ್ತಕ ಪರಿಷ್ಕರಿಸಿದ ವರದಿ ಪಡೆಯುವುದಿಲ್ಲ’ ಎಂದು ಸಚಿವ ನಾಗೇಶ್‌ ಸ್ಪಷ್ಟಪಡಿಸಿದರು.‌

2021ರ ಫೆಬ್ರುವರಿ 17 ರಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಟಿಪ್ಪಣಿ ಕಳುಹಿಸಿದ್ದ ಬಿ.ಸಿ.ನಾಗೇಶ್‌ ಅವರು, ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ಜವಾಬ್ದಾರಿಯನ್ನುರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿಗೆ ನೀಡುವಂತೆ ನಿರ್ದೇಶನ ನೀಡಿದ್ದರು.

ಸಚಿವರ ನಿರ್ದೇಶನವನ್ನು ಪರಿಗಣಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿದ್ದರು.

ವೈದಿಕ ಧರ್ಮ, ಬ್ರಾಹ್ಮಣ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಅಂಶಗಳಿವೆ ಎಂದು ಕಾರಣಕ್ಕೆ ದ್ವಿತೀಯ ಪಿಯುಸಿಯಲ್ಲಿ ಇತಿಹಾಸ ಪಠ್ಯದಲ್ಲಿ ಅಧ್ಯಾಯ 4.2ರ ‘ಹೊಸ ಧರ್ಮಗಳ ಉದಯ’ ಪಠ್ಯಕ್ಕೆ ಅಖಿಲ ಭಾರತ ಬ್ರಾಹ್ಮಣ ಸಮಾಜ ಆಕ್ಷೇಪ ವ್ಯಕ್ತಪಡಿಸಿತ್ತು. ಪಠ್ಯದಲ್ಲಿರುವ ಈ ಆಕ್ಷೇಪಾರ್ಹ ಅಂಶಗಳನ್ನು ತೆಗೆದುಹಾಕುವುದಾಗಿ ನಿಕಟಪೂರ್ವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಕೂಡಾ ಹೇಳಿದ್ದರು.

‌‘ಜನಾಭಿಪ್ರಾಯ ಆಧರಿಸಿ ಮರು ಪರಿಷ್ಕರಣೆ’
ಸಾರ್ವಜನಿಕ ಅಭಿಪ್ರಾಯ ಆಧರಿಸಿಪರಿಷ್ಕೃತ ಪಠ್ಯವನ್ನು ಮರು ಪರಿಷ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಉದ್ದೇಶದಿಂದ ಈ ಹಿಂದಿನ ಎಲ್ಲ ಮೂರೂ ಸಮಿತಿಗಳು ಪರಿಷ್ಕರಿಸಿದ ಪಠ್ಯಗಳ ಕರಡನ್ನು ಎಲ್ಲರಿಗೂ ಲಭ್ಯವಾಗುವಂತೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮಂಗಳವಾರ ಭೇಟಿ ಮಾಡಿದ ಬಳಿಕ ಈ ವಿಷಯ ತಿಳಿಸಿದ ಸಚಿವ ಬಿ.ಸಿ.ನಾಗೇಶ್‌, ‘ಈ ಹಿಂದಿನ ಮೂರೂ ಸಮಿತಿಗಳು ಪರಿಷ್ಕರಿಸಿದ್ದ ಪಠ್ಯ ಪುಸ್ತಕಗಳನ್ನು ಶೀಘ್ರದಲ್ಲಿ ಜನರ ಮುಂದಿಡುತ್ತೇವೆ. ಯಾರು ಯಾವುದನ್ನು ಸೇರಿಸಿದರು, ಯಾವುದನ್ನು ಕೈಬಿಟ್ಟಿದ್ದರು ಎನ್ನುವುದನ್ನು ಅವರೇ ತೀರ್ಮಾನಿಸಲಿ. ತಪ್ಪುಗಳು ಅಥವಾ ಆಕ್ಷೇಪಗಳಿದ್ದರೆ ಅದನ್ನು ಕರ್ನಾಟಕ ಪಠ್ಯಪುಸ್ತಕ ಸೊಸೈಟಿಗೆ ಸಲ್ಲಿಸಲಾಗುವುದು’ ಎಂದರು.

‘ರೋಹಿತ್‌ ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ ಪಠ್ಯ ಪುಸ್ತಕಗಳು ಆನ್‌ಲೈನ್‌ನಲ್ಲಿ ಈಗಾಗಲೇ ಲಭ್ಯವಿದೆ. ಉಳಿದ ಸಮಿತಿಗಳು (ಮುಡಂಬಡಿತ್ತಾಯ ಮತ್ತು ಬರಗೂರು ರಾಮಚಂದ್ರಪ್ಪ) ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನು 10 ದಿನಗಳಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT