ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲ್ಸ್‌ ಪೋಲಿಯೊ: ಶೇ 90.5 ರಷ್ಟು ಸಾಧನೆ

Last Updated 31 ಜನವರಿ 2021, 16:45 IST
ಅಕ್ಷರ ಗಾತ್ರ

ಬೆಂಗಳೂರು: ಪಲ್ಸ್ ಪೋಲಿಯೊ ಲಸಿಕೆ ವಿತರಣೆ ಅಭಿಯಾನಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿಗದಿಪಡಿಸಲಾಗಿದ್ದ 5 ವರ್ಷದೊಳಗಿನ ಮಕ್ಕಳಲ್ಲಿ ಶೇ 90.5ರಷ್ಟು ಮಕ್ಕಳು ಪೋಲಿಯೊ ಹನಿ ಹಾಕಿಸಿಕೊಂಡಿದ್ದಾರೆ.

ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಬ್ಬರು ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಮೂಲಕ ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಿದರು. ‘ದೇಶವು ಪೋಲಿಯೊ ಮುಕ್ತವಾಗಿದ್ದರೂ ನೆರೆಯ ರಾಷ್ಟ್ರವಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಐದು ವರ್ಷದೊಳಗಿನ ಎಲ್ಲ ಮಕ್ಕಳೂ ಲಸಿಕೆ ಪಡೆದುಕೊಳ್ಳಬೇಕು. ಈ ಲಸಿಕೆ ಸುರಕ್ಷವಾಗಿದ್ದು, ಪೋಲಿಯೊ ವಿರುದ್ಧದ ಹೋರಾಟದಲ್ಲಿ ವಿಜಯ ಸಾಧಿಸುವುದನ್ನು ಮುಂದುವರಿಸಲು ಕೈಜೋಡಿಸಬೇಕು’ ಎಂದು ಮನವಿ ಮಾಡಿಕೊಂಡರು.

ಪಲ್ಸ್‌ ಪೋಲಿಯೊ ಲಸಿಕೆ ವಿತರಣೆ ಅಭಿಯಾನದಡಿ ಆರೋಗ್ಯ ಇಲಾಖೆಯು ಈ ಬಾರಿ 64.07 ಲಕ್ಷ ಮಕ್ಕಳನ್ನು ತಲುಪುವ ಗುರಿ ಹಾಕಿಕೊಂಡಿತ್ತು. ಇದರಲ್ಲಿ ಭಾನುವಾರ 57,98,611 ಮಕ್ಕಳು ಲಸಿಕೆ ಪಡೆದುಕೊಂಡಿದ್ದಾರೆ. ಅಂಗನವಾಡಿಗಳು, ಆರೋಗ್ಯ ಕೇಂದ್ರಗಳ ಜತೆಗೆ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಈ ಅಭಿಯಾನದಲ್ಲಿ ಲಸಿಕೆ ವಿತರಣೆಗೆ 1.10 ಲಕ್ಷ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತು.

ಉಡುಪಿ ಅಗ್ರ ಸ್ಥಾನ: ಪೋಲಿಯೊ ಲಸಿಕೆ ವಿತರಣೆಯಲ್ಲಿ ರಾಜ್ಯದಲ್ಲಿ ಉಡುಪಿ ಅಗ್ರ ಸ್ಥಾನ ಪಡೆದುಕೊಂಡಿದೆ. ಅಲ್ಲಿ 74,049 ಮಕ್ಕಳನ್ನು ಗುರುತಿಸಲಾಗಿತ್ತು. ಅದರಲ್ಲಿ 73,636 ಮಕ್ಕಳು ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯು ಶೇ 99.44 ರಷ್ಟು ಸಾಧನೆ ಮಾಡಿದೆ. ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುತಿಸಲಾದ ಮಕ್ಕಳಲ್ಲಿ ಶೇ 95ಕ್ಕೂ ಅಧಿಕ ಮಕ್ಕಳು ಪೋಲಿಯೊ ಹನಿ ಹಾಕಿಸಿಕೊಂಡಿದ್ದಾರೆ.

ಗೈರಾದ ಮಕ್ಕಳಿಗೆ ಫೆ.3ರವರೆಗೆ ಲಸಿಕೆ

ನಾನಾ ಕಾರಣಗಳಿಂದ ಗೈರಾದವರು ಹಾಗೂ ಬಿಟ್ಟು ಹೋದ ಮಕ್ಕಳಿಗೆ ಫೆ.3ರವರೆಗೆ ಪಲ್ಸ್‌ ಪೋಲಿಯೊ ಲಸಿಕೆ ನೀಡಲಾಗುತ್ತದೆ. ಆರೋಗ್ಯ ಕಾರ್ಯಕರ್ತರು ಅಂತಹ ಮಕ್ಕಳ ಮನೆಗಳಿಗೆ ತೆರಳಿ, ಪೋಲಿಯೊ ಹನಿ ಹಾಕಲಿದ್ದಾರೆ. ಹೀಗಾಗಿ ಫೆ.3ರವರೆಗೆ ಕೋವಿಡ್‌ ಲಸಿಕೆ ವಿತರಣೆ ಅಭಿಯಾನವು ರಾಜ್ಯದಲ್ಲಿ ನಡೆಯುವುದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT