ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್ ರಾಜ್‌ಕುಮಾರ್.. ಮಾತೆಲ್ಲ ಮುಗಿದ ಮೇಲೆ....

ಅಂದಾಜು 10 ಲಕ್ಷ ಅಭಿಮಾನಿಗಳು ಭಾಗಿ; ಜನ ಸಂದಣಿ ನಿಯಂತ್ರಿಸಲು ಪೊಲೀಸರ ಹರಸಾಹಸ
Last Updated 30 ಅಕ್ಟೋಬರ್ 2021, 20:40 IST
ಅಕ್ಷರ ಗಾತ್ರ

ಬೆಂಗಳೂರು:ದೂರದೂರುಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳೆಲ್ಲರದ್ದೂ ಒಂದೇ ಬಯಕೆ. ತಾವು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುವ ‘ಅಪ್ಪು’ ತಮ್ಮ ಆಕ್ರಂದನವನ್ನಾದರೂ ಆಲಿಸಿ ಮೇಲೆದ್ದು ಬಿಡಲಿ. ಎಂದಿನಂತೆ ನಿಷ್ಕಲ್ಮಶ ನಗುವಿನೊಂದಿಗೆ ಕೈಬೀಸಿ ತಮ್ಮನ್ನು ‘ಪುನೀತ’ರನ್ನಾಗಿಸಿಬಿಡಲಿ ಎಂಬುದು.

‘ಅಭಿಮಾನಿ ದೇವರುಗಳ’ ಕರತಾಡನ ಮುಗಿಲು ಮುಟ್ಟುತ್ತಿದ್ದರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರದ ‘ದೊಡ್ಮನೆ ಹುಡುಗ’ ಮುಗಿಲತ್ತ ಮುಖಮಾಡಿ ತಣ್ಣಗೆ ಮಲಗಿಬಿಟ್ಟಿದ್ದರು.

ಸದಾ ಲವಲವಿಕೆಯಿಂದ ಓಡಾಡುತ್ತಿದ್ದ, ಸರಳತೆಯ ಪ್ರತಿರೂಪದಂತಿದ್ದ ‘ಪರಮಾತ್ಮ’ ನಿಸ್ತೇಜವಾಗಿ ಮಲಗಿರುವುದನ್ನು ಕಂಡು ಮಳೆರಾಯನಿಗೂ ಮರುಕ ಹುಟ್ಟಿದಂತಿತ್ತು. ಆಗಸದಲ್ಲಿ ತೂಗುತ್ತಿದ್ದ ಕಾರ್ಮೋಡ ಸಂಜೆಯ ವೇಳೆಗೆ ಕರಗಿ ಮಳೆ ಹನಿಗಳು ಧರೆಗೆ ಮುತ್ತಿಕ್ಕಿದವು. ಅ‍‍ಪ್ಪುವಿನ ಅಗಲಿಕೆಯ ನೋವು ತಾಳಲಾರದೆ ವರುಣ ದೇವನೂ ಕಂಬನಿ ಮಿಡಿದನೇನೋ ಎಂಬಂತೆ ಜನ ಭಾವಿಸಿದರು.

ಕಂಠೀರವ ಕ್ರೀಡಾಂಗಣದ ಗಿಡ ಮರಗಳ ಮೇಲಿನ ಮಳೆ ಹನಿಗಳೂ ಗಾಳಿಗೆ ಪಟ ಪಟನೆ ನೆಲಕ್ಕುದುರುವುದನ್ನು ಕಂಡಾಗ ಪ್ರಕೃತಿಯೇ ರೋದಿಸುತ್ತಿದೆಯೇನೊ ಎಂಬಂತೆ ಭಾಸವಾಗುತ್ತಿತ್ತು.

ಕ್ರೀಡಾಂಗಣದ ಸುತ್ತ ಶನಿವಾರವೂ ಜನಸ್ತೋಮ ನೆರೆದಿತ್ತು. ಸೂರ್ಯ ಅಸ್ತಂಗತನಾಗುವ ವೇಳೆ ಹಕ್ಕಿಗಳು ಧಾವಂತದಿಂದ ಗೂಡು ಸೇರುವ ಹಾಗೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆಯಲು ತಂಡೋಪತಂಡವಾಗಿ ಕ್ರೀಡಾಂಗಣದತ್ತ ಧಾವಿಸುತ್ತಲೇ ಇದ್ದರು.

ಮಕ್ಕಳು, ಮಹಿಳೆಯರು, ವೃದ್ಧರು, ಯುವಕರು ಹೀಗೆ ಎಲ್ಲಾ ವಯೋಮಾನದವರೂ ‘ವೀರ ಕನ್ನಡಿಗನ’ ಹೆಸರು ಜಪಿಸುತ್ತಿದ್ದರು. ಕೆಲವರು ಪುನೀತ್‌ ರಾಜ್‌ಕುಮಾರ್‌ ಅವರ ಬಾಲ್ಯದ ಫೋಟೊ ಹಿಡಿದಿದ್ದರೆ, ಇನ್ನೂ ಹಲವರು ‘ರಾಜಕುಮಾರ’ ಚಿತ್ರದ ಪೋಸ್ಟರ್‌ ಹಿಡಿದು ಜೈಕಾರ ಹಾಕುತ್ತಿದ್ದರು.

ಎದೆಯ ಮೇಲೆ ಅಪ್ಪುವಿನ ನಗುಮೊಗದ ಚಿತ್ರ ಅಚ್ಚೆಹಾಕಿಸಿಕೊಂಡಿದ್ದ ಅಭಿಮಾನಿಯೊಬ್ಬ ‘ಒಮ್ಮೆ ಅಣ್ಣನನ್ನು ನೋಡಲು ಬಿಡಿ ಸಾರ್‌’ ಎಂದು ಗೋಗರೆಯುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಆತನ ಗೋಳಾಟ ನೋಡಲಾಗದ ಪೊಲೀಸರುಪಾರ್ಥಿವ ಶರೀರದ ಬಳಿ ಹೋಗಲು ಅವಕಾಶ ನೀಡಿದರು. ಶವದ ಪೆಟ್ಟಿಗೆಯಲ್ಲಿ ತ್ರಿವರ್ಣ ಧ್ವಜ ಹೊದ್ದು ಮಲಗಿದ್ದ ನಟನನ್ನು ಕಂಡೊಡನೆ ಆತನ ದುಃಖದ ಕಟ್ಟೆ ಒಡೆದಂತಿತ್ತು. ಅಯ್ಯೋ.. ಅಪ್ಪು ಬಾಸ್‌... ಎಂದು ರೋಧಿಸುತ್ತಲೇ ಆತ ನಿರ್ಗಮನ ದ್ವಾರದತ್ತ ಹೆಜ್ಜೆ ಹಾಕಿದ್ದು ಕಂಡುಬಂತು.

ಸಮಯ ಉರುಳಿದಂತೆಲ್ಲಾಅಂತಿಮ ದರ್ಶನಕ್ಕೆ ಬರುವ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗುತ್ತಲೇ ಇತ್ತು. ಹೀಗಾಗಿ ಪೊಲೀಸರು ಮೂರು ಸಾಲುಗಳ ಮೂಲಕ ಪಾರ್ಥಿವ ಶರೀರ ನೋಡಲು ವ್ಯವಸ್ಥೆ ಮಾಡಿದ್ದರು. ಮೃತ ದೇಹ ಇಟ್ಟಿದ್ದ ಶೆಡ್‌ ಸಮೀಪಿಸುತ್ತಿದ್ದಂತೆ ‘ಅಪ್ಪು ಸರ್‌ ವಿ ಲವ್‌ ಯೂ’.. ಪವರ್‌ ಸ್ಟಾರ್‌.. ಎಂಬ ಜಯಘೋಷಗಳು ಅನುರಣಿಸುತ್ತಿದ್ದವು. ಪಾರ್ಥಿವ ಶರೀರದ ಫೋಟೊ ಕ್ಲಿಕ್ಕಿಸಿಕೊಳ್ಳಲು, ವಿಡಿಯೊ ಚಿತ್ರೀಕರಿಸಲು ಹಲವರು ಮುಂದಾದರು. ಕೆಲವರು ಬ್ಯಾರಿಕೇಡ್‌ ಅನ್ನು ಗಟ್ಟಿಯಾಗಿ ಹಿಡಿದು ಕದಲದೇ ನಿಂತು ಬಿಟ್ಟರು. ಅವರನ್ನು ಸಾಗ ಹಾಕಲು ಪೊಲೀಸರು ಪರದಾಡಿದರು.

ಅಭಿಮಾನಿಗಳ ರೋದನ ಕಂಡುರಾಜ್‌ ಕುಟುಂಬ ಸದಸ್ಯರ ಕಣ್ಣುಗಳೂ ಆರ್ದ್ರಗೊಳ್ಳುತ್ತಿದ್ದವು. ಪುನೀತ್‌ ಪತ್ನಿ ಅಶ್ವಿನಿ, ಹಣೆಯ ಮೇಲೆ ಗಾಢ ವಿಭೂತಿ, ಅದರ ಮೇಲೊಂದು ಕುಂಕುಮದ ಬೊಟ್ಟು ಹಚ್ಚಿದ್ದ ಪತಿಯ ಮೊಗವನ್ನೇ ತದೇಕಚಿತ್ತದಿಂದ ನೋಡುತ್ತಾ ಗದ್ಗದಿತರಾಗುತ್ತಿದ್ದರು.

ಕ್ರೀಡಾಂಗಣದ ಸುತ್ತಲಿನ ನಾಲ್ಕು ರಸ್ತೆಗಳಲ್ಲೂ ಅಭಿಮಾನಿಗಳು ಗಿಜಿಗುಡುತ್ತಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಆಗಾಗ ಲಾಠಿ ಬೀಸುತ್ತಿದ್ದರು. ಕಾರು, ಬಸ್ಸು, ಲಾರಿಗಳು ಸಂಚರಿಸುತ್ತಿರುವುದನ್ನೂ ಲೆಕ್ಕಿಸದ ಅನೇಕರು ಲಘುಬಗೆಯಲ್ಲಿ ರಸ್ತೆ ದಾಟುತ್ತಿದ್ದರು. ಕೆಲವರು ಪಾದಚಾರಿ ಮೇಲ್ಸೇತುವೆಯ ಮೇಲೆ ನಿಂತು ಕ್ರೀಡಾಂಗಣದೊಳಗಿನ ದೃಶ್ಯ ಕಣ್ತುಂಬಿಕೊಳ್ಳಲು ಪ್ರಯತ್ನಿಸುತ್ತಿದ್ದರು. ದರ್ಶನ ಪಡೆದು ಹೊರ ಬಂದ ಹಲವರು ಪಾದಚಾರಿ ಮಾರ್ಗದ ಮೇಲೆ ಕುಳಿತು ದಣಿವಾರಿಸಿಕೊಳ್ಳುತ್ತಿದ್ದುದೂ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT