ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಥಳೀಯ ಸಂಸ್ಥೆಗಳಿಂದ ಗ್ರಂಥಾಲಯ ಕರ ದುರುಪಯೋಗ’

ಪುಸ್ತಕ ಪ್ರಾಧಿಕಾರದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನರಹಳ್ಳಿ ಬಾಲಸುಬ್ರಹ್ಮಣ್ಯ ಬೇಸರ
Last Updated 6 ಜನವರಿ 2021, 22:16 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರ ಸಂಗ್ರಹಿಸುತ್ತಿರುವ ಗ್ರಂಥಾಲಯ ಕರವನ್ನು ಸ್ಥಳೀಯ ಸಂಸ್ಥೆಗಳು ತಮಗೆ ಬೇಕಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿವೆ. ಹಾಗಾಗಿ ಈ ಕರ ನೇರವಾಗಿ ಗ್ರಂಥಾಲಯ ಇಲಾಖೆಗೆ ಸೇರುವಂತಾಗಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಆಗ್ರಹಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರವು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಮತ್ತು ಬಹುಮಾನ ಪ್ರದಾನ ಮಾಡಿ ಮಾತನಾಡಿದರು.

‘ಶೇ 6ರಷ್ಟು ಕರವನ್ನು ಗ್ರಂಥಾಲಯಕ್ಕಾಗಿ ಸರ್ಕಾರ ಸಂಗ್ರಹಿಸುತ್ತಿದ್ದು, ಇದು ಸ್ಥಳೀಯ ಸಂಸ್ಥೆಗಳಿಗೆ ಹೋಗುತ್ತಿದೆ. ಇದರಿಂದಾಗಿ ನಾವು ನೀಡುವ ಕರ ದುರುಪಯೋಗವಾಗುತ್ತಿದೆ. ಗ್ರಂಥಾಲಯ ಇಲಾಖೆಗೆ ಸುಮಾರು ₹ 500 ಕೋಟಿ ಕರ ಸಲ್ಲಬೇಕಿದೆ. ಈ
ವರ್ಷದ ಬಜೆಟ್‌ನಲ್ಲಿ ಸರ್ಕಾರವು ಗ್ರಂಥಾಲಯ ಇಲಾಖೆಗೆ ಕರದ ಹಣ ಒದಗಿಸಬೇಕು. ₹ 500 ಕೋಟಿ ಗ್ರಂಥಾಲಯ ಇಲಾಖೆಗೆ ದೊರೆತರೆ ಗ್ರಂಥಾಲಯದ ಚಿತ್ರಣವೇ ಬದಲಾಗುತ್ತದೆ. ಈ ದುರುಪಯೋಗವು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗ್ರಂಥಾಲಯದ ಪರಿಕಲ್ಪನೆ ಕೂಡ ಬದಲಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತವಾಗಬೇಕು. ಪುಸ್ತಕ ಪ್ರಾಧಿಕಾರವು ಗ್ರಂಥಪಾಲಕರಿಗೂ ಒಂದು ಪ್ರಶಸ್ತಿ ನೀಡಲು ಕ್ರಮಕೈಗೊಳ್ಳಬೇಕು’ ಎಂದರು.

ಪ್ರಾಧಿಕಾರದ ಅಧ್ಯಕ್ಷ ಎಂ.ಎನ್. ನಂದೀಶ್ ಹಂಚೆ, ‘ಬದಲಾದ ಕಾಲಘಟ್ಟದಲ್ಲಿ ಹೊಸ ಪುಸ್ತಕ ನೀತಿ ತರಬೇಕಾದ ಅಗತ್ಯ ಇದೆ. ಈ ನಿಟ್ಟಿನಲ್ಲಿ ಹಿರಿಯ ಸಾಹಿತಿಗಳ ಮತ್ತು ಮಾರ್ಗದರ್ಶಕರ ಸಲಹೆ ಪಡೆದು, ಮುಂದುವರಿಯಲಾಗುವುದು‘ ಎಂದರು.

ವಿವಿಧ ವಿಭಾಗದಲ್ಲಿ ಪ್ರಶಸ್ತಿ ಪ್ರದಾನ

‘ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ಯನ್ನು ವಿಮರ್ಶಕ ಹಾಗೂ ವಿದ್ವಾಂಸ ಡಾ. ಬಸವರಾಜ ಕಲ್ಗುಡಿ ಅವರಿಗೆ ನೀಡಿ ಗೌರವಿಸಲಾಯಿತು. ‘ಅತ್ಯುತ್ತಮ ಪ್ರಕಾಶನ ಪ್ರಶಸ್ತಿ’ಯನ್ನು ಐಬಿಎಚ್ ಪ್ರಕಾಶನದ ಎಚ್‌.ಕೆ. ಲಕ್ಷ್ಮೀನಾರಾಯಣ ಅಡಿಗ, ‘ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ಯನ್ನು ಸಿಂಧಗಿಯ ಎಂ.ಎನ್. ಪಡಶೆಟ್ಟಿ ಹಾಗೂ ಬೆಂಗಳೂರಿನ ಕೆ. ರಾಜಕುಮಾರ್, ‘ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ಯನ್ನು ಡಾ.ಬಿ.ಎಂ. ಹೆಗ್ಡೆ ಅವರಿಗೆ ಪ್ರದಾನ ಮಾಡಲಾಯಿತು.

ಇದೇ ವೇಳೆ ಪುಸ್ತಕ ಸೊಗಸು ಬಹುಮಾನವನ್ನೂ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT