ಮಂಗಳವಾರ, ಡಿಸೆಂಬರ್ 7, 2021
26 °C

DNP ನಿರ್ದೇಶನದ ಕನಸು ಬಿಚ್ಚಿಟ್ಟ ನಟ ದೇವರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹುಲಿಯಾ–2’ ಸಿನಿಮಾ ಮಾಡುವ ಆಲೋಚನೆ ಇದೆ. ನಿರ್ದೇಶನ ಮಾಡುವ ಕನಸೂ ಇದೆ. ಒಳ್ಳೆಯ ನಿರ್ಮಾಪಕರು ಸಿಕ್ಕರೆ ಖಂಡಿತ ನಿರ್ದೇಶನ ಮಾಡುತ್ತೇನೆ...’

ಇದು, ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ  ಚಿತ್ರನಟ ದೇವರಾಜ್ ಅವರು ಶನಿವಾರ ನಡೆದ ‘ಪ್ರಜಾವಾಣಿ ಸೆಲೆಬ್ರಿಟಿ ಲೈವ್‌’ನಲ್ಲಿ ಬಿಚ್ಚಿಟ್ಟ ತಮ್ಮ ಇಂಗಿತ. ಅವರು ಮಾತನಾಡಿದ್ದು ಇಲ್ಲಿದೆ.

‘ಇಳಿ ವಯಸ್ಸಿನ ಪ್ರೇಮಕಥೆ, ಹುಲಿಯಾ–2 ಹಾಗೂ ಆ್ಯಕ್ಷನ್ ಸಿನಿಮಾಗಳಿಗೆ ಮೂರು ಸ್ಕ್ರಿಪ್ಟ್‌ ಸಿದ್ಧಪಡಿಸಿದ್ದೇನೆ. ಈ ಸಿನಿಮಾಗಳಿಗೆ ಕಾಲ ಕೂಡಿಬರಬೇಕು. ಈಗಾಗಲೇ ನಿರ್ಮಾಣವನ್ನು ಪ್ರಯತ್ನಿಸಿ ಸೋತಿದ್ದೇನೆ. ಅದರಲ್ಲಿ ಕಲಿಯಬೇಕಿರುವುದು ಸಾಕಷ್ಟಿದೆ. ಹಾಗಾಗಿ, ಕೊಂಚ ಬಿಡುವು ಕೊಟ್ಟಿದ್ದೇನೆ. ಸಿನಿಮಾದ ಅಭಿನಯ ಒಂದು ಪ್ರಪಂಚವಾದರೆ, ಸಿನಿಮಾದ ವ್ಯಾಪಾರವೇ ಒಂದು ದೊಡ್ಡ ಪ್ರಪಂಚ. ಅಲ್ಲಿ ಕಲಿಕೆಯೂ ಬಹಳಷ್ಟಿದೆ.

‘ಒಬ್ಬ ಕಲಾವಿದನ ಶಕ್ತಿ ಮತ್ತು ದೌರ್ಬಲ್ಯಗಳನ್ನು ಗುರುತಿಸಲು ರಂಗಭೂಮಿ ವೇದಿಕೆ. ಸಿನಿಮಾರಂಗದಲ್ಲಿ ಕಲಾವಿದರ ಲೋಪಗಳನ್ನು ತಾಂತ್ರಿಕವಾಗಿ ಮರೆಮಾಚುವುದರಿಂದ ತಿದ್ದಿಕೊಳ್ಳುವ ಬದಲು ಸೋಮಾರಿಗಳಾಗುತ್ತೇವೆ. ರಂಗಭೂಮಿಯಲ್ಲಿ ಕಲಾವಿದನ ತಪ್ಪನ್ನು ತೋರಿಸುವುದು ಮಾತ್ರವಲ್ಲದೆ, ಅದನ್ನು ಸರಿಪಡಿಸಿಕೊಳ್ಳುವ ಅವಕಾಶಗಳೂ ಇರುತ್ತವೆ. ಆಗ ಮಾತ್ರ ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಕಲಾವಿದ ಎನಿಸಿಕೊಳ್ಳಲು ಸಾಧ್ಯ.’

‘ರಂಗಭೂಮಿಯಿಂದ ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಕಲಾವಿದನಿಗೆ ಹೆಚ್ಚಿನ ಧೈರ್ಯ, ಆತ್ಮವಿಶ್ವಾಸ ಹಾಗೂ ಹಲವು ಆಯಾಮಗಳನ್ನು ಯೋಚಿಸುವ ಶಕ್ತಿ ಬೆಳೆಯುತ್ತದೆ. ಇತ್ತೀಚೆಗೆ ಕಲಾಕ್ಷೇತ್ರದ ಮೆಟ್ಟಿಲುಗಳನ್ನು ಹತ್ತುವಾಗ ಅಲ್ಲಿ ಕಳೆದ ಕ್ಷಣಗಳು ಒಂದೊಂದೇ ಕಣ್ಣಮುಂದೆ ಬಂದವು. ರಂಗಭೂಮಿಯಲ್ಲಿ ತೊಡಗಿದ್ದ ಆ ದಿನಗಳಲ್ಲಿ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಳೆ ಕುಳಿತಿದ್ದು, ಅಲ್ಲಿದ್ದ ಕಾರಂತರ ಕ್ಯಾಂಟೀನಿನ ಬೈಟು ಚಾಯ್ ಮರೆಯಲು ಸಾಧ್ಯವಿಲ್ಲ.’ 

‘ನಾನು ಮೊದಲಿಗೆ ಅಭಿನಯಿಸಿದ ‘ತ್ರಿಶೂಲ’, ‘ಕೂಗು’ ಹಾಗೂ ‘ಸಿಕ್ಕು’ ಸಿನಿಮಾಗಳು ತೆರೆಗೆ ಬರಲೇ ಇಲ್ಲ. ನನ್ನ ಅಭಿನಯದ ‘ಹುಲಿಯಾ’ ಸಿನಿಮಾಗೆ ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ಆದರೆ, ಟಿ.ವಿ.ಗಳಲ್ಲಿ ಸಿನಿಮಾ ಪ್ರಸಾರಗೊಂಡ ನಂತರ ಹೆಚ್ಚು ಪ್ರಚಾರ ಪಡೆದುಕೊಂಡಿತು.’

‘ಸಿನಿಮಾಗಳಲ್ಲಿ ‘ಪೊಲೀಸ್’ ‍ಪಾತ್ರ ನನ್ನನ್ನು ಬಹಳಷ್ಟು ದಿನ ಹಿಡಿದಿಟ್ಟುಕೊಂಡಿತ್ತು. ಪ್ರೇಕ್ಷಕರೂ ನನ್ನನ್ನು ಪೊಲೀಸ್‌ ಪಾತ್ರದಲ್ಲೇ ಹೆಚ್ಚಾಗಿ ಆರಿಸಿಕೊಂಡಿದ್ದರು. ‘ಸರ್ಕಲ್ ಇನ್‌ಸ್ಪೆಕ್ಟರ್’ ಸಿನಿಮಾ ನಂತರ ಪೊಲೀಸ್ ಪಾತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂದು ಘೋಷಿಸಿದ್ದೆ. ಇದರ ಪರಿಣಾಮ ಸಿನಿಮಾ ಅವಕಾಶಗಳೂ ತಗ್ಗಿದ್ದವು.’

ಪೂರ್ಣ ಸಂವಾದ ವೀಕ್ಷಣೆಗೆ–facebook.com/prajavani.net

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.