ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕೇಳ್ವಿಕೆ ಇದ್ರಷ್ಟ ಹಾಡುಗಾರಿಕೆ!

ಕೊರೊನಾ ಪೂರ್ವ, ಉತ್ತರದ ಕಛೇರಿಗಳಲ್ಲಿ ಪಂ. ವೆಂಕಟೇಶ ಕುಮಾರ್
Last Updated 21 ಜನವರಿ 2021, 10:38 IST
ಅಕ್ಷರ ಗಾತ್ರ

ಕಾರ್ಯಕ್ರಮ ಆರಂಭವಾಗಲು ಇನ್ನೂ ಒಂದು ಗಂಟೆ ಸಮಯವಿತ್ತು. ಬಿಳಿ ಪೈಜಾಮಾ, ಬಿಳಿ ಕುರ್ತಾ ಹಾಕಿಕೊಂಡು, ಶಾಲು ಹೊದ್ದು ಪಂಡಿತ್‌ ವೆಂಕಟೇಶ ಕುಮಾರ್‌ ಆಗಲೇ ಕಛೇರಿಗೆ ಸಿದ್ಧರಾಗಿ ಕುಳಿತಿದ್ದರು. ಸಮಯ ಪರಿಪಾಲನೆಯ ಶಿಸ್ತಿಗೊಂದು ಶರಣು ಹೇಳುತ್ತಲೇ ಮಾತಿಗಿಳಿದೆ.

ಹೆಂಗದೀರಿ..?

ಹಿಂಗಿದ್ದೀನಿ. ಮೊದಲು ಒಂದೆರಡು ತಿಂಗಳು... ಅಗ್ದಿ ಅರಾಮನಿಸಿತ್ತು. ಆಮೇಲೆ ಆಮೇಲೆ ಸಾಕಾಯ್ತು. ಬ್ಯಾಸರಾಯ್ತು. ಈಗೀಗ ಇನ್ನೆಷ್ಟು ದಿನ ಹಿಂಗ ಅಂತ ಅನ್ನಿಸ್ಲಿಕ್ಹತ್ತದ...

ಬರಬಾರದಿತ್ತು ತಾಯಿ.. ಈ ಪಿಡುಗು... ಮೊದಮೊದಲು ಬಂದಾಗ ಪಾಠ ಕಲಿಸ್ಲಿಕ್ಹತ್ತೇದ. ಒಟ್ಗೆ ಇರೂದು, ಮನ್ಯಾಗ ಇರೂದು, ಸುಮ್ನಿರೂದು.. ಯಾಕಂದ್ರ ಸುಮ್ನಿರೂದು ಅಷ್ಟು ಸಲೀಸಲ್ಲ. ಎಲ್ಲಾರೂ ತಮ್ಮೊಳಗ ತಾವದಾರ. ಮರಳಿ ಮನಿಗೆ ಬರತಾರ ಅಂತ ಸಮಾಧಾನ ಅನಿಸಿತ್ತು. ಆದ್ರ ಯಾವಾಗ ಹತ್ರದ್ದು ಜೀವಗಳು ಹೊಂಟ್ವು.. ತಳಮಳ ಶುರು ಆಯ್ತು.

ನಾವು ಕಾಲಾಗ ಚಕ್ರ ಇದ್ದಂಗ ಸುತ್ಕೊಂತ ಇದ್ದೋರು. ಈಗ ಎಷ್ಟು ದಿನ ಒಂದೇ ಕಡೆ ಇರೂನು? ಕಲಾ ಆರಾಧಕರ ಮುಂದ ಪ್ರದರ್ಶನ ಕೊಡುವ ಸುಖವೇ ಬೇರೆ. ಆ ಆನಂದವೇ ಬೇರೆ. ಇನ್ನೆಷ್ಟು ದಿನ ಇಂಥವೇ ಕಳೆಯಬೇಕೋ ಗೊತ್ತಿಲ್ಲ.

ಹಿರಿಯ ಜೀವಿ, ಮನೋಗತವಾಗಿತ್ತು. ಆಕಾಶ ದಿಟ್ಟಿಸುತ್ತಿತ್ತು.

ಇದೇ ಪ್ರಶ್ನೆ ಉಸ್ತಾದ್‌ ಹಫೀಜ್‌ ಖಾನ್‌ ಅವರನ್ನು ಪ್ರಶ್ನಿಸಿದಾಗ... ಕಲಾವಿದರ ಬದುಕಿನ ತಾಳ ತಪ್ಪೇದ. ವರ್ಚುವಲ್‌ ಕ್ಲಾಸ್‌ ಸಣ್ಣ ಪ್ರಮಾಣದ ಪರಿಹಾರ ಹೌದು. ಆದರೆ ಕಾರ್ಯಕ್ರಮಗಳೇ ಇಲ್ಲದಿದ್ದರೆ ಬದುಕೂದು ಹೆಂಗ? ಬರೀ ಕ್ಲಾಸು ತೊಗೊಂಡು ಜೀವನ ಮಾಡೂದಂತೂ ಅಸಾಧ್ಯ ಅದ. ಲಾಕ್‌ಡೌನ್‌ ಶುರುವಾದಾಗಿನಿಂದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಹೊರತು ಪಡಿಸಿದ್ರ ಮತ್ತ ಕಲಿಯಾಕ ಬರೋರು ಕಡಿಮಿ. ಇದು ಹಿಂಗ ದಿನ ತಳ್ಳೂದಾದ್ರ... ಭಾಳ ತ್ರಾಸ ಬರ್ತದ.. ಹಿಂಗ ವರ್ಚುವಲ್‌ ಕಛೇರಿಗಳಾದರೂ ಆಯೋಜಿಸಬೇಕು. ಇಲ್ಲಾಂದ್ರ ಅರ್ಧ ಜನಕ್ಕೆ ಅವಕಾಶ ಕೊಟ್ರೂ ಸಾಕು, ಕಛೇರಿ ಕಾರ್ಯಕ್ರಮಗಳಿನ್ನು ಆರಂಭವಾಗಬೇಕು.

ಎಲ್ಲ ತಮ್ಮ ತಮ್ಮ ಎಚ್ಚರಿಕೆಯೊಳಗ ಬರೂದಾದ್ರ, ಅಂತರ ಕಾಪಾಡಿಕೊಂಡು ಬಂದ್ರ ಕಛೇರಿಗಳನ್ನು ಮಾಡೂದ್ರೊಳಗ ಏನು ತಪ್ಪದ..? ಮಂದಿಯಂತೂ ಅಡ್ಡಾಡತಾರ. ಎಲ್ಲಾ ಕಡೆಗೆ ಹೋಗ್ತಾರ. ಬರ್ತಾರ. ಕಛೇರಿಗಳು ಬ್ಯಾಡಂದ್ರ.. ನಮ್ಮಂಥ ಕಲಾವಿದರು ಏನು ಮಾಡೂನು?

ಪ್ರಜಾವಾಣಿ ನಮಗೊಂದು ವೇದಿಕೆ ಒದಗಿಸಿಕೊಟ್ಟಿತು. ಜೊತಿಗೆ ಒಂದು ಉಪಾಯನೂ ಹೇಳಿಕೊಟ್ಟದ. ಮೈಸೂರು ದಸರಾ ಮಾಡಿದ್ಹಂಗ ಬೇರೆ ಉತ್ಸವಗಳೂ ಆಗಲಿ. ಕಲಾವಿದರಿಗೆ ಅನುಕೂಲ ಆಗ್ತದ.

ಇವರೊಂದಿಗೆ ತಬಲಾ ಸಾಥ್‌ ನೀಡಲು ಬಂದಿದ್ದ ಶ್ರೀಧರ ಮಾಂಡ್ರೆ, ‘ಕೈ ಚುರುಚರು ಅಂತಿದ್ವುರಿ. ಇಲ್ಲಿ ಕೇಳುಗರು ನಮ್ಮ ಕಣ್ಮುಂದಿಲ್ಲ. ಆದ್ರ ಭಾಳ ಮಂದಿ ಕೇಳ್ತಾರ ಅನ್ನುವ ಖಾತ್ರಿಯಂತೂ ಅದ. ಬರೋಬ್ಬರಿ ಆರು ತಿಂಗಳ ನಂತರ ತಬಲಾ ಪೆಟ್ಗಿ ಮನಿಯಿಂದ ಹೊರಗ ಬಂದದ. ಇನ್ನು ಕಾರ್ಯಕ್ರಮಗಳು ಶುರು ಆಗ್ಬೇಕ್ರಿ. ಹಾಡೋರಿಗಷ್ಟೇ ಅಲ್ಲ. ಕೇಳೋರಿಗೂ ಬೇಕಾಗೇದ ಈಗ. ಕಲಾವಿದರಿಗೆ ಕಲಾ ಆರಾಧಕರಿಲ್ಲದೆ ಬದುಕೂದು ತ್ರಾಸದರಿ’ ಅನ್ನುತ್ತಲೇ ಸುಮ್ಮನಾದರು.

ತಾಳ ನುಡಿಸಲು ಬಂದಿದ್ದ ಸುಧೀಂದ್ರ ಆಚಾರ್ಯ ಅವರದ್ದೂ ಇದೇ ಕತೆ. ‘ಆಗಾಗ ದೇವಸ್ಥಾನದ ಕಾರ್ಯಕ್ರಮಗಳಾದರೂ ಸಿಗ್ತಿದ್ದವು. ಈಗ ದೇವರೂ ಅಸಹಾಯಕರಾದಂಗ ಆಗೇದ. ಕಾರ್ಯಕ್ರಮಗಳು ಶುರು ಆಗಬೇಕ್ರಿ. ನಾವೂ ಬದುಕ್ತೀವಿ. ಸಂಗೀತ ಕೇಳಿ, ಉಳಿದವರೂ...

ಮಾತುಗಳಿನ್ನೂ ಮುಗಿದಿರಲಿಲ್ಲ... ಆದರೆ ಆ ಖಾಲಿತನ.. ಆ ವಾತಾವರಣದಲ್ಲಿ ಉಳಿದೇ ಹೋಯಿತು.

ಇದಾಗಿ ಎರಡು ತಿಂಗಳಾದವು. ಮತ್ತದೇ ಸಂಗೀತದ ವಾತಾವರಣ. ಒಂದೊಂದೆ ಕುರ್ಚಿ ಬಿಟ್ಟು ಕುಂತಿದ್ರು. ಸೃಜನಾ ರಂಗಮಂದಿರದೊಳಗ. ಸಂಗೀತಾಸಕ್ರು. ಉಸ್ತಾದ್‌ ರಹಿಮತ್‌ ಖಾನ್‌ ಸ್ಮರಣೆಯ ಸಂಗೀತೋತ್ಸವ.

ಮತ್ತದೇ ಪಾರಿಜಾತ ಪುಷ್ಪದಂತೆ ಬಿಳಿ ಜುಬ್ಬಾ ಪೈಜಾಮಾದಲ್ಲಿ ಬಂದಿದ್ದ ಪಂ. ವೆಂಕಟೇಶ್‌ ಕುಮಾರ್‌ ಅಂದು ಅಗ್ದಿ ಖುಷಿಯೊಳಗಿದ್ರು. ಅವೊತ್ತು ಅವರು ಬಯಸಿದ ಕೇಳ್ವಿಕೆಯ ಸಾಲುಗಳು ಅಲ್ಲಿದ್ವು.

ಮೊದಲೆರಡು ಸಾಲಿನಾಗಿದ್ದೋರೆಲ್ಲ ಸಂಗೀತ ವಿದುಷಿ ಹಾಗೂ ಪಂಡಿತರು. ವೆಂಕಟೇಶ್‌ ಕುಮಾರ್‌ ಜೊತೆಗೆ ಗುನುಗುತ್ತಲೇ ಬಲಗೈ ತೋರುಬೆರಳು ತೋರಿ, ಶಹಾಭಾಷ್‌ಗಿರಿ ಕೊಡ್ತಿದ್ರು. ಮುಸುಕೆಳೆದುಕೊಂಡ ಮಾಸ್ಕು, ಕತ್ತಿಗಿಳಿದಿತ್ತು. ಕ್ಯಾಬಾತ್‌ ಹೈ.. ವಾಹ್‌ ವಾಹ್‌.. ಆ ವಾತಾವರಣದೊಳಗ ಉತ್ಸಾಹ ತುಂಬಿತ್ತು.

ಅಗ್ದಿ ಬೆವರು ಧಾರಾಕಾರ ಇಳೀತಿರ್ತದ. ಇವರ ಕಂಠದಿಂದ ರಾಗಗಳು ಬೆಟ್ಟ, ಗುಡ್ಡ, ಕಣಿವೆ, ನದಿಗುಂಟ ಹರಿದಾಡ್ತಿರ್ತದ. ನಮ್ಮ ಕಣ್ಮುಂದ ಆ ಸಭೆ, ಆ ಸಾಥಿಗಳು, ವೆಂಕಟೇಶ್‌ ಕುಮಾರ್‌ ಎಲ್ಲಾರೂ ನೇಪಥ್ಯಕ್ಕ ಸರೀತಾರ. ಅಗ್ದಿ ಆ ರಾಗನದಿ ನಮ್ಮನ್ನ ವ್ಯಾಪಿಸಿಕೊಳ್ತದ. ಹಂಗ ನಾವು ಕಣ್ಬಿಟ್ಟಾಗ ಬಿಳೀಬಣ್ಣದ ಕರವಸ್ತ್ರದಿಂದ ಬೆವರು ಒರಸ್ಕೊತಿದ್ರು. ಒಮ್ಮೆ ಹಾಡು ನಿಂತ್ರ ಅಲ್ಲೊಂದು ನೀರವ ಮೌನ. ಆಮೇಲೆ ಜೋರು ಕರತಾಡನ. ಅಷ್ಟು ಹೊತ್ತೂ ಅವರು ಕಣ್ಮುಚ್ಚಿ ಕೈಮುಗೀತಾರ. ಈ ಕರತಾಡನವೆಲ್ಲವೂ ತಮಗಲ್ಲ, ಸಂಗೀತಕ್ಕ ಅಂತ ಸಮರ್ಪಿಸಿಕೊಳ್ತಾರ.

ಆಮೇಲೆ ಹೇಳಿದ್ರು.. ಇಷ್ಟು ದಿನ... ಎಷ್ಟರೆ ರಿಯಾಜ್‌ ಮಾಡೂನು? ಯಾರಿಗರೆ ಹಾಡು ಹೇಳೂನು ಅನ್ನಂಗ ಆಗಿತ್ತು. ಈಗ ಸಮಾಧಾನ ಆಯ್ತು ನೋಡ್ರಿ. ಕೇಳ್ವಿಕಿ ಇದ್ರ ಗಾಯ್ಕಿಗೆ ಖುಷಿ. (ಕೇಳೋರಿದ್ರಷ್ಟೆ, ಹಾಡುಗಾರಿಕೆಗೆ ಖುಷಿ). ಆ ಖುಷಿ ಅಂದ ಅವೊತ್ತು ಅವರ ಮುಖದೊಳಗ ಸಂತೃಪ್ತ ಕಳಿ ತಂದಿತ್ತು.

ಹಂಗೂ ಹಿಂಗೂ ಆ ಕಾಲ ಕಳೀತು. ಅನ್ನುವ ಸಂತೋಷದೊಳಗ ಎಲ್ಲಾರೂ ಹೊರಹೋಗುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT