ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ನಿಲ್ಸೋದಾದ್ರೂ ಹೇಗೆ ಮಹಿಳೆಯರ ಮೇಲಿನ ಹಿಂಸೆ?

ನ. 25ರಂದು ಅಂತರರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿವಾರಣಾ ದಿನಾಚರಣೆ
Last Updated 24 ನವೆಂಬರ್ 2020, 7:25 IST
ಅಕ್ಷರ ಗಾತ್ರ
ADVERTISEMENT
""

ಒಂದೆಡೆ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸಿನಿಂದ ಮುನ್ನುಗ್ಗುತ್ತಿರುವ ಮಹಿಳೆ, ಇನ್ನೊಂದೆಡೆ ಕೌಟುಂಬಿಕ ದೌರ್ಜನ್ಯ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ, ಅತ್ಯಾಚಾರ, ಆ್ಯಸಿಡ್‌ ದಾಳಿ, ಅಶ್ಲೀಲ ವಿಡಿಯೊ ಪ್ರಚಾರ, ವರದಕ್ಷಿಣೆಗಾಗಿ ಹಿಂಸೆ... ಹೀಗೆ ವರ್ಷ ವರ್ಷಕ್ಕೂ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳು. ಇದು ದೇಶದ ಇಂದಿನ ಸ್ಥಿತಿ.

ವಿಶ್ವಸಂಸ್ಥೆಯು ನವೆಂಬರ್‌ 25ನ್ನು ಅಂತರರಾಷ್ಟ್ರೀಯ ಮಹಿಳೆಯರ ಮೇಲಿನ ದೌರ್ಜನ್ಯ ನಿವಾರಣಾ ದಿನಾಚರಣೆ ಎಂದು ಘೋಷಿಸಿದೆ. ಆದರೆ ಈ ದಿನ ಒಮ್ಮೆ ದೇಶದ ಮಹಿಳೆಯರ ಸ್ಥಿತಿಗತಿ ಬಗ್ಗೆ ಚಿಂತಿಸಿದರೆ, ವಿಷಾದ ಭಾವ ಕವಿಯುತ್ತದೆ. ನ್ಯಾಷನಲ್‌ ಕ್ರೈಮ್‌ ರೆಕಾರ್ಡ್ಸ್‌ ಬ್ಯೂರೊ ನೀಡುವ ಅಂಕಿ–ಅಂಶಗಳನ್ನು ನೋಡಿದಾಗ ಬೆಚ್ಚಿ ಬೀಳುವಂತಾಗುತ್ತದೆ. ವರ್ಷ ವರ್ಷಕ್ಕೂ ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತ ಹೋಗುತ್ತಿದೆಯೇ ಹೊರತು ಕಡಿಮೆಯಾಗಿರುವ ಉದಾಹರಣೆಗಳು ಬೆರಳೆಣಿಕೆಯಷ್ಟು ಮಾತ್ರ.

2018ರಲ್ಲಿ ಥಾಮ್ಸನ್‌ ರೈಟರ್ಸ್‌ ಫೌಂಡೇಶನ್‌ನ ಅಧ್ಯಯನ ವರದಿಯು ಮಹಿಳೆಯರ ಮೇಲಿನ ದೌರ್ಜನ್ಯ ಭಾರತದಲ್ಲೇ ಅತಿ ಹೆಚ್ಚು ಎಂದು ಗುರುತಿಸಿದೆ. ಅಫ್ಗಾನಿಸ್ತಾನ ಹಾಗೂ ಸಿರಿಯಾಗಳನ್ನೂ ಈ ವಿಷಯದಲ್ಲಿ ಮೀರಿಸಿದೆ ಎಂದು ವರದಿ ಹೇಳಿದೆ. ಮಹಿಳೆಯರ ವಿರುದ್ಧದ ಹಿಂಸೆಗಳಿಗೆ ಮಾನಸಿಕ ಅಸ್ವಸ್ಥತೆ, ಪುರುಷ ಅಹಂಕಾರ, ಮಹಿಳೆಯರ ಅಸಹಾಯಕತೆ... ಹೀಗೆ ಏನೇ ಕಾರಣಗಳಿರಲಿ, ದೇಶದಲ್ಲಿ ಜಾರಿಯಲ್ಲಿರುವ ಕಾನೂನುಗಳು ಪರಿಣಾಮಕಾರಿಯಾಗಿಲ್ಲ ಎಂಬ ಅಂಶ ಸ್ಪಷ್ಟವಾಗುತ್ತಿವೆ. ಇಂಥ ಗಂಭೀರ ಸಾಮಾಜಿಕ ಪಿಡುಗು ನಿವಾರಣೆಗೆ ಸಮಾಜದ ಎಲ್ಲ ವರ್ಗಗಳಿಂದ ಸ್ಪಂದನೆ ವ್ಯಕ್ತವಾಗಬೇಕಿದೆ. ಪಿಡುಗು ನಿವಾರಣೆಗೆ ಪರಿಹಾರೋಪಾಯವನ್ನು ತಜ್ಞರ ಸಹಾಯದಿಂದ ರೂಪಿಸಬೇಕಿದೆ.

ಎನ್‌ಸಿಆರ್‌ಬಿ ಬಿಡುಗಡೆ ಮಾಡಿರುವ ಅಂಕಿ–ಅಂಶಗಳಿಂದ ತಿಳಿದುಬರುವ ಕೆಲ ಆಘಾತಕಾರಿ ಸಂಗತಿಗಳು ಹೀಗಿವೆ:
* 2019ರಲ್ಲಿ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಒಟ್ಟು 4,05,861 ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ವರ್ಷಕ್ಕಿಂತ ಶೇ 7.3ರಷ್ಟು ಹೆಚ್ಚು.

* 1 ಲಕ್ಷ ಮಹಿಳೆಯರಲ್ಲಿ 177 ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಅಸ್ಸಾಂನಲ್ಲಿ ಅತಿ ಹೆಚ್ಚು ಮಹಿಳೆಯರ ಮೇಲಿನ ಅಪರಾಧ ಪ್ರಮಾಣ ಕಂಡುಬರುತ್ತಿದೆ. ಇದರ ನಂತರ ದೇಶದ ರಾಜಧಾನಿ ನವದೆಹಲಿಯಲ್ಲಿ 144ರಷ್ಟು ಪ್ರಮಾಣದ ಅಪರಾಧ ಕಂಡುಬಂದಿದೆ.

* ಶೇ 30.9ರಷ್ಟು ಹಿಂಸೆ ಮಹಿಳೆಯ ಪತಿ ಅಥವಾ ಸಂಬಂಧಿಗಳಿಂದಲೇ ನಡೆದಿರುವುದು.
* ದೇಶದಲ್ಲಿ ನಡೆದಿರುವ ಮಹಿಳೆಯರ ವಿರುದ್ಧದ ಪ್ರಕರಣಗಳಲ್ಲಿ ಶೇ 14.7ರಷ್ಟು ಉತ್ತರ ಪ್ರದೇಶದಲ್ಲೇ ನಡೆದಿವೆ.

ಜಗತ್ತಿನಲ್ಲೆಡೆ ಇದೆ ದೌರ್ಜನ್ಯದ ಕರಾಳ ರೂಪ

ಜಗತ್ತಿನ ಇನ್ನೂ ಕೆಲವು ದೇಶಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬೇರೆ–ಬೇರೆ ರೂಪಗಳೂ ಕಂಡು ಬರುತ್ತವೆ. ಇವುಗಳನ್ನೆಲ್ಲ ವಿಶ್ವಸಂಸ್ಥೆ ಪಟ್ಟಿ ಮಾಡಿದೆ.

* ಜಗತ್ತಿನ ಶೇ 35ರಷ್ಟು ಮಹಿಳೆಯರು ಲೈಂಗಿಕ ದೌರ್ಜನ್ಯ ಅಥವಾ ಕಿರುಕುಳಕ್ಕೆ ಒಳಗಾಗಿದ್ದಾರೆ. ಕೆಲವು ದೇಶಗಳಲ್ಲಿ ಈ ಪ್ರಮಾಣ ಶೇ 70ರಷ್ಟಿದೆ. ಇಂಥ ಹಿಂಸೆ ಎದುರಿಸಿದ ಮಹಿಳೆಯರುವ ಖಿನ್ನತೆ, ಎಚ್ಐವಿ ಸೋಂಕು, ಗರ್ಭಪಾತ, ಸಾವಿನಂಥ ಭೀಕರತೆಗೆ ಈಡಾಗಿದ್ದಾರೆ.

*48 ದೇಶಗಳು ಮಹಿಳೆಯರ ವಿರುದ್ಧ ಹಿಂಸೆ ತಡೆಯಲು ಸಂಯೋಜಿತ ಯೋಜನೆಗಳನ್ನು ಅಳವಡಿಸಿಕೊಂಡರೆ, 121 ರಾಷ್ಟ್ರಗಳು ಹಿಂಸೆಗೊಳಗಾದವರಿಗೆ ಪರಿಹಾರ ಒದಗಿಸುವ ಯೋಜನೆಗಳನ್ನು ಅನುಸರಿಸಿವೆ.

* ಜಗತ್ತಿನಲ್ಲಿ ಮನೆಯವರಿಂದಲೇ ಹತ್ಯೆಗೀಡಾಗುವ ಮಹಿಳೆಯರ ಸಂಖ್ಯೆ ದಿನಕ್ಕೆ 137 ಎಂದು ಅಂದಾಜಿಸಲಾಗಿದೆ. 2017ರಲ್ಲಿ ಜಗತ್ತಿನಾದ್ಯಂತ 87,000 ಮಹಿಳೆಯರು ಕುಟುಂಬದವರಿಂದಲೇ ಸಾವಿಗೀಡಾಗಿದ್ದಾರೆ.

* ಹಿಂಸೆಗೀಡಾದವರಲ್ಲಿ ಶೇ 40ರಷ್ಟು ಮಹಿಳೆಯರು ಸಹಾಯಕ್ಕಾಗಿ ಮೊರೆ ಇಡುವುದಿಲ್ಲ. ಉಳಿದವರಲ್ಲೂ ಹೆಚ್ಚಿನ ಮಂದಿ ಕುಟುಂಬದವರು ಇಲ್ಲವೇ ಸ್ನೇಹಿತರ ಸಹಾಯವನ್ನೇ ಪಡೆಯುತ್ತಾರೆ. ಪೊಲೀಸರು ಹಾಗೂ ಸಮಾಜಸೇವಾ ಸಂಸ್ಥೆಗಳ ಬಳಿ ಬರುವ ಪ್ರಕರಣಗಳು ಕೇವಲ ಶೇ 10ರಷ್ಟು.

* 155 ರಾಷ್ಟ್ರಗಳಲ್ಲಿ ಕೌಟುಂಬಿಕ ಹಿಂಸೆ ತಡೆಗೆ ಕಾನೂನುಗಳಿವೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ 140 ರಾಷ್ಟ್ರಗಳಲ್ಲಿ ಕಾನೂನುಗಳಿವೆ. ಕಾನೂನುಗಳಿದ್ದರೂ ಅವುಗಳ ಅನುಷ್ಠಾನವಾಗಿರುವ ಬಗ್ಗೆ ಖಾತ್ರಿಯಿಲ್ಲ.

* 2019ರಲ್ಲಿ 5 ಹೆಣ್ಣುಮಕ್ಕಳಲ್ಲಿ ಒಬ್ಬರಿಗೆ ಬಾಲ್ಯವಿವಾಹ ಆಗಿದೆ. ಸಮಾಧಾನಕರ ಸಂಗತಿ ಎಂದರೆ ಕಳೆದ ದಶಕದಲ್ಲಿ ಬಾಲ್ಯವಿವಾಹದ ಸಂಖ್ಯೆ ಇಳಿಕೆಯಾಗಿರುವುದು. ದಕ್ಷಿಣ ಏಷ್ಯಾದಲ್ಲೇ ಈ ಸಮಸ್ಯೆ ಇಳಿಕೆಯಾಗಿರುವುದು ಕಂಡುಬಂದಿದ್ದರೆ, ಸಹಾರಾದ ದಕ್ಷಿಣಕ್ಕಿರುವ ಆಫ್ರಿಕಾದ ಕೆಲ ಭಾಗಗಳಲ್ಲಿ ಈಗಲೂ ಈ ಪ್ರಮಾಣ ಹೆಚ್ಚಿದೆ.

* 20 ಕೋಟಿ ಮಹಿಳೆಯರು ಜನನಾಂಗ ಛೇದನದ ಹಿಂಸೆಗೊಳಗಾಗಿದ್ದಾರೆ. 31 ದೇಶಗಳಲ್ಲಿ ಈ ಪದ್ಧತಿ ಇನ್ನೂ ಇದ್ದು, ಅರ್ಧಕ್ಕಿಂತ ಹೆಚ್ಚು ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಕಂಡುಬರುತ್ತಿದೆ.

* 15–19 ವರ್ಷ ವಯಸ್ಸಿನ 1.5 ಕೋಟಿ ಹೆಣ್ಣುಮಕ್ಕಳು ಒತ್ತಾಯದ ಲೈಂಗಿಕ ಕ್ರಿಯೆಗೆ ಒಳಗಾಗುತ್ತಿದ್ದಾರೆ.

* 11–15 ವರ್ಷ ವಯಸ್ಸಿನ 3ರಲ್ಲಿ ಒಬ್ಬ ಬಾಲಕಿ ಶಾಲಾ ವಲಯದಲ್ಲೇ ಲೈಂಗಿಕ ಕಿರುಕುಳ ಎದುರಿಸುತ್ತಾರೆ.

* ಯುರೋಪಿನಲ್ಲಿ ಸೈಬರ್‌ ಕಿರುಕುಳ ಹೆಚ್ಚಾಗಿದ್ದು, 10ರಲ್ಲಿ ಒಬ್ಬ ಮಹಿಳೆ ಸೈಬರ್‌ ಕಿರುಕುಳ ಎದುರಿಸಿರುತ್ತಾರೆ ಎಂದು ಅಂದಾಜಿಸಲಾಗಿದೆ.

*ಮಧ್ಯಪೂರ್ವ ಹಾಗೂ ಉತ್ತರ ಆಫ್ರಿಕಾಗಳಲ್ಲಿ ಶೇ 40ರಿಂದ ಶೇ 50ರಷ್ಟು ಮಹಿಳೆಯರು ರಸ್ತೆಯಲ್ಲಿ ಲೈಂಗಿಕ ಕಿರುಕುಳ ಎದುರಿಸಿರುತ್ತಾರೆ.

*ಶೇ 82ರಷ್ಟು ಮಹಿಳಾ ಸಂಸದರು ಕೂಡ ತಮ್ಮ ಸೇವಾ ಅವಧಿಯಲ್ಲಿ ವಿವಿಧ ರೀತಿಯ ಕಿರುಕುಳ ಎದುರಿಸಿದ್ದಾರೆ.

* ಕೋವಿಡ್‌ ಸಂಕಷ್ಟ ಉದ್ಭವಿಸಿದ ಕಾರಣ ಈ ವರ್ಷದಲ್ಲಿ ಮಹಿಳೆಯರ ಮೇಲಿನ ಹಿಂಸೆ ಜಗತ್ತಿನಾದ್ಯಂತ ಇನ್ನಷ್ಟು ಹೆಚ್ಚಿದೆ ಎಂದು ವಿಶ್ವಸಂಸ್ಥೆ ಉಲ್ಲೇಖಿಸಿದೆ. ಲಾಕ್‌ಡೌನ್‌ನಿಂದಾಗಿ ಕೌಟುಂಬಿಕ ಹಿಂಸೆಯ ಪ್ರಮಾಣ ಹೆಚ್ಚಾಗಿದ್ದು, ಕೆಲವು ದೇಶಗಳಲ್ಲಿ ಮಹಿಳಾ ಸಹಾಯವಾಣಿಗೆ ಸಹಾಯಕ್ಕಾಗಿ ಬಂದ ಕರೆಗಳ ಸಂಖ್ಯೆ 5 ಪಟ್ಟು ಹೆಚ್ಚಾಗಿತ್ತು ಎಂದು ಗುರುತಿಸಿದೆ.

ಕಿತ್ತಲೆ ವರ್ಣದ ಮೂಲಕ ಜಾಗೃತಿಗೆ ಕರೆ

ಈ ವರ್ಷದ ಅಂತರರಾಷ್ಟ್ರೀಯ ಮಹಿಳೆಯರ ವಿರುದ್ಧದ ದೌರ್ಜನ್ಯ ನಿವಾರಣಾ ದಿನಾಚರಣೆಯನ್ನು ನ. 25ರಿಂದ ಡಿಸೆಂಬರ್‌ 10ರ ಮಾನವ ಹಕ್ಕುಗಳ ದಿನದವರೆಗೆ 16 ದಿನಗಳ ಅಭಿಯಾನ ನಡೆಸುವಂತೆ ವಿಶ್ವಸಂಸ್ಥೆ ಕರೆ ನೀಡಿದೆ. ‘ಜಗತ್ತಿಗೆ ಕಿತ್ತಲೆ ವರ್ಣ: ನಿಧಿ, ಸ್ಪಂದನ, ತಡೆ, ಸಂಗ್ರಹ‘ (ಆರೇಂಜ್‌ ದ ವರ್ಲ್ಡ್: ಫಂಡ್‌, ರೆಸ್ಪಾಂಡ್‌, ಪ್ರಿವೆಂಟ್‌, ಕಲೆಕ್ಟ್‌) ಎಂಬ ವಿಷಯ ನೀಡಿ, ಇವುಗಳ ಬಗ್ಗೆ ಕೆಲಸ ಮಾಡುವಂತೆ ಸಲಹೆ ನೀಡಿದೆ. ಗುರುತಿಸಲಾದ ಕೆಲವು ಕಟ್ಟಡಗಳು, ಲ್ಯಾಂಡ್‌ಮಾರ್ಕ್‌ಗಳಿಗೆ ಕಿತ್ತಳೆ ಬಣ್ಣ ಬಳಿಯುವುದು. ಆ ಮೂಲಕ ಮಹಿಳೆಯ ಮೇಲಿನ ಹಿಂಸೆ ತಡೆಯುವ ಧ್ಯೇಯವನ್ನು ಆಗಾಗ ನೆನಪಿಸುವ ಪ್ರಯತ್ನ ಮಾಡಬೇಕು ಎಂದು ವಿಶ್ವಸಂಸ್ಥೆ ತಿಳಿಸಿದೆ.

ನಾವು ಏನು ಮಾಡಬಹುದು?

ಪುರಾಣ ಕಾಲದಿಂದಲೂ ಇಲ್ಲಿಯವರೆಗೂ ಮಹಿಳೆಯರ ಮೇಲಿನ ದೌರ್ಜನ್ಯ ಎಂಬುದು ನಿವಾರಣೆಯಾಗದ ಸಾಮಾಜಿಕ ಪಿಡುಗಾಗಿ ಬೆಳೆದು ನಿಂತಿದೆ. ಇದಕ್ಕೆ ತಡೆ ಅಥವಾ ನಿವಾರಣೋಪಾಯ ಸುಲಭವಲ್ಲ. ಈಗಾಗಲೇ ಮಹಿಳೆಯರ ಮೇಲಿನ ಪ್ರತಿ ಅಪರಾಧ ತಡೆಗೂ ಕಾನೂನುಗಳು ರೂಪುಗೊಂಡಿವೆ. ಆದರೆ ಅಪರಾಧಗಳ ಸಂಖ್ಯೆ ಇಳಿಕೆಯಾಗಿಲ್ಲ. ಬಾಲ್ಯವಿವಾಹದ ಪ್ರಮಾಣದಲ್ಲಿ ಮಾತ್ರ ಇಳಿಕೆ ಕಂಡುಬಂದಿದೆ. ಉಳಿದೆಲ್ಲವೂ ವರ್ಷ ವರ್ಷವೂ ಏರಿಕೆಯ ಪ್ರಮಾಣದಲ್ಲೇ ಇವೆ.

ಕುಟುಂಬದವರ ಬೆಂಬಲ ಅತಿ ಮುಖ್ಯ

‘ಈ ಪಿಡುಗು ನಿವಾರಣೆಗೆ ಕಾನೂನಾತ್ಮಕ ಕ್ರಮಗಳ ಹೊರತಾಗಿ ಸಮಾಜದ ಸ್ಪಂದನ ಅತಿ ಅವಶ್ಯ. ಮೊದಲಿಗೆ ದೌರ್ಜನ್ಯ ನಡೆದ ಮಹಿಳೆಯ ಕುಟುಂದವರು ಅವಳಿಗೆ ಬೆಂಬಲವಾಗಿ ನಿಲ್ಲಬೇಕಾದದ್ದು ಅತ್ಯಂತ ಅವಶ್ಯ. ಈ ಬೆಂಬಲ ಸಿಗಲಿಲ್ಲ ಎಂದರೆ ದೌರ್ಜನ್ಯಕ್ಕೊಳಗಾದವಳ ಮಾನಸಿಕ ಸ್ಥೈರ್ಯ ಉಡುಗಿ ಹೋಗುತ್ತದೆ. ಅವಳಿಗೆ ನ್ಯಾಯ ಸಿಗುವ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಇಂಥ ಬಹುತೇಕ ಪ್ರಕರಣಗಳಲ್ಲಿ ಕುಟುಂಬದವರೇ ಅವಳ ಬೆಂಬಲಕ್ಕೆ ಬಾರದಿರುವುದನ್ನು ಕಾಣುತ್ತೇವೆ. ಮರ್ಯಾದೆಗೆ ಅಂಜಿ ಸುಮ್ಮನಿರುವಂತೆ ಮಾಡಿಬಿಡುತ್ತಾರೆ. ಕುಟುಂಬದವರು ಅವಳಿಗೆ ನ್ಯಾಯ ದೊರಕಿಸಲು ಎದ್ದುನಿಂತರೆ ಸಮಾಜ ಸಮರ್ಥವಾಗಿ ಹೋರಾಟ ಮಾಡಬಹುದು’ ಎನ್ನುತ್ತಾರೆ ದಾವಣಗೆರೆಯ ಜೆ.ಎಚ್‌. ಪಟೇಲ್‌ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರತಿಭಾ ಪಿ. ದೊಗ್ಗಳ್ಳಿ.

‘ದೌರ್ಜನ್ಯ ನಡೆದ ನಂತರ ಹೋರಾಟ ಮಾಡುವುದು ಬೇರೆ ವಿಷಯ. ಮೊದಲು ದೌರ್ಜನ್ಯ ನಡೆಯದಂತೆ ತಡೆಯುವ ಬಗ್ಗೆ ಸಮಾಜ ಗಂಭೀರ ಚಿಂತನೆ ನಡೆಸಬೇಕು. ಜೀವನ ಮೌಲ್ಯಗಳು, ಸಂಬಂಧಗಳು, ಮಾನವೀಯತೆ, ಪರಸ್ಪರ ಗೌರವ ನೀಡುವ ಮೌಲ್ಯಗಳನ್ನು ಮಕ್ಕಳಲ್ಲಿ ಬೇರೂರಿಸುವ ಕಾರ್ಯವನ್ನು ಆದ್ಯತೆಯಾಗಿ ಮಾಡಬೇಕಿದೆ. ದೊಡ್ಡವರಾದ ಮೇಲೆ ಬುದ್ಧಿ ಹೇಳಿ ಪ್ರಯೋಜನವಿಲ್ಲ. ಮಕ್ಕಳಿಗೆ ಶಾಲೆಗಳಲ್ಲಿ ಈಗ ಇರುವ ನೈತಿಕ ಶಿಕ್ಷಣ ಎನ್ನುವುದು ಕಾಟಾಚಾರಕ್ಕೆ ಎಂಬಂತಾಗಿದೆ. ಥಿಯರಿ ಹೇಳಿದರೆ ಮಕ್ಕಳ ಮನಸ್ಸಿಗೆ ತಟ್ಟುವುದೂ ಇಲ್ಲ. ಮೌಲ್ಯಗಳನ್ನು ಮಕ್ಕಳ ಮನಸ್ಸಿಗೆ ತಟ್ಟುವಂತೆ ಹೇಳಬೇಕಿದ್ದರೆ ಪ್ರಾಕ್ಟಿಕಲ್‌ ಆಗಿ ಹೇಳಿಕೊಡಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಅಪಘಾತಗಳಾದಾಗ ಕೈಲಾದಷ್ಟು ಸಹಾಯ ಮಾಡುವುದು.. ಹೀಗೆ ಚಿಕ್ಕ ವಯಸ್ಸಿನಲ್ಲೇ ಮಾನವೀಯ ಗುಣಗಳ ಮಹತ್ವವನ್ನು ಕಣ್ಣಾರೆ ಕಂಡಾಗ ಅವುಗಳನ್ನು ಅವರು ಜೀವನವಿಡೀ ಮರೆಯುವುದಿಲ್ಲ’ ಎಂದು ಅವರು ಹೇಳಿದರು.

‘ಮಹಿಳೆ ಆರ್ಥಿಕವಾಗಿ ಸಬಲಳಲ್ಲ ಎಂದಾದಾಗ, ಆರ್ಥಿಕವಾಗಿ ಪುರುಷನ ಮೇಲೆ ಅವಲಂಬಿತರಾದ ಸಂದರ್ಭಗಳಲ್ಲಿ ಕೌಟುಂಬಿಕ ಹಿಂಸೆ ಎನ್ನುವುದು ಹೆಚ್ಚಾಗಿ ಕಂಡುಬರುತ್ತದೆ ಎಂಬ ಬಗ್ಗೆ ಗಮನಿಸಬೇಕು. ಹೀಗಾಗಿ ಪ್ರತಿ ಹೆಣ್ಣುಮಗುವನ್ನು ಶೈಕ್ಷಣಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಗಟ್ಟಿಗೊಳಿಸಬೇಕು. ಅವಳು ಯಾವುದೇ ಸಂದರ್ಭದಲ್ಲಿ ಸ್ವಾವಲಂಬಿಯಾಗಿ ಬದುಕಲು ಸಿದ್ಧವಾಗುವಂತೆ ಮಾಡಬೇಕು. ಆಗ ಹಿಂಸೆಯನ್ನು ಅಂಥ ಮಹಿಳೆ ಸಹಿಸಿಕೊಳ್ಳುವುದಿಲ್ಲ. ದೂರು ಕೊಟ್ಟು, ಅಂಥ ಸಂಬಂಧವನ್ನೇ ಕಿತ್ತು ಹಾಕಿ ಹೊರಬರಲು ಸಿದ್ಧಳಾಗುತ್ತಾಳೆ’ ಎಂದು ಪ್ರತಿಭಾ ಪಿ. ದೊಗ್ಗಳ್ಳಿ ಅಭಿಪ್ರಾಯಪಟ್ಟರು.

ಗಂಡುಮಕ್ಕಳನ್ನೇ ಮನೆಯಲ್ಲಿ ಕೂಡಿ ಹಾಕಲಿ

‘ಅತ್ಯಾಚಾರ ನಡೆದ ಹಲವು ಸಂದರ್ಭಗಳಲ್ಲಿ ‘ಅವಳೇಕೆ ಆ ಸಮಯದಲ್ಲಿ ಹೊರಗೆ ಬಂದಿದ್ದಳು’ ಎಂಬ ಪ್ರಶ್ನೆ ಹಲವು ಬಾರಿ ಕೇಳಿಬಂದಿದೆ. ಪುರುಷರಿಗೆ ಹೊರಬರಲು ಸಮಯದ ನಿರ್ಬಂಧ ಇಲ್ಲ ಎಂದಮೇಲೆ ಮಹಿಳೆಗೂ ಇರುವ ಅಗತ್ಯವಿಲ್ಲ. ಅತ್ಯಾಚಾರ ನಡೆಸುವವರು ಗಂಡಸರಾಗಿರುವುದರಿಂದ ಅವರನ್ನೇ ಮನೆಯಲ್ಲಿ ಕೂಡಿಡುವುದು ಸೂಕ್ತ’ ಎನ್ನುತ್ತಾರೆ ದಾವಣಗೆರೆಯ ವಕೀಲರಾದ ಉಷಾ ಕೈಲಾಸದ.

‘ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ ಎಂಬ ಕಾರಣಕ್ಕೆ ಹೆಣ್ಣುಮಕ್ಕಳನ್ನು ಮನೆಯಲ್ಲೇ ಕೂಡಿಡುವ ಅಥವಾ ತಲೆತಗ್ಗಿಸಿ ನಡೆಯುವುದನ್ನು ಕಲಿ ಎಂಬ ಪೋಷಕರ ಧೋರಣೆ ಸರಿಯಲ್ಲ. ಹೆಣ್ಣುಮಕ್ಕಳನ್ನು ಸಂಗೀತ–ನೃತ್ಯ ಕಲಿಕೆಗೆ ಸೀಮಿತ ಮಾಡದೇ, ಕರಾಟೆ, ಯುದ್ಧ ಕೌಶಲಗಳನ್ನು ಕಲಿಸುವತ್ತ ಪೋಷಕರು ಸಿದ್ಧರಾಗಬೇಕು. ಯಾವುದೇ ಅಪಾಯ ಎದುರಿಸಲು ಸನ್ನದ್ಧರನ್ನಾಗಿ ಮಾಡಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಮಹಿಳಾ ದೌರ್ಜನ್ಯದ ವಿರುದ್ಧ ಕಾನೂನುಗಳು ಇದ್ದರೂ ಅವುಗಳ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಕಾರಣ ರಾಜಕೀಯದ ಕೈವಾಡ ಹೆಚ್ಚುತ್ತಿರುವುದು. ರಾಜಕಾರಣ–ಧರ್ಮ–ಜಾತಿಗಳು ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದರಿಂದಲೇ ನ್ಯಾಯಾಂಗದ ಕಾರ್ಯಗಳಿಗೆ ಅಡ್ಡಿಯಾಗಿದೆ. ಮೇಲ್ವರ್ಗದವರಿಗೆ ಒಂದು ನ್ಯಾಯ, ಕೆಳ ವರ್ಗದವರಿಗೆ ಒಂದು ನ್ಯಾಯ ಎಂಬಂತಾಗಿದೆ. ಪ್ರತಿಹೆಣ್ಣುಮಗುವಿನ ರಕ್ಷಣೆ ಸಾಧ್ಯವಿಲ್ಲ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ ಹೇಳಿಕೆ ನೀಡುತ್ತಾರೆ. ರಾಜ್ಯದ ರಕ್ಷಣೆಯ ಹೊಣೆ ಅವರದ್ದಾಗಿರುವಾಗ ಇಂಥ ಬೇಜವಾಬ್ದಾರಿ ಹೇಳಿಕೆ ನೀಡುವ ಅವರು, ಜವಾಬ್ದಾರಿ ನಿರ್ವಹಿಸಲು ಸಾಧ್ಯವಿಲ್ಲದಿರುವಾಗ ಆ ಸ್ಥಾನದಿಂದ ಇಳಿಯುವುದೇ ಸೂಕ್ತ’ ಎನ್ನುತ್ತಾರೆ ಉಷಾ ಕೈಲಾಸದ.

ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು

‘ಈ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯನ್ನು ಎರಡನೇ ದರ್ಜೆಯ ಪ್ರಜೆಯಾಗಿ ನೋಡಲಾಗುತ್ತದೆ. ಮಹಿಳೆಯರಿಗಾಗಿ ಹಲವು ಕಾನೂನುಗಳಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ. ತಪ್ಪಿತಸ್ಥರ ಜಾತಿ–ಧರ್ಮ ಮತ್ತು ಅವರ ಪ್ರಭಾವಗಳ ಆಧಾರದ ಮೇಲೆ ಕ್ರಮ ತಗೆದುಕೊಳ್ಳಲಾಗುತ್ತದೆ. ಈ ರೀತಿ ಇದ್ದಾಗ ದೌರ್ಜನ್ಯ ಮಾಡುವ ವ್ಯಕ್ತಿಗೆ ಯಾವ ಭಯವಿರಲು ಸಾಧ್ಯ’ ಎಂದು ಪ್ರಶ್ನಿಸುತ್ತಾರೆ ದಾವಣಗೆರೆಯ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ.

‘ಎನ್‌ಸಿಆರ್‌ಬಿ ವರದಿ ಪ್ರಕಾರ ಪ್ರತಿ 15 ನಿಮಿಷಗಳಿಗೊಮ್ಮೆ ಒಬ್ಬ ಹೆಣ್ಣುಮಗಳ ಮೇಲೆ ಅತ್ಯಾಚಾರ ನಡೆಯುತ್ತದೆ. ದಿನಕ್ಕೆ 90, ವರ್ಷಕ್ಕೆ 32,000 ಅತ್ಯಾಚಾರ ಪ್ರಕರಣ ದಾಖಲಾಗಿವೆ. ನಮ್ಮ ದೇಶದಲ್ಲಿ ಗಂಟೆಗೆ ಒಂದರಂತೆ ವರದಕ್ಷಿಣೆ ಸಾವುಗಳು ಸಂಭವಿಸುತ್ತವೆ. ಇಂಥ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯ ಬಗ್ಗೆ ಕಳಕಳಿ ಇರುವವರನ್ನು ನೇಮಿಸಬೇಕು. ದೂರು ಬಂದ ತಕ್ಷಣ ಜಾತಿ/ಧರ್ಮ/ಮತ್ತು ಪ್ರಭಾವ ನೋಡದೇ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ತಪ್ಪುಗಳನ್ನು ಮಾಡುವವರಿಗೆ ಭಯ ಮೂಡುತ್ತದೆ. ಹೀಗಾದಾಗ ನಾವು ಈ ಪಿಡುಗಿನಿಂದ ಹೊರಬರಬಹುದು’ ಎಂಬುದು ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT