ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಿಯಲ್ಲಿ ಸ್ಫೋಟ: ಸರ್ಕಾರದ ನಿರ್ಲಕ್ಷ್ಯವೇ ಕಾರಣ– ಸಿದ್ದರಾಮಯ್ಯ

ಕ್ವಾರಿಯಲ್ಲಿ ಸ್ಫೋಟ
Last Updated 18 ಮಾರ್ಚ್ 2021, 22:14 IST
ಅಕ್ಷರ ಗಾತ್ರ

ಬೆಂಗಳೂರು: ಶಿವಮೊಗ್ಗದ ಹುಣಸೋಡು ಹಾಗೂ ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಸಂಭವಿಸಿದ ಸ್ಫೋಟಗಳಿಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ವಿಧಾನಸಭೆಯಲ್ಲಿ ಗುರುವಾರ ನಿಯಮ 60ರಡಿ ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದ ಅವರು, ’ರಾಜ್ಯದ ಬಹುತೇಕ ಅಕ್ರಮ ಕಲ್ಲು ಕ್ವಾರಿಗಳಲ್ಲಿ ರಾಜಕೀಯ ನಾಯಕರ ಪಾಲುದಾರಿಕೆ ಇದೆ‘ ಎಂದರು.

’ಹುಣಸೋಡು ಸ್ಫೋಟದ ಬಗ್ಗೆ ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದೆ. ಆದರೆ, ಸರ್ಕಾರ ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಿ ಕೈತೊಳೆದುಕೊಂಡಿತು. ತಿಂಗಳು ಕಳೆಯುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಸ್ಫೋಟ ಸಂಭವಿಸಿತು. ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ‘ ಎಂದು ಅವರು ಪ್ರತಿಪಾದಿಸಿದರು.

ಎರಡು ಘಟನೆಗಳಲ್ಲಿ ಮೃತಪಟ್ಟ 12 ಕಾರ್ಮಿಕರ ಸಾವಿಗೆ ಯಾರು ಹೊಣೆ? ಇದನ್ನು ಸರ್ಕಾರದ ಬೇಜವಾಬ್ದಾರಿತನ ಅನ್ನದೆ ಇನ್ನೇನು ಹೇಳಬೇಕು ಎಂದೂ ಪ್ರಶ್ನಿಸಿದರು.

’ಹುಣಸೋಡಿನ ಅಕ್ರಮ ಗಣಿಗಾರಿಕೆ ಹಿಂದೆ ರಾಜಕೀಯ ನಾಯಕರ ಅಭಯಹಸ್ತವಿದೆ ಎಂದು ಬಿಜೆಪಿಯ ಆಯನೂರು ಮಂಜುನಾಥ್ ಅವರೇ ಹೇಳಿದ್ದರು. ಅದೇ ರೀತಿ ಹಿರೇನಾಗವಲ್ಲಿಯ ಅಕ್ರಮ ಗಣಿಗಾರಿಕೆಯಲ್ಲೂ ನಾಗರಾಜ ಎಂಬ ಪ್ರಭಾವಿ ರಾಜಕಾರಣಿ ಶಾಮೀಲಾಗಿದ್ದರು. ಆತನನ್ನು ಸ್ಥಳೀಯ ಜನರು ಗುಡಿಬಂಡೆ ಬಿಜೆಪಿ ನಾಗರಾಜ್ ಎಂದೇ ಕರೆಯುತ್ತಾರೆ‘ ಎಂದರು.

’ಹಿರೇನಾಗವಲ್ಲಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರನ್ನು ಆರೋಪಿಗಳಾಗಿ ಗುರುತಿಸಿ, ಕೆಲವರನ್ನು ಬಂಧಿಸಲಾಗಿದೆ. ಇದರಲ್ಲಿ ಸ್ಪೋಟದಲ್ಲಿ ಸತ್ತ 6 ಕಾರ್ಮಿಕರು ಹಾಗೂ ಒಬ್ಬ ಗಾಯಾಳುವಿನ ಹೆಸರನ್ನೂ ಸೇರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಮಾತ್ರ ಅಮಾನತು ಮಾಡಲಾಗಿದೆ. ಇನ್ನುಳಿದ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗುವುದು ಯಾವಾಗ‘ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT