ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವೇಶ್ವರ ಶ್ರೀ ವಿರುದ್ಧದ ಆರೋಪ: ದೋಷಾರೋಪ ಪಟ್ಟಿ ದೋಷಪೂರಿತವೆಂದ ಹೈಕೋರ್ಟ್

ಪುನರ್ ಪರಿಶೀಲನಾ ಕ್ರಿಮಿನಲ್‌ ಅರ್ಜಿಗಳ ವಜಾ
Last Updated 7 ಜನವರಿ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯನ್ನು ಅತ್ಯಾಚಾರ ಆರೋಪ ಪ್ರಕರಣದಿಂದ ಬಿಡುಗಡೆಗೊಳಿಸಿ ಸೆಷನ್ಸ್‌ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿದ್ದ ಪುನರ್ ಪರಿಶೀಲನಾ ಕ್ರಿಮಿನಲ್‌ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದ್ದು, ’ಪ್ರಕರಣದಲ್ಲಿನ ದೋಷಾರೋಪ ಪಟ್ಟಿಯೇ ದೋಷಪೂರಿತವಾಗಿದೆ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಸಂಬಂಧಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಮತ್ತು ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀರ್ಪು ಪ್ರಕಟಿಸಿದ್ದು, ಪೊಲೀಸರ ತನಿಖಾ ಕ್ರಮಗಳ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.

’ದೋಷಪೂರಿತ ದೋಷರೋಪಣಾ ಪಟ್ಟಿ ಆಧರಿಸಿ ನ್ಯಾಯ ಕಲಾಪಗಳನ್ನು ಮುಂದುವರಿಸಿದ್ದೇ ಆದರೆ ಅವು ನಿಷ್ಫಲವಾಗುತ್ತವೆ. ಈ ವಿಚಾರದಲ್ಲಿ ಈ ನ್ಯಾಯಾಲಯ ಸಂತ್ರಸ್ತೆಯ ವಾದವನ್ನು ಅವಗಾಹನೆಗೆ ತೆಗೆದುಕೊಳ್ಳುವ ಪ್ರಮೇಯವೇ ಉದ್ಭವವಾಗುವುದಿಲ್ಲ. ಯಾಕೆಂದರೆ, ಅಪರಾಧ ಪ್ರಕ್ರಿಯಾ ಸಂಹಿತೆ ಕಲಂ 229ರ ಅನುಸಾರ ಆರೋಪಿ ಅರ್ಜಿಯ ಪರಿಶೀಲನೆ ಮಾಡಿದಾಗ, ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಬಿಡುಗಡೆಗೊಳಿಸಿರುವುದು ಕಾನೂನು ಪ್ರಕಾರ ಸಮರ್ಥನೀಯವಾಗಿಲ್ಲ. ಯಾವುದೇ ದೃಷ್ಟಿಕೋನದಿಂದ ನೋಡಿದರೂ, ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯದ ಆದೇಶಕ್ಕೆ ಕಾನೂನಿನ ಬೆಂಬಲ ಇಲ್ಲ‘ ಎಂದು ನ್ಯಾಯಪೀಠ ತಿಳಿಸಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಭಾಗವೊಂದನ್ನು ಉದ್ಧರಿಸುತ್ತಾ ಪ್ರಕರಣವನ್ನು ವಿವರಿಸಿರುವ ನ್ಯಾಯಪೀಠ, ’ಆರೋಪಿ ಮತ್ತು ಸಂತ್ರಸ್ತೆಯ ಮಧ್ಯೆ ಅತ್ಯಂತ ನಿಕಟ ಆತ್ಮೀಯತೆ ಇದ್ದು, ಉಭಯತ್ರರ ಒಪ್ಪಿಗೆಯಿಂದಲೇ ಲೈಂಗಿಕ ಕ್ರಿಯೆ ನಡೆದಿದೆ ಎಂಬುದು ವೇದ್ಯವಾದಾಗ, ಅದರಲ್ಲಿ ಅತ್ಯಾಚಾರ ಎಂಬುದು ಕಂಡುಬರುವುದಿಲ್ಲ. ಆದಾಗ್ಯೂ, ಇಂತಹ ನಿಕಟತೆ ಅತ್ಯಾಚಾರಕ್ಕೆ ಸಮಾನವಾದದ್ದು‘ ಎಂಬ ನಿರ್ಣಯವನ್ನು ಉಲ್ಲೇಖಿಸಿದೆ.

ಪ್ರಕರಣವೇನು?: ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ರಾಮಕಥಾ ಗಾಯಕಿ 2014ರ ಆಗಸ್ಟ್‌ 17ರಂದು ಅತ್ಯಾಚಾರ ಆರೋಪ ಹೊರಿಸಿ ದೂರು ದಾಖಲಿಸಿದ್ದರು. ಈ ಕುರಿತಂತೆ ತನಿಖೆ ನಡೆಸಿದ್ದ ಸಿಐಡಿ ನ್ಯಾಯಾಲಯಕ್ಕೆ ದೋಷಾರೋಪಣೆ ವರದಿ ಸಲ್ಲಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ 54ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಜಿ.ಬಿ.ಮುದಿಗೌಡರ್ 2016ರ ಮಾರ್ಚ್ 31ರಂದು ಆದೇಶ ನೀಡಿ ಸ್ವಾಮೀಜಿಯನ್ನು ಆರೋಪಗಳಿಂದ ಬಿಡುಗಡೆಗೊಳಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸಂತ್ರಸ್ತೆ ಮತ್ತು ಪ್ರಾಸಿಕ್ಯೂಷನ್‌ ಹೈಕೋರ್ಟ್‌ನಲ್ಲಿ ಪ್ರತ್ಯೇಕ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT