ಗುರುವಾರ , ಆಗಸ್ಟ್ 18, 2022
25 °C
ಡಿಕೆ, ಸಿದ್ದರಾಮಯ್ಯ ಜತೆಗೆ ರಾಹುಲ್‌ ಗಾಂಧಿ ಚರ್ಚೆ* ಒಗ್ಗಟ್ಟಿನಿಂದ ಸಾಗಲು ಸೂಚನೆ

ಮುಸ್ಲಿಂ ಮತ ‘ಕೈ’ ತಪ್ಪುವ ಆತಂಕ ಕಾಂಗ್ರೆಸ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 2018ರ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಕಾಂಗ್ರೆಸ್‌ ಕೈ ಹಿಡಿದಿದ್ದರು. ಆದರೆ, ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನಗಳ ಬಗ್ಗೆ ಪಕ್ಷದ ಕೆಲವು ನಾಯಕರು ತಾಳಿರುವ ಮೌನದಿಂದಾಗಿ ಅಲ್ಪಸಂಖ್ಯಾತರು ದೂರವಾಗುತ್ತಿದ್ದಾರೆ ಎಂಬ ಆತಂಕವನ್ನು ಕಾಂಗ್ರೆಸ್‌ ಹೈಕಮಾಂಡ್ ವ್ಯಕ್ತಪಡಿಸಿದೆ.

ಕರ್ನಾಟಕ ವಿಧಾನಸಭೆ ಚುನಾವ ಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಲು ವಾಗಿ ಮಂಗಳವಾರ ರಾಹುಲ್ ಗಾಂಧಿ ನಿವಾಸದಲ್ಲಿ ಸಭೆ ನಡೆಯಿತು. ಸುಮಾರು ಐದು ಗಂಟೆಗಳ ವರೆಗೆ ನಡೆದ ಸಭೆ ಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೆವಾಲ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಚುನಾವಣಾ ನೀತಿ ತಂತ್ರಜ್ಞ ಸುನೀಲ್‌ ಕನುಗೋಲು ಪಾಲ್ಗೊಂಡಿದ್ದರು. 

ಈ ಸಭೆಯಲ್ಲಿ, ಕೆಪಿಸಿಸಿ ಸಾಮರ್ಥ್ಯ, ದೌರ್ಬಲ್ಯಗಳ ಜತೆಗೆ ನಾಯಕತ್ವದಲ್ಲಿನ ಒಡಕುಗಳ ಬಗ್ಗೆಯೂ ರಾಹುಲ್ 
ಪ್ರಸ್ತಾಪಿಸಿದರು. 

‘ಸಿದ್ದರಾಮಯ್ಯ ಗುಂಪು ಹಾಗೂ ಶಿವಕುಮಾರ್ ಗುಂಪು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿಲ್ಲ. ಮುಖ್ಯಮಂತ್ರಿ ಗಾದಿಗಾಗಿ ಇಬ್ಬರೂ ಜಿದ್ದಿಗೆ ಬಿದ್ದಿದ್ದಾರೆ’ ಎಂದು ಬಿಜೆಪಿ ಬಿಂಬಿಸುತ್ತಿದೆ. ಇದು ಮತದಾರರ ಮೇಲೆ ಪರಿಣಾಮ ಬೀರು ತ್ತಿದೆ. ಇದಕ್ಕೆ ಆಸ್ಪದ ನೀಡದಂತೆ ಇಬ್ಬರು ನಾಯಕರು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂಬುದಾಗಿ ರಾಹುಲ್‌ ಸೂಚಿಸಿದ್ದಾಗಿ ಮೂಲಗಳು ಹೇಳಿವೆ. 

ಕರ್ನಾಟಕದ ರಾಜಕೀಯ ಸ್ಥಿತಿಗತಿ ಕುರಿತು ಎಐಸಿಸಿ ನಡೆಸಿದ ಸಮೀಕ್ಷೆ ಯಲ್ಲಿ ಪಕ್ಷದ ಪರ ಜನಾಭಿಪ್ರಾಯ ವ್ಯಕ್ತವಾಗಿದೆ. ಅದೇ ವೇಳೆಗೆ, ಮುಸ್ಲಿಂ ಸಮುದಾಯ ಪಕ್ಷದಿಂದ ದೂರ ಸರಿಯುತ್ತಿರುವ ಬಗ್ಗೆಯೂ ಸಮೀಕ್ಷೆ ಉಲ್ಲೇಖಿಸಿದೆ. ವರದಿಯನ್ನು ಸಭೆಯಲ್ಲಿ ಸುನೀಲ್‌ ಮಂಡಿಸಿದರು.

‘ಶೇ 20ರಷ್ಟು ಮುಸ್ಲಿಂ ಮತಗಳು ಕಾಂಗ್ರೆಸ್‌ನ ಕೈ ತಪ್ಪಬಹುದು. ಹಿಜಾಬ್‌ ವಿವಾದ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾ ರಿಗಳಿಗೆ ನಿರ್ಬಂಧದಂತಹ ವಿಚಾರದಲ್ಲಿ ಅಲ್ಪಸಂಖ್ಯಾತರ ಪರವಾಗಿ ಗಟ್ಟಿ ಧ್ವನಿ ಎತ್ತಲಿಲ್ಲ. ಇದರಿಂದಾಗಿ, ಮುಸ್ಲಿಂ ಸಮುದಾಯದ ಒಲವು ಎಸ್‌ಡಿಪಿಐ ಹಾಗೂ ಎಐಎಂಐಎ ಪರ ವ್ಯಕ್ತವಾಗುತ್ತಿದೆ’ ಎಂದು ಸಮೀಕ್ಷೆ ಹೇಳಿದೆ.

‘ರಾಜ್ಯಸಭೆ ಚುನಾವಣೆ ಯಲ್ಲಿ ಜೈರಾಂ ರಮೇಶ್ ಅವರನ್ನು ಮೊದಲ ಅಭ್ಯರ್ಥಿಯಾಗಿಸುವ ಬದಲು ಮನ್ಸೂರ್ ಅಲಿಖಾನ್ ಅವರನ್ನು ಆದ್ಯತೆಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಬೇಕಿತ್ತು ಎಂಬ ಬಗ್ಗೆಯೂ ಚರ್ಚೆ ನಡೆಯಿತು’ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು