ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ರಚಿತ 'ಸರ್ವ ಜನಾಂಗದ ಶಾಂತಿಯ ತೋಟ' ಸ್ಮರಿಸಿದ ರಾಹುಲ್‌ ಗಾಂಧಿ

Last Updated 23 ಅಕ್ಟೋಬರ್ 2022, 7:10 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆಯು ರಾಜ್ಯದಲ್ಲಿ 21 ದಿನಗಳ ನಡಿಗೆಯನ್ನು ಪೂರ್ಣಗೊಳಿಸಿದೆ. ಇದರ ಬೆನ್ನಲ್ಲೇ ರಾಯಚೂರಿನ ಯರಮರಸ್‌ ಕೃಷ್ಣಾ ನದಿಯ ತಟದಿಂದ ಕರ್ನಾಟಕದ ಜನತೆಗೆ ರಾಹುಲ್‌ ಗಾಂಧಿ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.

ಮಹಾಕವಿ ಕುವೆಂಪು ಅವರು ಈ ಭೂಮಿಯನ್ನು 'ಸರ್ವ ಜನಾಂಗದ ಶಾಂತಿಯ ತೋಟ' ಎಂದು ಬಣ್ಣಿಸಿದ್ದಾರೆ. ಇದು ಖಂಡಿತವಾಗಿಯೂ ಶಾಂತಿ ಹಾಗೂ ಸಾಮರಸ್ಯದ ನಾಡು. ಯಾತ್ರೆಯ ಮೂಲಕ ಈ ಮಾತು ಮತ್ತೊಮ್ಮೆ ಸಾಬೀತಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಕರ್ನಾಟಕದ ಜನರು ಈ ಯಾತ್ರೆಗೆ ತಮ್ಮ ಅಭೂತಪೂರ್ವ ಬೆಂಬಲ ನೀಡಿ ಸ್ಪಂದಿಸಿದ್ದಾರೆ. ಅದಕ್ಕಾಗಿ ನಾವು ನಮ್ಮ ಹೃತ್ಪೂರ್ವಕ ಧನ್ಯವಾದ ಹಾಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದಿದ್ದಾರೆ.

ಶಾಂತಿಯ ತೋಟವಾದ ಕರ್ನಾಟಕವನ್ನು ಬಿಜೆಪಿಯ ದ್ವೇಷ ಮತ್ತು ದುರಾಡಳಿತದ ಪ್ರಯೋಗಾಲಯವನ್ನಾಗಿ ಮಾಡಲು ಕಾಂಗ್ರೆಸ್‌ ಪಕ್ಷ ಎಂದಿಗೂ ಬಿಡುವುದಿಲ್ಲ. ಪ್ರೀತಿ, ಶಾಂತಿ ಹಾಗೂ ಸೌಹಾರ್ದತೆಯ ಹಾದಿಯಲ್ಲಿ ಈ ಅದ್ಭುತ ರಾಜ್ಯದ ನಿಜವಾದ ಸಾಮರ್ಥ್ಯವನ್ನು ನಾವು ಅನಾವರಣಗೊಳಿಸುವ ದಿನಗಳು ಶೀಘ್ರದಲ್ಲೇ ಬರಲಿವೆ ಎಂದು ರಾಹುಲ್‌ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದೀರ್ಘ ಸಂದೇಶವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಗುರು ಬಸವಣ್ಣನವರ 'ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಹಸ್ಯ ಪಡಬೇಡ' ಎಂಬ ಮಾತನ್ನು ಉಲ್ಲೇಖಿಸಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಇಡೀ ದೇಶಕ್ಕೆ ಬೆಳವಣಿಗೆಯ ದಾರಿದೀಪವಾಗಿದ್ದ ಕರ್ನಾಟಕ ರಾಜ್ಯ ಇಂದು 40% ಕಮಿಷನ್‌ ಸರ್ಕಾರವೆಂದು ಕುಖ್ಯಾತಿ ಗಳಿಸಿದೆ. ಬಿಜೆಪಿಯ ಸೂಟು-ಬೂಟಿನ ಲೂಟಿ ಸರ್ಕಾರಕ್ಕೆ ಉದಾಹರಣೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪಾದಯಾತ್ರೆಯು ಭಾನುವಾರ ತೆಲಂಗಾಣ ಪ್ರವೇಶಿಸಿದೆ. ಈ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಭಾರತ ಧ್ವಜವನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ರೇವಂತ್‌ ಅನುಮುಲ ಅವರಿಗೆ ಹಸ್ತಾಂತರಿಸಿದರು. ಜೊತೆಯಲ್ಲಿ ಸಿದ್ದರಾಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT