ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಗಾಂಧಿಯನ್ನು ಬೆದರಿಸಲು ಬಿಜೆಪಿಯಿಂದ ವ್ಯರ್ಥ ಪ್ರಯತ್ನ: ಸಿದ್ದರಾಮಯ್ಯ

ಅಕ್ಷರ ಗಾತ್ರ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ವಿಚಾರಣೆಗೆ ಒಳಪಡಿಸಿದ್ದಕ್ಕೆ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಅವರು, ‘ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯವನ್ನು ತಮ್ಮ ರಾಜಕೀಯ ವಿರೋಧಿಗಳ ದಮನಕ್ಕಾಗಿ ಬಳಸುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ. ಇಂಥಾ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುತ್ತೇವೆ ಎಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ ಮಿಸ್ಟರ್ ನರೇಂದ್ರ ಮೋದಿ’ ಎಂದು ತಿಳಿಸಿದ್ದಾರೆ.

‘ಬ್ರಿಟಿಷರ ಗುಂಡೇಟು, ಲಾಠಿ ಏಟಿಗೆ ಬೆದರದೆ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಪಕ್ಷ ನಮ್ಮದು. ಕಾಂಗ್ರೆಸ್ ಎಂದರೆ ಅದೊಂದು ಚಳವಳಿ. ಹಿಂದೆ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಹೋರಾಡಿತ್ತು, ಇಂದು ನ್ಯಾಯಕ್ಕಾಗಿ ಹೋರಾಡಲಿದೆ’ ಎಂದು ಹೇಳಿದ್ದಾರೆ

‘ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ನ್ಯಾಷನಲ್ ಹೆರಾಲ್ಡ್ ಎಂಬ ಪತ್ರಿಕೆಯ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ, ತನಿಖೆಯ ನೆಪದಲ್ಲಿ ನಮ್ಮ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಬೆದರಿಸಲು ವ್ಯರ್ಥ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಟ್ವೀಟಿಸಿದ್ದಾರೆ.

‘ಬಿಜೆಪಿಯವರು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಧ್ವನಿಯನ್ನು ಅಡಗಿಸಲು ಹೊರಟರೆ, ನಮ್ಮೊಂದಿಗೆ ಈ ದೇಶದ ಜನತೆ, ಸಂವಿಧಾನ, ನ್ಯಾಯಾಂಗ ವ್ಯವಸ್ಥೆ ಇದೆ. ಬಿಜೆಪಿಯ ದಬ್ಬಾಳಿಕೆಗೆ ಮಣಿದು, ಹೋರಾಟಕ್ಕೆ ಬೆನ್ನು ತೋರುವವರು ನಾವಲ್ಲ’ ಎಂದು ತಿಳಿಸಿದ್ದಾರೆ

‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಎಂದಿಗೂ ಪಾಲ್ಗೊಳ್ಳದ, ತ್ಯಾಗ, ಬಲಿದಾನದ ಅರ್ಥವೇ ಗೊತ್ತಿರದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಪಕ್ಷದ ದೇಶಪ್ರೇಮವನ್ನು ಪ್ರಶ್ನಿಸುವ ಯಾವ ನೈತಿಕತೆ ಇದೆ?’ ಎಂದು ಪ್ರಶ್ನಿಸಿದ್ದಾರೆ.

‘1942 ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಹೆಡಗೇವಾರ್, ಗೋಲ್ವಾಲ್ಕರ್ ಅವರು ಬ್ರಿಟಿಷರ ಜೊತೆ ಸೇರಿ ಸಂಚು ರೂಪಿಸಿ ಚಳವಳಿಯನ್ನು ಹತ್ತಿಕ್ಕಲು ಯತ್ನಿಸಿದ್ದನ್ನು ಈ ದೇಶದ ಜನ ಮರೆತಿಲ್ಲ’ ಎಂದು ಟೀಕಿಸಿದ್ದಾರೆ.

‘ನರೇಂದ್ರ ಮೋದಿ ಅವರು ಹೇಳುವ ‘ನ ಖಾವೂಂಗ, ನಖಾನೇದೂಂಗ’ ನಿಜವೇ ಆಗಿದ್ದರೆ ಶೇ 40 ಕಮಿಷನ್ ಲೂಟಿ ಮಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಸಾಲು ಸಾಲು ಹಗರಣಗಳ ಕುರಿತು ಇ.ಡಿ, ಐ.ಟಿ ತನಿಖೆ ನಡೆಸಲಿ’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ನಮ್ಮ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್‌ನ ಅಸಂಖ್ಯ ಕಾರ್ಯಕರ್ತರು, ಕೋಟ್ಯಂತರ ಭಾರತೀಯರು ಇದ್ದಾರೆ. ನಮ್ಮೆಲ್ಲರ ಧ್ವನಿಯನ್ನು ಹತ್ತಿಕ್ಕಲು ನಿಮ್ಮಿಂದ ಸಾಧ್ಯವೇ?’ ಎಂದು ಕೇಳಿದ್ದಾರೆ.

‘ಸದಾಕಾಲ ಬಿಜೆಪಿಯ ರಾಜಕೀಯ ವಿರೋಧಿಗಳನ್ನೇ ಗುರಿಯಾಗಿರಿಸಿಕೊಂಡು ದಾಳಿ ಮಾಡುವ ಇ.ಡಿ ಹಾಗೂ ಐ.ಟಿ ಇಲಾಖೆಗಳನ್ನು ಬಿಜೆಪಿ ಪಕ್ಷದ ಜೊತೆಗೆ ವಿಲೀನ ಮಾಡಿಬಿಡಿ. ನೀವು ಅಧಿಕಾರಕ್ಕೆ ಬಂದಮೇಲೆ ಇವು ಸ್ವಾಯತ್ತ ಸಂಸ್ಥೆಗಳಂತೆ ಒಮ್ಮೆಯಾದರೂ ಕೆಲಸ ಮಾಡಿವೆಯೇ ಮಿಸ್ಟರ್ ನರೇಂದ್ರ ಮೋದಿ?’ ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT