ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣಪುರ ನಾಲೆ ಕಾಮಗಾರಿಗಳ ಸುಳ್ಳು ಲೆಕ್ಕ ನೀಡಿ ₹800 ಕೋಟಿ ಲೂಟಿ: ಸಿದ್ದರಾಮಯ್ಯ

ಅಕ್ಷರ ಗಾತ್ರ

ಬೆಂಗಳೂರು: ರಾಯಚೂರು ಜಿಲ್ಲೆಯ ಲಿಂಗಸೂಗೂರು ಹಾಗೂ ದೇವದುರ್ಗ ತಾಲ್ಲೂಕುಗಳ ನಾರಾಯಣಪುರ ಬಲದಂಡೆ ನಾಲೆಯ ಕಾಮಗಾರಿಗಳ ಬಗ್ಗೆ ಸುಳ್ಳು ಲೆಕ್ಕ ತೋರಿಸಿ ಸುಮಾರು ₹800 ಕೋಟಿ ಲೂಟಿ ಮಾಡಲಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಹಗರಣದ ನೈತಿಕ ಹೊಣೆ ಹೊತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ನಾಲೆಯ ಕಾಮಗಾರಿಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಸದನ ಸಮಿತಿಯ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಹೊಸ ಕಾಮಗಾರಿ ನಡೆಸದೆ ಹಳೆಯ ಕಾಮಗಾರಿಗಳನ್ನೇ ತೋರಿಸಿ ಸುಮಾರು ₹800 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆಸಲಾಗಿದೆ. ಹಾಗಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಈ ಹಗರಣದ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಸ್ಥಳ ಪರಿಶೀಲನೆಗೆ ತೆರಳಿದ್ದ ಅಂದಾಜು ಸಮಿತಿಯ ಸದಸ್ಯರನ್ನು ಕಾಮಗಾರಿ ಸ್ಥಳಕ್ಕೆ ತೆರಳಲು ಅವಕಾಶ ನೀಡದೆ ಅವರ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ ಗುತ್ತಿಗೆದಾರ ಹಾಗೂ ಆತನ ಬೆಂಬಲಿಗರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ನಾರಾಯಣಪುರ ಬಲದಂಡೆ ಕಾಲುವೆಯ 1 ರಿಂದ 15ರ ವರೆಗಿನ ವಿತರಣಾ ನಾಲೆಗಳ ಆಧುನೀಕರಣಕ್ಕಾಗಿ ₹828 ಕೋಟಿ ಹಾಗೂ 16 ರಿಂದ 18 ವಿತರಣಾ ನಾಲೆಗಳ ಆಧುನೀಕರಣದ ಅಂದಾಜು ವೆಚ್ಚ ₹791 ಕೋಟಿ ಸೇರಿದಂತೆ ಒಟ್ಟು ₹1,619 ಕೋಟಿ ಟೆಂಡರ್‌ ಕರೆಯಲಾಗಿದೆ. ಈ ಎರಡೂ ಕಾಮಗಾರಿಗಳ ಟೆಂಡರ್‌ ಪಡೆದವರು ಎನ್.ಡಿ ವಡ್ಡರ್. ಇವರು ಲಿಂಗಸೂಗೂರಿನ ಮಾಜಿ ಶಾಸಕರಾದ ಮಾನಪ್ಪ ವಜ್ಜಲ್ ಅವರ ಸಹೋದರ. ತಮ್ಮ ಸಹೋದರನ ಹೆಸರಿನಲ್ಲಿ ಮಾಜಿ ಶಾಸಕರೇ ಕಾಮಗಾರಿ ನಡೆಸುತ್ತಿದ್ದಾರೆ ಎಂಬ ವರದಿ ಪ್ರಸಾರವಾಗಿದೆ’ ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಈ ಹಿಂದೆ ತುಂಬಿಸಲಾಗಿರುವ ಮಣ್ಣನ್ನೇ ತೋರಿಸಿ, ಕಾಮಗಾರಿ ನಡೆಸಲಾಗಿದೆ ಎಂದು ಈ ವರೆಗೆ ₹425 ಕೋಟಿ ಬಿಲ್ ಪಡೆಯಲಾಗಿದ್ದು, ಅರಣ್ಯ ತೆರವು, ಮುರಮ್ ಹಾಕುವುದು ಹೀಗೆ ಇನ್ನೂ ಹಲವು ವಿಧದಲ್ಲಿ ಸುಳ್ಳು ಲೆಕ್ಕ ನೀಡಿ ಸುಮಾರು ₹800 ಕೋಟಿ ಲೂಟಿ ಹೊಡೆಯಲಾಗಿದೆ. ಈ ಮೊದಲೇ ಮಣ್ಣು ತುಂಬಿಸುವ ಕಾರ್ಯ ಮಾಡಿ ಮುಗಿಸಿರುವುದರಿಂದ ಈಗ ಮತ್ತೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಣ್ಣು ತುಂಬಿಸುವ ಅಗತ್ಯವೇನಿದೆ? ಇಲ್ಲಿ ತೋರಿಸುತ್ತಿರುವ ಲೆಕ್ಕ ಸುಳ್ಳಿನಿಂದ ಕೂಡಿದೆ ಎಂಬ ವರದಿಯನ್ನು ಮುಖ್ಯಮಂತ್ರಿಗಳ ಆದೇಶದ ಮೇರೆಗೆ ರಚನೆಯಾದ ಸಮಿತಿ ನೀಡಿದೆ’ ಎಂದು ಅವರು ಹೇಳಿದ್ದಾರೆ.

‘ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತಿದ್ದು ಜನರ ತೆರಿಗೆ ಹಣದ ದುರ್ಬಳಕೆಗೆ ಅವಕಾಶ ನೀಡದೆ, ರಾಜ್ಯ ಬಿಜೆಪಿ ಸರ್ಕಾರ ಈ ಕೂಡಲೇ ಬಿಡುಗಡೆಯಾದ ಬಿಲ್ ಹಣವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಬೇಕು, ಜೊತೆಗೆ ಬಾಕಿ ಬಿಲ್ ಅನ್ನು ತಡೆಹಿಡಿಯಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT