ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲುಷಿತ ನೀರು: 6 ಜನ ಸತ್ತರೂ ಸುಧಾರಿಸದ ನೀರು ಶುದ್ಧೀಕರಣ ವ್ಯವಸ್ಥೆ

Last Updated 15 ಜೂನ್ 2022, 20:10 IST
ಅಕ್ಷರ ಗಾತ್ರ

ರಾಯಚೂರು: ಇಲ್ಲಿನ ಜನರಿಗೆ ನಗರಸಭೆ ಪೂರೈಸುವ ಕುಡಿಯುವ ನೀರು ಬಣ್ಣಬಣ್ಣಗಳಿಂದ ಕೂಡಿದೆ! ಕೊಳೆಗೇರಿ ಪ್ರದೇಶದ ಜನರು ಇದೇ ನೀರು ಕುಡಿದು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಈಗಾಗಲೇ ಆರು ಮಂದಿ ಮೃತಪಟ್ಟಿದ್ದಾರೆ.

ತುಂಗಭದ್ರಾ ನದಿಯಿಂದ ಕಾಲುವೆ ಮೂಲಕ ರಾಂಪುರ ಕೆರೆಯಲ್ಲಿ ಸಂಗ್ರಹವಾಗುವ ನೀರು ತಿಳಿ ನೀಲಿ ಬಣ್ಣದಿಂದ ಕೂಡಿದೆ. ಕೆರೆಯಿಂದ ಶುದ್ಧೀಕರಣ ಘಟಕಕ್ಕೆ ಹರಿಯುವ ನೀರು ತಿಳಿ ಹಸಿರು ಬಣ್ಣಕ್ಕೆ ತಿರುಗುತ್ತದೆ. ಅಲ್ಲಿಂದ ಓವರ್‌ಹೆಡ್‌ ಟ್ಯಾಂಕ್‌ಗಳಿಗೆ ತುಂಬಿಸಲಾಗುತ್ತದೆ. ಅಲ್ಲಿಂದ ಮನೆಗಳಿಗೆ ತಲುಪುವಷ್ಟರಲ್ಲಿ ನೀರು ಹಳದಿ ಹಾಗೂ ಗಾಢ ಹಸಿರು ಬಣ್ಣಕ್ಕೆ ತಿರುಗಿರುತ್ತದೆ.

ಕಲುಷಿತ ನೀರು ಪೂರೈಕೆಯಿಂದ ನಗರದಲ್ಲಿ 15 ದಿನಗಳ ಅಂತರದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ನಗರಸಭೆ ₹10 ಲಕ್ಷ ಪರಿಹಾರ ಘೋಷಿಸಿದ್ದು, ಮೂರು ಕುಟುಂಬಕ್ಕೆ ಇದು ತಲುಪಿದೆ.

‘ಮೇಲ್ನೋಟದ ಪರಿಶೀಲನೆ’

ರಾಯಚೂರು ನಗರದಲ್ಲಿ ಕಲುಷಿತ ನೀರು ಪೂರೈಕೆಯಾಗಲು ಕಾರಣಗಳೇನು ಎಂಬುದನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೇಲ್ನೋಟಕ್ಕೆ ಮಾತ್ರ ಪರಿಶೀಲಿಸುತ್ತಿದ್ದಾರೆ.

‘ನಗರದ 33 ಓವರ್‌ಹೆಡ್‌ ಟ್ಯಾಂಕ್‌ಗಳ ನಿರ್ವಹಣೆಗೆ ಸಿಬ್ಬಂದಿಯಿಲ್ಲ. ನೀರು ಶುದ್ಧೀಕರಣ ಘಟಕದಲ್ಲಿ ತರಬೇತಿ ಪಡೆದ ಸಿಬ್ಬಂದಿಯಿಲ್ಲ. ಎಲ್ಲಿ ನೀರು ಕೊಡಬೇಕು ಮತ್ತು ಕೊಡಬಾರದು ಎಂದು ನೀರಿನ ಹೆಸರಿನಲ್ಲಿ ರಾಜಕೀಯ ನಡೆಯುತ್ತದೆ. ನಮಗೆ ಶುದ್ಧ ನೀರು ಪೂರೈಸುವ ಜವಾಬ್ದಾರಿಯನ್ನು ಯಾರೂ ತೆಗೆದುಕೊಳ್ಳುತ್ತಿಲ್ಲ’ ಎಂದು ಜನರು ಬೇಸರ ವ್ಯಕ್ತಪಡಿಸುತ್ತಾರೆ.

ಮನೆಗಳಲ್ಲಿ ನೀರು ಸಂಗ್ರಹಿಸಿದಾಗ ಹಳದಿಯಾಗಿ ಕಾಣುವ ನೀರು
ಮನೆಗಳಲ್ಲಿ ನೀರು ಸಂಗ್ರಹಿಸಿದಾಗ ಹಳದಿಯಾಗಿ ಕಾಣುವ ನೀರು

ಸ್ವಚ್ಛತೆಗೆ ಸೀಮಿತ

ಶುದ್ಧ ನೀರು ಪೂರೈಕೆಯ ಸಮಗ್ರ ಬದಲಾವಣೆಗೆ ನಗರಸಭೆ ಮುಂದಾಗುತ್ತಿಲ್ಲ. ‘ಶುದ್ಧೀಕರಣ ಘಟಕ ಮತ್ತು ಓವರ್‌ಹೆಡ್‌ ಟ್ಯಾಂಕ್‌ಗಳಿಂದ ಹೂಳೆತ್ತುವ ಕಾರ್ಯಕ್ಕೆ ಮಾತ್ರ ನಗರಸಭೆ ಸೀಮಿತವಾಗಿದೆ. ಶುದ್ಧೀಕರಣ ಘಟಕದ ಜವಾಬ್ದಾರಿ ವಹಿಸಿಕೊಳ್ಳಲು ನಗರಸಭೆ ಎಂಜಿನಿಯರುಗಳು ಹಿಂದೇಟು ಹಾಕುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

24X7 ನೀರಿನ ಯೋಜನೆ ಏನಾಯಿತು?

ರಾಯಚೂರು ನಗರಕ್ಕೆ 24X7 ನೀರು ಪೂರೈಸಲು ₹95 ಕೋಟಿ ವೆಚ್ಚದ ಯೋಜನೆ 2016ರಲ್ಲಿ ಆರಂಭವಾಯಿತು. ಆದರೆ, ಇನ್ನೂ ಮುಕ್ತಾಯವಾಗಿಲ್ಲ. ಶೇ 30 ರಷ್ಟು ಕಾಮಗಾರಿ ಪೂರ್ಣಗೊಳಿಸದೆ ಕಂಪೆನಿ ಕೈಚೆಲ್ಲಿ ಹೋಗಿದ್ದರೂ ಆ ಬಗ್ಗೆ ಅಧಿಕಾರಿಗಳು, ರಾಜಕಾರಣಿಗಳು ಗಮನ ನೀಡುತ್ತಿಲ್ಲ ಎಂಬ ದೂರುಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT