ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮುಂದುವರಿದ ವರುಣನ ಅಬ್ಬರ: ತಪ್ಪದ ಆತಂಕ

ಉತ್ತರ ಕರ್ನಾಟಕದಲ್ಲಿ ಮುಂದುವರಿದ ಮಳೆ *ಮೈಸೂರು ಭಾಗದಲ್ಲಿ ತುಸು ಬಿಡುವು
Last Updated 6 ಸೆಪ್ಟೆಂಬರ್ 2022, 22:23 IST
ಅಕ್ಷರ ಗಾತ್ರ

ಹುಬ್ಬಳ್ಳಿ/ಧಾರವಾಡ: ಧಾರಾಕಾರ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಬೆಣ್ಣೆಹಳ್ಳದಲ್ಲಿ ಪ್ರವಾಹ ಬಂದಿದೆ. ಹಳ್ಳದಂಚಿನಲ್ಲಿರುವ ಕಿರೇಸೂರು, ಹೆಬಸೂರು, ಇಂಗಳಹಳ್ಳಿ ಸೇರಿದಂತೆ ಕೆಲ ಗ್ರಾಮಗಳು ಜಲಾವೃತಗೊಂಡಿವೆ.

ಕಿರೇಸೂರು ಗ್ರಾಮದಲ್ಲಿನ ದೇವಸ್ಥಾನ, ಪಂಚಾಯಿತಿ ಆವರಣದಲ್ಲಿಮಂಡಿಯುದ್ದ ನೀರು ನಿಂತಿದೆ. ಹೆಬಸೂರಿ
ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಜಲಾವೃತಗೊಂಡಿದ್ದವು. ಧಾರವಾಡ ಜಿಲ್ಲೆಯ ಪ್ರಸಿದ್ಧ ಅಮೃತೇಶ್ವರ ದೇಗುಲ ಜಲಾವೃತವಾಗಿದೆ. ನವಲಗುಂದ–ರೋಣ ಸಂಪರ್ಕ ಕಡಿತಗೊಂಡಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರು ಯಲ್ಲಮ್ಮ ದೇಗುಲ ಜಲಾವೃತಗೊಂಡಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಳ್ಳಿಕೇರಿ ನಾಗವ್ವ (50) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.ಪತ್ತೆಗೆ ಶೋಧ ನಡೆದಿದೆ.

ಲಕ್ಷ್ಮೇಶ್ವರ ತಾಲ್ಲೂಕಿನ ಇಟ್ಟಿಗೇರಿಯಲ್ಲಿ ಮನೆ ಜಲಾವೃತಗೊಂಡಿದ್ದರಿಂದ ಬೇಸತ್ತ ಮಹಿಳೆ ಜಿಲ್ಲಾಧಿಕಾರಿ ಎದುರೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದರು. ಸ್ಥಳೀಯರು ಆಕೆಯನ್ನು ರಕ್ಷಿಸಿದರು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ಯಲ್ಲಿ ಅಗಸ್ತ್ಯ ತೀರ್ಥ ಹೊಂಡ ಕೋಡಿ ಬಿದ್ದಿದ್ದರೆ, ತಾಳಿಕೋಟೆ–ವಿಜಯಪುರ ಹಾಗೂ ತಾಳಿಕೋಟೆ –ಹಡಗಿನಾಳ ಸೇತುವೆಗಳು ಜಲಾವೃತವಾಗಿದ್ದವು.

ವೇದಾವತಿಯಲ್ಲಿ ಪ್ರವಾಹ

ಚಿತ್ರದುರ್ಗ: ಜಿಲ್ಲೆಯಲ್ಲಿ ವಾಣಿವಿಲಾಸ ಜಲಾಶಯ ಕೋಡಿ ಬಿದ್ದಿದ್ದು, ವೇದಾವತಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ಪರಿಣಾಮವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹಿರಿಯೂರು ನಗರದಲ್ಲಿ 30 ಮನೆಗಳು ಸಂಪೂರ್ಣ ಜಲಾವೃತವಾಗಿವೆ. ತವಂದಿ ಗ್ರಾಮದ ಕೆರೆಯ ಕೋಡಿ ಬಿದ್ದಿದೆ. ಒಟ್ಟು 6,267 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ.


ಅಂತ್ಯಕ್ರಿಯೆಗೆ ಅಡ್ಡಿ

ಕಡೂರು: ದಾರಿ ಜಲಾವೃತ ಗೊಂಡ ಕಾರಣ ತಾಲ್ಲೂಕಿನ ಚಿಕ್ಕ ದೇವನೂರಿನ ಎಸ್. ಬೊಮ್ಮೇನಹಳ್ಳಿಯಲ್ಲಿ ಶವ ಸಾಗಿಸಲಾರದೇ ಕುಟುಂಬ ದವರು ಪರದಾಡಿದ್ದಾರೆ. ಪ್ರಮೋದ್‌ ಸೋಮವಾರ ಮೃತಪಟ್ಟಿದ್ದರು.

ಮಂಡಿಯ ವರೆಗೆ ಹರಿಯುತ್ತಿದ್ದ ನೀರಿನಲ್ಲೇ ಶವ ಪೆಟ್ಟಿಗೆ ಹೊತ್ತು ಒಯ್ದರು.

ತಗ್ಗಿದ ಅಬ್ಬರ

ಮೈಸೂರು: ಮೈಸೂರು ಭಾಗದ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗಿನಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿ ಸುಧಾರಿಸಿದೆ.

ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯಲ್ಲಿ ಸೋಮವಾರ ರಾತ್ರಿ ದೊಡ್ಡರಂಗನಾಥನ ಕೆರೆ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಎಲೆಕೊಪ್ಪ ಮತ್ತು ಕಂಚಿಕೋಟೆ ಗ್ರಾಮದ ಕೆರೆಗಳ ಏರಿ ಒಡೆದಿವೆ.

ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನಲ್ಲಿ 50 ವರ್ಷಗಳ ನಂತರ ಮೊದಲ ಬಾರಿಗೆ ಸುವರ್ಣಾವತಿ ನದಿ ನೀರು ಯಳಂದೂರು ಪಟ್ಟಣದ ಹಲವೆಡೆ ಆವರಿಸಿತ್ತು.ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ‘ಆರೆಂಜ್ ಅಲರ್ಟ್’ ಘೋಷಿಸಿದೆ.

ನಂದಿ ಬೆಟ್ಟದಲ್ಲಿ ಮಣ್ಣು ಕುಸಿತ

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿಬೆಟ್ಟದ ಕಣಿವೆ ಬಸವೇಶ್ವರ ದೇಗುಲದ ಬಳಿಯ ‘ಕಣಿವೆ’ ಪ್ರದೇಶದ ಒಂದು ಬದಿಯಲ್ಲಿ ಭೂಮಿ ಕುಸಿದಿದೆ. ನಂದಿಗಿರಿಧಾಮದ ಅಲ್ಲಲ್ಲಿ ಸಣ್ಣ ಮಟ್ಟದಲ್ಲಿ ಮಣ್ಣು ಕಳಚಿದೆ.

ಸುಲ್ತಾನ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ಮಣ್ಣು ಕುಸಿದಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಮಣ್ಣು ತೆರವುಗೊಳಿಸುವ ಕಾಮಗಾರಿ ನಡೆಯುತ್ತಿದೆ.

ಮಳೆ ಮುಂದುವರಿದರೆ ಮತ್ತಷ್ಟು ಭೂಮಿ ಕುಸಿಯುವ ಆತಂಕ ಎದುರಾಗಿದೆ. ಕೊತ್ತನೂರಿನಲ್ಲಿ ಅಪಾರ ಪ್ರಮಾಣದ ನೀರು ಮನೆಗಳಿಗೆ ನುಗ್ಗಿದೆ. ಶಾಲೆ, ಡೇರಿ ಆವರಣ ಮುಳುಗಿದೆ.

ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ತಿರುಮಲಶೆಟ್ಟಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 40 ಜನರನ್ನು ರಕ್ಷಣಾ ತಂಡ ಕಾಪಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT